ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯ: ‘ನರೇಗಾ’ ಶೇ 107ರ ಸಾಧನೆ

ತಾಲ್ಲೂಕಿನಲ್ಲಿ 16,955 ಜನರಿಗೆ ಉದ್ಯೋಗ ಕಾರ್ಡ್ ವಿತರಣೆ
Last Updated 2 ಮೇ 2022, 19:30 IST
ಅಕ್ಷರ ಗಾತ್ರ

ಸುಳ್ಯ: ಇಲ್ಲಿನ ತಾಲ್ಲೂಕು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 2021-22ರಲ್ಲಿ ಶೇ 107ರಷ್ಟು ಸಾಧನೆ ಮಾಡಿ, ದಾಖಲೆ ನಿರ್ಮಿಸಿದೆ.

ಕಳೆದ ವರ್ಷ 1,82,224 ಮಾನವ ದಿನ ಸಾಧಿಸುವ ಗುರಿ ಇದ್ದು, 1,95,927 ಮಾನವ ದಿನ ವ್ಯಯ ಆಗಿದೆ. ಸಾರ್ವಜನಿಕ ಮತ್ತು ವೈಯಕ್ತಿಕ ಕೆಲಸ ಎರಡೂ ಮಾದರಿಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. 16,955 ಜನರಿಗೆ ಉದ್ಯೋಗ ಕಾರ್ಡ್ ನೀಡಲಾಗಿದೆ. ಸಾಧನೆಯಲ್ಲಿ ಶೇ 50ರಷ್ಟು ಮಹಿಳೆಯರ ಪಾಲು ಸೇರಿದೆ. ಜಿಪಿಎಲ್‌ಎಫ್ ಯೋಜನೆಯ ಸಂಜೀವಿನಿ ಸಂಘದ ಪ್ರಯತ್ನ ಸಾಧನೆಗೆ ಕಾರಣವಾಗಿದೆ.

ತಾಲ್ಲೂಕಿನ ಮಂಡೆಕೋಲು ಅತಿ ಹೆಚ್ಚು ಸಾಧನೆ ಮಾಡಿದ ಗ್ರಾಮವಾಗಿದೆ. ಇಲ್ಲಿ 15,270 ಮಾನವ ದಿನ ಸೃಜಿಸಲಾಗಿದೆ. ಉತ್ತೇಜನ ನೀಡಿದ ಗ್ರಾಮದ ಪದ್ಮಾವತಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.

11,693 ದಿನ ವ್ಯಯಿಸಿದ ಐವರ್ನಾಡು ಮತ್ತು 10,315 ಮಾನವ ದಿನ ವ್ಯಯಿಸಿದ ಅಜ್ಜಾವರ ಗ್ರಾಮ ದ್ವಿತೀಯ ಸ್ಥಾನದಲ್ಲಿದೆ.

ಪ್ರಮುಖ ಕಾಮಗಾರಿ: ತಾಲ್ಲೂಕಿನಲ್ಲಿ 10 ಶಾಲಾ ಆವರಣ ಗೋಡೆ ಕಾಮಗಾರಿ, ಆಟದ ಮೈದಾನ 10, ವೈಯಕ್ತಿಕ ಇಂಗುಗುಂಡಿ ಕಾಮಗಾರಿ 23, ಕೊಳವೆ ಬಾವಿ ಮರುಪೂರಣ ಕಾಮಗಾರಿ 7, ರಸ್ತೆ ಕಾಮಗಾರಿ 27, ತೋಡು ಹೂಳುತ್ತುವಿಕೆ ಕಾಮಗಾರಿ 27, ತೆರೆದ ಬಾವಿ 205, ಬಚ್ಚಲು ಗುಂಡಿ ವೈಯಕ್ತಿಕ 400, ಸಾರ್ವಜನಿಕ 13, ತೋಟಗಾರಿಕಾ ಇಲಾಖೆಯ ಅಡಿಕೆ ಸಸಿ ಹೊಂಡ 1,014, ಇತರ ಕೃಷಿ ಹೊಂಡ 83, ದನ, ಕುರಿ ಶೆಡ್ ಕಾಮಗಾರಿ 250 ಮಾಡಲಾಗಿದೆ. ಈ ವರ್ಷ ಬಾಳಿಲ ಗ್ರಾಮದ ಕಾಂಚೋಡು-ದೋಳ್ತೋಡಿ ಮತ್ತು ಮುರುಳ್ಯ ಗ್ರಾಮದ ಪೂದೆ ಕೆರೆ ಎಂಬಲ್ಲಿ ಕೆರೆಯ ಹೂಳು ಎತ್ತುವ ಕಾಮಗಾರಿ ನಡೆಯುತ್ತಿದೆ.

ಇಲಾಖಾ ಸಹಕಾರ: ಕಾಮಗಾರಿಗಳ ಅನುಷ್ಠಾನ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಸಾಮಾಜಿಕಅರಣ್ಯ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗಳ ಸಹಕಾರ ಇದೆ. ಜನರ ಜೀವನೋಪಾಯ, ಕೌಶಲಾಭಿವೃದ್ಧಿ, ಉದ್ಯಮ ಶೀಲತಾ ಅಭಿವೃದ್ಧಿ ಉದ್ದೇಶಿತ ಯೋಜನೆ ಇದಾಗಿದೆ.

‘ಜಲ ಸಂರಕ್ಷಣೆಗೆ ಒತ್ತು’
ತಾಲ್ಲೂಕಿನಲ್ಲಿ ನರೇಗಾದಲ್ಲಿ ಗುರಿ ಮೀರಿದ ಸಾಧನೆ ಆಗಿದೆ. ಈ ವರ್ಷ ಜಲ ಸಂರಕ್ಷಣೆಗೆ ಒತ್ತು ಕೊಡುವ ಕಾಮಗಾರಿಗೆ ಉತ್ತೇಜನ ನೀಡಲಾಗುತ್ತದೆ. ಜನರ ಮತ್ತು ಸಂಜೀವಿನಿ ಸಂಘದವರ ಆಸಕ್ತಿ, ಅನುಷ್ಠಾನ ಇಲಾಖೆಗಳ ಸಹಕಾರದಿಂದ ಈ ಸಾಧನೆ ಆಗಿದೆ ಎಂದು ಸುಳ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT