ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟಿ ಪರಿಸರದ ಬಾರಿಮಲೆಯಲ್ಲಿ ಬೆಂಕಿ

Published 16 ಫೆಬ್ರುವರಿ 2024, 14:26 IST
Last Updated 16 ಫೆಬ್ರುವರಿ 2024, 14:26 IST
ಅಕ್ಷರ ಗಾತ್ರ

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪರಿಸರದ ಚಿಕ್ಕಮಗಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಬಾರಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ.

ಅರಣ್ಯದ ಕಲ್ಲು ಪ್ರದೇಶದಲ್ಲಿ ಒಣಗಿರುವ ಹುಲ್ಲು ಹಾಗೂ ಗಿಡಗಂಟಿಗಳಿಗೆ ಸ್ಥಳೀಯರು ಹಚ್ಚಿರುವ ಬೆಂಕಿ ಪರಿಸರವನ್ನು ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ.

ಕಲ್ಲುಗಳ ಪ್ರದೇಶದಲ್ಲಿ ಬೆಂಕಿ ಇದ್ದು, ಸದ್ಯ ಹತೋಟಿಗೆ ಬಂದಿದೆ. ಅರಣ್ಯದ ಅಂಚಿನವರೆಗೂ ಪಸರಿಸಿದ ಬೆಂಕಿಯನ್ನು ಆರಿಸಲಾಗಿದ್ದು, ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಚಾರ್ಮಾಡಿ ಘಾಟಿಯ ವೀಕ್ಷಣಾ ಕೇಂದ್ರದಲ್ಲಿ ನಿಂತು ಗಮನಿಸಿದರೆ ಹಗಲಲ್ಲಿ ದಟ್ಟ ಹೊಗೆ ಆವರಿಸಿರುವುದು ಹಾಗೂ ರಾತ್ರಿ ಸಮಯ ಬೆಂಕಿಯ ಪ್ರಖರತೆ ಎರಡು ದಿನಗಳಿಂದ ಕಂಡು ಬರುತ್ತಿತ್ತು ಎಂದು ವಾಹನ ಸವಾರರು ತಿಳಿಸಿದ್ದಾರೆ. ಕಳೆದ ವರ್ಷ ಘಾಟಿಯ ಕೆಲಭಾಗಗಳಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ಹಲವಾರು ಹೆಕ್ಟೇರ್ ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಅಂದು ಆರಂಭದಲ್ಲಿ ಬೆಂಕಿ ಹತೋಟಿಗೆ ಬಂದಿದೆ ಎಂದು ಹೇಳಲಾಗುತ್ತಿತ್ತು. ಬಳಿಕ ಕಾಡನ್ನು ಆವರಿಸಿತ್ತು.

ದ.ಕ.ಕ್ಕೆ ಸಾಧ್ಯತೆ ಇಲ್ಲ: ಬಾರಿಮಲೆಯ ಒಂದು ಭಾಗದ ಕಡೆ ಹಳ್ಳ ಇನ್ನೊಂದು ಕಡೆ ಹೊಳೆ ಇದೆ. ಈ ಕಾರಣದಿಂದ ಚಾರ್ಮಾಡಿ ಅರಣ್ಯ ಹಾಗೂ ಇನ್ನೊಂದು ಬದಿಯಲ್ಲಿರುವ ನೆರಿಯ ಮೀಸಲು ಅರಣ್ಯಕ್ಕೆ ಬೆಂಕಿ ಹರಡುವ ಸಾಧ್ಯತೆ ಇಲ್ಲ ಎಂದು ಬೆಳ್ತಂಗಡಿಯ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಬಿ.ಜಿ.ತಿಳಿಸಿದ್ದಾರೆ.

ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ಸಿಬ್ಬಂದಿ ರವಿ ಹಾಗೂ ಗೋಪಾಲ್ ದ.ಕ ವಿಭಾಗದ ಘಾಟಿ ಹಾಗೂ ಅರಣ್ಯದ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ಅಪಾಯದ ಸನ್ನಿವೇಶ ಇಲ್ಲ ಎಂದು ಹೇಳಿದ್ದಾರೆ.

ಘಾಟಿ ಪ್ರದೇಶದಲ್ಲಿ ಬೆಂಕಿ ರೇಖೆ ನಿರ್ಮಿಸಲಾಗಿದ್ದು, ರಸ್ತೆ ಬದಿಗೆ ಬೆಂಕಿ ಹರಡುವ ಸಾಧ್ಯತೆ ಇಲ್ಲ. ಘಾಟಿ ಪರಿಸರದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಬೆಳ್ತಂಗಡಿ ತಾಲ್ಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಬೆಳಗಿನ ಜಾವ ಚಳಿ, ಹಗಲಲ್ಲಿ ಉರಿ ಬಿಸಿಲು, ಸೆಕೆಯ ವಾತಾವರಣ ಕಂಡುಬಂದಿದೆ.

ಚಾರ್ಮಾಡಿ- ಕನಪಾಡಿ ಅರಣ್ಯ, ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅರಣ್ಯ, ನೆರಿಯ ಮೀಸಲು ಅರಣ್ಯ, ಮುಂಡಾಜೆ- ಕಾಪು, ಮುಂಡಾಜೆ - ಧರ್ಮಸ್ಥಳ ಅರಣ್ಯ ಭಾಗಗಳ ಗಡಿಪ್ರದೇಶ ಒಂದಕ್ಕೊಂದು ಸಮೀಪದಲ್ಲಿದೆ. ಇಲ್ಲಿ ಒಂದೆಡೆ ಬೆಂಕಿ ಕಂಡುಬಂದರೂ ಅದು ಹರಡುವ ಸಾಧ್ಯತೆ ಇದೆ. ಬೆಂಕಿ ಪ್ರಕರಣಗಳ ಹತೋಟಿಗೆ ಈಗಾಗಲೇ ವನ್ಯಜೀವಿ ವಿಭಾಗದಿಂದ ಚಾರಣ ಸ್ಥಳಗಳಿಗೆ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ ಮುಂಜಾಗೃತೆ ಕ್ರಮಗಳನ್ನು ಕೈಗೊಂಡಿದೆ‌. ಸಿಬ್ಬಂದಿ ಕೊರತೆ ಇದ್ದು, ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಸವಾಲು ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT