ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಫಾ. ಮುಲ್ಲರ್‌ ಕಾಲೇಜಿನಲ್ಲಿ 700 ಮಂದಿಗೆ ಲಸಿಕೆ

ಕೋವಿಡ್–19 ಬೇಗ ಕೊನೆಗೊಳ್ಳಲು ಬಿಷಪ್‌ರಿಂದ ಪ್ರಾರ್ಥನೆ
Last Updated 22 ಜೂನ್ 2021, 2:11 IST
ಅಕ್ಷರ ಗಾತ್ರ

ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಒಂದೇ ದಿನ 700 ಮಂದಿಗೆ ಕೋವಿಡ್–19 ತಡೆ ಲಸಿಕೆ ನೀಡಲಾಯಿತು.

ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆಯಲು ಬಂದಿದ್ದರು. ಇದಕ್ಕೆ ಪೂರ್ವಭಾವಿಯಾಗಿ ಜೂನ್ 19ರಂದು 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು.

ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಅಧ್ಯಕ್ಷರೂ ಆದ ಬಿಷಪ್ ಡಾ.ರೆ.ಪೀಟರ್‌ ಪಾವ್ಲ್‌ ಸಲ್ಡಾನ, ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಾಂಕ್ರಾಮಿಕ ಬೇಗ ಕೊನೆಗೊಳ್ಳುವಂತೆ ಮತ್ತು ರೋಗಿಗಳ ಸೇವೆಯಲ್ಲಿ ನಿರತರಾ ದವರನ್ನು ರಕ್ಷಿಸುವಂತೆ ಪ್ರಾರ್ಥಿಸಿದರು.

ಫಾ.ಮುಲ್ಲರ್‌ ಚಾರಿಟಬಲ್‌ ಸಂಸ್ಥೆ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕೊವೆಲ್ಲೊ ಮಾತನಾಡಿ, ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಜತೆಗೆ ನ್ಯಾಯಸಮ್ಮತ ಬೆಲೆಯಲ್ಲಿ ಲಸಿಕೆ ಒದಗಿಸುವ ಮೂಲ ಖಾಸಗಿ ಆಸ್ಪತ್ರೆಗಳೂ ಈ ರಾಷ್ಟ್ರೀಯ ಅಭಿಯಾನದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಲಸಿಕೆ ಪಡೆಯವುದೊಂದೇ ಮಾರ್ಗ ಎಂದು ಹೇಳಿದರು.

ಸಾರ್ವಜನಿಕರ ಭೇಟಿ ಪ್ರದೇಶ, ಸ್ವಾಗತಕಾರರ ಕೌಂಟರ್, ಲಸಿಕೆ ನೀಡಿಕೆ ಮತ್ತು ಲಸಿಕೆ ಬಳಿಕದ ವಿಶ್ರಾಂತಿ ಕೊಠಡಿ, ಕೆಫೆಟೇರಿಯ ಮತ್ತಿತರ ಸೌಲಭ್ಯವನ್ನು ಫಾ. ಅಜಿತ್ ಮಿನೇಜಸ್ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಕ್ರೀಡಾಪಟುಗಳಿಗೆ ಲಸಿಕೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಅಂತರ ರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಜಿಲ್ಲೆಯ ಕ್ರೀಡಾಪಟುಗಳಿಗೆ ಲಸಿಕೆ ಹಾಕುವ ಶಿಬಿರವನ್ನು ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಅಂತರ ರಾಷ್ಟ್ರೀಯ ಮಟ್ಟದ ಐವರು, ರಾಷ್ಟ್ರೀಯ ಮಟ್ಟದ 51, ರಾಜ್ಯ ಮಟ್ಟದ 164 ಕ್ರೀಡಾಪಟು ಗಳು ಸೇರಿದಂತೆ ಒಟ್ಟು 220 ಕ್ರೀಡಾಪಟು ಗಳಿಗೆ ಲಸಿಕೆ ನೀಡಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಬಿಜೈ ನಗರ ಆರೋಗ್ಯ ಕೇಮದ್ರದ ವೈದ್ಯಾಧಿಕಾರಿ ಡಾ. ಜಯಶ್ರೀ ಆರ್. ಬೋಳಾರ್, ಹಿರಿಯ ಅಥ್ಲೆಟಿಕ್‌ ತರಬೇತುದಾರ ಡಾ. ವಸಂತ್ ಕುಮಾರ್, ಮಂಗಳೂರು ತಾಲ್ಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ವಿನೋದ್ ಕುಮಾರ್, ಹಾಜರಿದ್ದರು.

ಎನ್‌ಆರ್‌ಐಗಳಿಗೆ ಲಸಿಕೆ: ಅಧಿಕಾರಿ ಬದಲು

ಉದ್ಯೋಗ, ಕ್ರೀಡೆ, ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಮೊದಲ ಡೋಸ್‌ ಪಡೆದು 28 ದಿನ ಪೂರೈಸಿದವರಿಗೆ 2 ನೇ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಣ ಪತ್ರ ನೀಡಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಂಗಳೂರು ತಾಲ್ಲೂಕಿಗೆ ವೆನ್ಲಾಕ್‌ ಆಸ್ಪತ್ರೆಯ ಆರ್‌ಎಂಒ ಡಾ.ಜುಲಿಯಾನ್‌ ಸಲ್ಡಾನ ಅವರನ್ನು ಹಾಗೂ ಮೂಡುಬಿದಿರೆ, ಮೂಲ್ಕಿ, ಬಂಟ್ವಾಳ, ಪುತ್ತೂರು, ಕಡಬ, ಬೆಳ್ತಂಗಡಿ ತಾಲ್ಲೂಕುಗಳ ತಹಶೀಲ್ದಾರರನ್ನು ದೃಢೀಕರಣ ಪತ್ರ ನೀಡುವ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT