ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಾಝಿಲ್‌ ಕುಟುಂಬಕ್ಕೂ ಪರಿಹಾರ ಸಿಗಬೇಕು: ಶಾಸಕ ಭರತ್‌ ಶೆಟ್ಟಿ

Published : 31 ಜನವರಿ 2023, 10:08 IST
ಫಾಲೋ ಮಾಡಿ
Comments

ಮಂಗಳೂರು: ‘ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಫಾಝಿಲ್‌ ಕುಟುಂಬದವರಿಗೂ ಸರ್ಕಾರದಿಂದ ಪರಿಹಾರ ಸಿಗಬೇಕು. ಇಂತಹ ಘಟನೆಗಳಲ್ಲಿ ಸಂತ್ರಸ್ತರಾದವರಿಗೆ ಸರ್ಕಾರ ಪರಿಹಾರ ನೀಡಲಿದೆ’ ಎಂದು ಶಾಸಕ ಡಾ.ವೈ.ಭರತ್‌ ಶೆಟ್ಟಿ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿ ಏರ್ಪಡಿಸಿದ್ದ ‘ಪತ್ರಿಕಾ ಸಂವಾದ’ದಲ್ಲಿ ಅವರು ಮಂಗಳವಾರ ಮಾತನಾಡಿದರು.

ಫಾಝಿಲ್‌ ಹತ್ಯೆಯಾದಾಗ ಅವರ ಮನೆಗೆ ತೆರಳಿ ಸಾಂತ್ವನ ಹೇಳದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನೂ ಅವರ ಮನೆಗೆ ಹೋಗಬೇಕೆಂದು ಬಯಸಿದ್ದೆ. ಆದರೆ, ನನ್ನ ಭೇಟಿ ವೇಳೆ ಗಲಾಟೆ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಈ ಹಿಂದೆ ದೀಪಕ್‌ರಾವ್‌ ಹಾಗೂ ಇನ್ನೊಬ್ಬ ವ್ಯಕ್ತಿ ಸತ್ತಾಗ ಸಂತ್ರಸ್ತರ ಮನೆಗೆ ಶಾಸಕರು ಭೇಟಿ ನೀಡಿದಾಗಲೂ ಘೆರಾವ್‌ ಹಾಕಲಾಗಿತ್ತು. ನನ್ನ ಭೇಟಿಯು ಮತ್ತಷ್ಟು ಗಲಾಟೆಯನ್ನು ಉಂಟುಮಾಡುವುದು ‌ಬೇಡ ಎಂಬ ಕಾರಣಕ್ಕೆ ನಾನು ಅವರ ಮನೆಗೆ ಹೋಗಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಆತಂಕದ ಪರಿಸ್ಥಿತಿ ತಿಳಿಗೊಂಡ ಬಳಿಕವಾದರೂ ಭೇಟಿ ನೀಡಬಹುದಿತ್ತಲ್ಲವೇ, ಪರಿಹಾರ ಕೊಡಿಸಲು ಪ್ರಯತ್ನಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ‘ಅವರ ಕುಟುಂಬದವರು ಯಾರೂ ಪರಿಹಾರದ ಬಗ್ಗೆ ನನ್ನ ಬಳಿ ಬೇಡಿಕೆ ಇಟ್ಟಿಲ್ಲ. ಅವರು ಕೇಳಬೇಕೆಂದೂ ಇಲ್ಲ. ಪರಿಹಾರ ನೀಡಲು ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಫಾಝಿಲ್‌ ಕುಟುಂಬದ ಹೆಸರೂ ಇದೆ. ಅವರಿಗೂ ಪರಿಹಾರ ಸಿಗಲಿದೆ’ ಎಂದರು.

‘ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿಯೇ ಫಾಝಿಲ್‌ ಹತ್ಯೆಯನ್ನು ನಡೆಸಲಾಗಿದೆ. ನಮ್ಮವರೇ ಈ ಕೃತ್ಯ ಮಾಡಿದ್ದಾರೆ’ ಎಂದು ವಿಶ್ವಹಿಂದೂ ಪರಿಷತ್‌ನ ಮುಖಂಡ ಶರಣ್‌ ಪಂಪ್‌ವೆಲ್‌ ಬಹಿರಂಗ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಲು ಭರತ್‌ ಶೆಟ್ಟಿ ನಿರಾಕರಿಸಿದರು.‘ಅವರು ಏನು ಹೇಳಿಕೆ ನೀಡಿದ್ದಾರೋ ನಾನು ನೋಡಿಲ್ಲ. ಹಾಗಾಗಿ ಪ್ರತಿಕ್ರಿಯೆ ನೀಡುವುದು ಸರಿಯಾಗದು’ ಎಂದರು.

‘ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ನನ್ನನ್ನು ಅಂತಹ ವೇದಿಕೆಯಲ್ಲಿ ನಿಲ್ಲಿಸಿದರೆ ಏನು ಹೇಳಬೇಕೋ, ಅದನ್ನು ಅಲ್ಲೇ ಹೇಳುತ್ತೇನೆ’ ಎಂದರು.

ಮಂಗಳೂರು ಉತ್ತರಕ್ಷೇತ್ರದಲ್ಲಿ ಸಾಮರಸ್ಯ ಕದಡುವ ಯತ್ನಗಳು ಪದೇ ಪದೇ ಮರುಕಳಿಸುತ್ತಿರುವ ಕುರಿತು ಹಾಗೂ ಕಾವೂರು ಜಾತ್ರೆಯ ವೇಳೆ ಹಿಂದೂ ಅಲ್ಲದ ವರ್ತಕರ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಬ್ಯಾನರ್‌ ಹಾಕಿದ ಕುರಿತು ಪ್ರತಿಕ್ರಿಯಿಸಿದ ಅವರು,‘ಇದು ಚರ್ಚೆಯಾಗಬೇಕಾದ ವಿಚಾರ. ಬ್ಯಾನರ್‌ ಹಾಕಿ ಅಥವಾ ಹಾಕಬೇಡಿ ಎಂದು ಶಾಸಕನಾಗಿ ನಾನು ಹೇಳಲಾಗದು. ಇದನ್ನು ಧಾರ್ಮಿಕ ಮುಖಂಡರೇ ನಿರ್ಧರಿಸುತ್ತಾರೆ. ಅಭಿವೃದ್ಧಿಗೆ ಸಾಮರಸ್ಯ ಅಗತ್ಯ ಎಂಬುದನ್ನು ನಾನು ಒಪ್ಪುತ್ತೇನೆ. ಸಾಮರಸ್ಯ ಮೂಡಿಸುವ ಯತ್ನ ಎರಡೂ ಕಡೆಯವರಿಂದ ಆಗಬೇಕು’ ಎಂದರು.

‘ಜನರ ಮನಸ್ಥಿತಿ ಬದಲಾಗುತ್ತಿದೆ. ನಾನು ಕಾಲೇಜೊಂದರ ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸಿದವ. ಹಿಂದೆಲ್ಲ ವಿದ್ಯಾರ್ಥಿಗಳು ಹಿಜಾಬ್‌ ಹಾಕಿಕೊಂಡು ತರಗತಿಗೆ ಬರುತ್ತಿರಲಿಲ್ಲ. ಆದರೆ ಈಗ ಅಂತಹ ಪರಿಸ್ಥಿತಿ ಸೃಷ್ಟಿಸಲಾಗುತ್ತಿದೆ’ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಹಾಗೂ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಇದ್ದರು.

‘ಹೆಲಿಟೂರಿಸಂ ಸರ್ಕೀಟ್‌' ರೂಪಿಸುವ ಚಿಂತನೆ
ಕೊಲ್ಲೂರು, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ ಶಬರಿಮಲೆ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಹೆಲಿಟೂರಿಂ ಅಭಿವೃದ್ಧಿಪಡಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಯೊಂದು ಈ ಯೋಜನೆಯಲ್ಲಿ ಆಸಕ್ತಿ ತೊರಿಸಿದೆ. ಅವರಿಗೆ ಕೂಳೂರು ಬಳಿ ಜಾಗ ನೀಡುವ ಪ್ರಸ್ತಾವ ಇದೆ’ ಎಂದು ಭರತ್‌ ಶೆಟ್ಟಿ ತಿಳಿಸಿದರು.

‘ಫಲ್ಗುಣಿ ನದಿಯಲ್ಲಿ ವಾಟರ್‌ ಥೀಂ ಪಾರ್ಕ್‌'

‘ಕೂಳೂರು ಬಳಿ ಫಲ್ಗುಣಿ ನದಿ ದಂಡೆಯಲ್ಲಿ 22 ಎಕರೆ ಸರ್ಕಾರ ಜಾಗ ಲಭ್ಯವಿದ್ದು, ಇದನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದ್ದೇವೆ. ಈ ಜಾಗದಲ್ಲಿ ‘ವಾಟರ್‌ ಥೀಮ್‌ ಪಾರ್ಕ್’ ಅಭಿವೃದ್ಧಿಪಡಿಸುವ ಇಂತನೆ ಇದೆ’ ಎಂದು ಶಾಸಕರು ತಿಳಿಸಿದರು.

‘ಪಚ್ಚನಾಡಿ ಎಸ್‌ಟಿಪಿ ಶೀಘ್ರ ದುರಸ್ತಿ’
ಪಚ್ಚನಾಡಿಯ ಕಸ ಭೂಭರ್ತಿ ತಾಣದಿಂದ ಹೊರಸೂಸುವ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕದ (ಎಸ್‌ಟಿಪಿ) ದುರಸ್ತಿಗೆ ಟೆಂಡರ್‌ ಕರೆದಿದ್ದೇವೆ. ಆರು ತಿಂಗಳ ಒಳಗೆ ಕೆಲಸ ಪೂರ್ಣಗೊಳ್ಳಲಿದೆ. ಶುದ್ಧೀಕರಿಸಿದ ನೀರನ್ನು ನದಿಯ ಅಣೆಕಟ್ಟೆಯ ಮೇಲಿನ ಭಾಗಕ್ಕೆ ಸದ್ಯ ಬಿಡಲಾಗುತ್ತಿದೆ. ಇನ್ನು ಈ ನೀರನ್ನು ಅಣೆಕಟ್ಟೆಯ ಕೆಳಗಿನ ಭಾಗಕ್ಕೆ ಬಿಡಲು ಕ್ರಮಕೈಗೊಂಡಿದ್ದೇವೆ. ಇದರಿಂದ ಜನರು ಕೊಳಚೆ ಸೇರಿದ ನೀರನ್ನು ಕುಡಿಯಲು ಬಳಸುವುದು ತಪ್ಪಲಿದೆ’ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸುರತ್ಕಲ್‌ ಮಾರುಕಟ್ಟೆ ಆರು ತಿಂಗಳಲ್ಲಿ ಬಳಕೆಗೆ’
ಸುರತ್ಕಲ್‌ ಮಾರುಕಟ್ಟೆಗೆ ಸೂಕ್ತ ಜಾಗ ಒದಗಿಸದ ಕಾರಣದಿಂದ ಹಾಗೂ ಅಲ್ಲಿ ಒಳಚರಂಡಿ ಕೊಳವೆ ಸ್ಥಳಾಂತರ ಮಾಡಬೇಕಾಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಈ ಕಾಮಗಾರಿಗೆ ತಗಲುವ ಹೆಚ್ಚುವರಿ ವೆಚ್ಚದ ಪರಿಶೀಲನೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಮರುಟೆಂಡರ್‌ ಕರೆದು ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಆರೇಳು ತಿಂಗುಗಳಲ್ಲಿ ಈ ಮಾರುಕಟ್ಟೆ ಜನರ ಬಳಕೆಗೆ ಲಭ್ಯ ಆಗಲಿದೆ’ ಎಂದು ಭರತ್ ಶೆಟ್ಟಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಒಳಚರಂಡಿ ಸಮಸ್ಯೆಗೆ ಶೀಘ್ರ ಪರಿಹಾರ’
ಸುರತ್ಕಲ್ ಪ್ರದೇಶದಲ್ಲಿ ಅಳವಡಿಸುವ ಒಳಚರಂಡಿ ಅವ್ಯವಸ್ಥೆಗೆ ನಾಲ್ಕು ವರ್ಷಗಳ ಬಳಿಕವೂ ಪರಿಹಾರ ಸಿಗದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ‘ಒಳಚರಂಡಿ ಕೊಳವೆ ಮಾರ್ಗ ಅಪೂರ್ಣವಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಅದನ್ನು ಸರಿಪಡಿಸಲಾಗುತ್ತಿದೆ. ಶೀಘ್ರವೇ ಇದಕ್ಕೆ ಮನೆ ಮನೆಯಿಂದ ಸಂಪರ್ಕಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT