ಮಂಗಳೂರು: 'ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಬುಧವಾರದಿಂದಲೇ ಜಾರಿಯಾಗಿದೆ. ಆದರೆ, ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ, ಕಂಬಳ, ಕೋಲ, ನೇಮ ಹಾಗೂ ಇತರ ಧಾರ್ಮಿಕ ಆಚರಣೆಗಳನ್ನು ನಡೆಸುವುದಕ್ಕೆ ನಿರ್ಬಂಧ ಇಲ್ಲ' ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಸ್ಪಷ್ಟಪಡಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಯಾವುದೇ ಧರ್ಮಗಳ ಧಾರ್ಮಿಕ ಆಚರಣೆಗಳಿಗೂ ನೀತಿ ಸಂಹಿತೆ ಅನ್ವಯವಾಗದು. ಇಂತಹ ಕಾರ್ಯಕ್ರಮಗಳ ಸಲುವಾಗಿ ಬ್ಯಾನರ್, ಬಂಟಿಂಗ್ಸ್ ಅಳವಡಿಸಲು, ಧ್ವನಿವರ್ಧಕ ಬಳಸಲು ಆಯಾ ಪ್ರದೇಶದ ಚುನಾವಣಾಧಿಕಾರಿಯಿಂದ ಅಥವಾ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ನೂರಾರು ಜನ ಸೇರಿಸುವ ಮದುವೆ, ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗೆ ಮೊದಲೇ ಮಾಹಿತಿ ನೀಡಬೇಕು. ಕೋಲ, ನೇಮ, ಕಂಬಳ, ಮದುವೆ... ಮೊದಲಾದ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು ಅಥವಾ ಕಾರ್ಯಕರ್ತರು ಭಾಗವಹಿಸಿ ಚುನಾವಣಾ ಪ್ರಚಾರಕ್ಕೆ, ಅದನ್ನು ದುರುಪಯೋಗಪಡಿಸಿಕೊಂಡರೆ, ಅತವಾ ಮತದಾರರ ಓಲೈಕೆ ಮಾಡಿದ್ದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ದೂರು ನೀಡಲು ಸಿ- ವಿಜಿಲ್ ಆ್ಯಪ್: ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಸಿ- ವಿಜಿಲ್ ಮೊಬೈಲ್ ಆಪ್ ಬಳಸಬಹುದು. ಈ ಆ್ಯಪ್ ಮೂಲಕ ಫೋಟೊ ಹಾಗೂ ವಿಡಿಯೊ ಕಳುಹಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿ ಸಾರ್ವಜನಿಕರು ಲಿಖಿತವಾಗಿ ದೂರು ನೀಡಬಹುದು. ಸಹಾಯವಾಣಿಗೂ (ಶುಲ್ಕರಹಿತಸಂಖ್ಯೆ 1950) ಮಾಹಿತಿ ನೀಡಬಹುದು. ದೂರು ಬಂದ 2 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜಕೀಯ ಪಕ್ಷಗಳು ಚಮ್ಮ ಚುನಾವಣಾ ಪ್ರಚಾರಕ್ಕಾಗಿ ಸ್ಥಳ, ವೇದಿಕೆ ಅಥವಾ ತಾರಾ ಪ್ರಚಾರಕರನ್ನು ಕರೆಸಲು ಬಳಸುವ ಹೆಲಿಪ್ಯಾಡ್‌ಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲಾಗಿದೆ. ಪಕ್ಷಗಳು ‘ಸುವಿಧಾ’ ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆಯ ಕೆಲಸಗಳನ್ನು ಸುಗಮವಾಗಿ ನಿರ್ವಹಿಸಲು 16 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ವಿಧಾನಾಸಭಾ ಕ್ಷೇತ್ರವಾರು ಸಂಚಾರ ದಳಗಳನ್ನು ಹಾಗೂ ಸ್ಥಿರ ಸರ್ವೇಕ್ಷಣಾ ತಂಡಗಳನ್ನು ವಿಡಿಯೊ ಸರ್ವೇಕ್ಷಣಾ ತಂಡಗಳನ್ನು ರಚಿಸಲಾಗಿದೆ ಎಂದರು.
‘ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೆ ಅಳವಡಿಸಿರುವ ಎಲ್ಲ ಬ್ಯಾನರ್ ಬಂಟಿಂಗ್ಸ್‌ಗಳನ್ನು ತೆರವಿಗೆ ಸೂಚಿಸಿದ್ದೇನೆ. ಖಾಸಗಿ ಜಾಗದಲ್ಲಿ ಬ್ಯಾನರ್ ಬಂಟಿಂಗ್ ಅಳವಡಿಕೆಗೂ ಅನುಮತಿ ಪಡೆಯುವುದು ಕಡ್ಡಾಯ. ಸರ್ಕಾರಿ ಕಾರ್ಯಕ್ರಮ/ ಯೋಜನೆ, ಕಾಮಗಾರಿಗಳಿಗೆ ಸಂಬಂಧಿಸಿ ರಾಜಕೀಯ ವ್ಯಕ್ತಿಗಳು ಪ್ರಚಾರಕ್ಕೆ ಬ್ಯಾನರ್, ಫ್ಲೆಕ್ಸ್ ಅಳವಡಿಸಿದ್ದರೆ 24 ಗಂಟೆಗಳಲ್ಲಿ ತೆರವಾಗಲಿದೆ‘ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿನ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಎಚ್. ಕೃಷ್ಣಮೂರ್ತಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲ್‌ದೀಪ್ ಕುಮಾರ್ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಇದ್ದರು.
ಅಂಕಿ ಅಂಶ
17,58,647: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು ಮತದಾರರು (ಮಾರ್ಚ್ 29ರವರೆಗೆ)
60,934: ಜಿಲ್ಲೆಯಲ್ಲಿರುವ 80 ವರ್ಷ ಮೇಲಿನ/ ಶೇ 40ಕ್ಕಿಂತ ಹೆಚ್ಚು ಅಂಗ ವೈಕಲ್ಯ ಹೊಂದಿರುವ ಮತದಾರರು
33,577: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು ಯುವ ಮತದಾರರು
‘ಕೋಮು ದ್ವೇಷ ಹರಡಲು ಅವಕಾಶ ಇಲ್ಲ’
ಎರಡು ಬೇರೆ ಬೇರೆ ಕೋಮುಗಳ ನಡುವೆ ಸಂಘರ್ಷ ಹುಟ್ಟಿಸುವಂತೆ ಭಾಷಣ ಮಾಡುವುದಕ್ಕೆ, ಇನ್ನೊಂದು ಧರ್ಮವನ್ನು ನಿಂದಿಸುವುದಕ್ಕೆ ಅವಕಾಶ ಇಲ್ಲ. ಇಂತಹ ಚಟುವಟಿಕೆ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ಇಡಲಿದೆ. ಇಂತಹ ಚಟುವಟಿಕೆಯಲ್ಲಿ ನಿರತರಾದವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವಂತೆ ಚುನಾವಣಾ ಆಯೋಗವು ಸೂಚನೆ ನೀಡಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಸಾಮಾಜಿಕ ಮಾಧ್ಯಮಗಳ ಚಟುವಟಿಕೆ ಮೇಲೆ ನಿಗಾ’
‘ಸಮಾಜಿಕ ಮಾಧ್ಯಮಗಳಲ್ಲಿ ಧರ್ಮವನ್ನು ನಿಂದಿಸುವುದು, ಕೋಮು ದ್ವೇಷ ಹರಡುವುದರ ಮೇಲೆ ನಿಗಾ ಇಡಲಿದ್ದೇವೆ. ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದರ ಮೇಲೂ ಕಣ್ಣಿಡಲಿದ್ದೇವೆ. ಇದಕ್ಕಾಗಿಯೇ ಸೈಬರ್ ಪರಿಣಿತರ ತಂಡವನ್ನು ರಚಿಸಲಾಗಿದೆ’ ಎಂದು ರವಿಕುಮಾರ್ ತಿಳಿಸಿದರು.
‘80 ವರ್ಷ ಮೇಲಿನವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ’
‘80 ವರ್ಷ ಮೇಲಿನವರು ಅಥವಾ ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರು ಬಯಸಿದಲ್ಲಿ ಅವರಿಗೆ ಮನೆಯಲ್ಲೇ ಮತ ಚಲಾಯಿಸಲು ಅವಕಾಶ ನೀಡಲಿದ್ದೇವೆ. ಮತದಾನಕ್ಕಿಂತ ಐದು ದಿನಗಳ ಮುನ್ನವೇ 12 ಡಿ ನಮೂನೆಯನ್ನು ಚುನಾವಣಾ ಸಿಬ್ಬಂದಿ ಅವರ ಮನೆಗೆ ತಲುಪಿಸುತ್ತಾರೆ. ಅವರು ನಮೂನೆಗೆ ಸಹಿ ಮಾಡಿ, ಮನೆಯಲ್ಲೇ ಮತ ಚಲಾಯಿಸಲು ಕೋರಿಕೆ ಸಲ್ಲಿಸಬಹುದು. ಅಂತಹವರಿಗೆ ಮನೆಯಲ್ಲೇ ಗೌಪ್ಯ ಮತದಾನಕ್ಕೆ ವ್ಯವಸ್ಥೆ ಕಲ್ಪಿಸುತ್ತೇವೆ. ಈ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣವನ್ನೂ ಮಾಡಿಕೊಳ್ಳಲಿದ್ದೇವೆ. ವಿವಿಧ ಪಕ್ಷಗಳ ಏಜೆಂಟರ ಸಮಕ್ಷಮದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
‘₹ 50 ಸಾವಿರಕ್ಕಿಂತ ಹೆಚ್ಚು ನಗದು ಒಯ್ಯುವಂತಿಲ್ಲ’
‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ₹ 50 ಸಾವಿರಕ್ಕಿಂತ ಹೆಚ್ಚು ನಗದನ್ನು ಸೂಕ್ತ ದಾಖಲೆಗಳಿಲ್ಲದೇ ಒಯ್ಯುವಂತಿಲ್ಲ. ಯಾವುದೇ ವ್ಯಕ್ತಿ ಬಳಿ ₹ 50ಸಾವಿರ ಅಥವಾ ಅದಕ್ಕಿಂತ ಹೆಚ್ಚು ನಗದು ಪತ್ತೆಯಾದರೆ, ಅದಕ್ಕೆ ಅವರು ದಾಖಲೆ ಒದಗಿಸಬೇಕು. ವಿಫಲವಾದರೆ ಆ ಹಣವನ್ನುಜಪ್ತಿ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.