ಭಾನುವಾರ, ಸೆಪ್ಟೆಂಬರ್ 26, 2021
28 °C
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಸರಳ, ಸಂಭ್ರಮದಿಂದ ವಿಘ್ನೇಶ್ವರನ ಆರಾಧನೆ

‘ಗಣೇಶೋತ್ಸವದಿಂದ ಸಮಾಜದಲ್ಲಿ ಸಾಮರಸ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರದಲ್ಲಿ 58ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು.

ಅಳಮಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ್ ಭಟ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಭಟ್ ನೇತೃತ್ವದ ತಂಡ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣಪತಿಗೆ ಪೂಜೆಯನ್ನು ನೆರವೇರಿಸಿತು.

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್, ‘ಇಲ್ಲಿನ ಜನರು ಧಾರ್ಮಿಕ ಪ್ರಜ್ಞೆ ಹೊಂದಿರುವವರು. ಹಾಗಾಗಿ ಸಾಮರಸ್ಯದ ಬದುಕಿಗೆ ಒತ್ತು ನೀಡುತ್ತ ಬಂದಿದ್ದಾರೆ. ಗಣೇಶೋತ್ಸವ ಆಚರಣೆಯ ಉದ್ದೇಶ ಕೂಡ ಇದೇ ಆಗಿದೆ’ ಎಂದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಅಳ್ವ, ಚೌಟರ ಅರಮನೆಯ ಕುಲದೀಪ್ ಎಂ., ಡಾ. ಅಮರಶ್ರೀ ಇದ್ದರು. ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ರಾಜಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಪಿ.ಎಂ ನಿರೂಪಿಸಿದರು. ಸುದರ್ಶನ್ ಎಂ ವಂದಿಸಿದರು. ಶುಕ್ರವಾರದಿಂದ ಐದು ದಿನಗಳವರೆಗೆ ಗಣೇಶೋತ್ಸವ ನಡೆಯಲಿದೆ.

ಫಲ್ಗುಣಿಯಲ್ಲಿ ವಿಸರ್ಜನೆ

ಬಂಟ್ವಾಳ: ತಾಲ್ಲೂಕಿನ ವಿವಿಧೆಡೆ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ನಡೆಯಿತು.

ಬಹುತೇಕ ಎಲ್ಲ ಕಡೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ, ಸಂಜೆ ವೇಳೆಗೆ ನೇತ್ರಾವತಿ, ಫಲ್ಗುಣಿ ನದಿ, ಕೆಲವೆಡೆ ತೆರೆದ ಬಾವಿಗಳಲ್ಲಿ ವಿಸರ್ಜನೆಗೊಳಿಸಲಾಯಿತು. ಕಳೆದ ವರ್ಷದಂತೆ ಮೆರವಣಿಗೆ ಮತ್ತು ಬಂಡಿಚಿತ್ರಗಳ ಪ್ರದರ್ಶನ ಇರಲಿಲ್ಲ. ಗಣೇಶನ ವಿಗ್ರಹಕ್ಕೆ ತ್ರಿಕಾಲ ಪೂಜೆ ಮಾಡಿ, ವಿಸರ್ಜಿಸಲಾಯಿತು.

ಸಂಭ್ರಮದ ಉತ್ಸವ

ಮೂಲ್ಕಿ: ತಾಲ್ಲೂಕಿನಲ್ಲಿ ವಿವಿಧೆಡೆ ಭಕ್ತಿ, ಶ್ರದ್ಧೆಯಿಂದ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ, ಸರಳವಾಗಿ ಆಚರಿಸಿ, ಸಂಜೆ ಜಲಾಧಿವಾಸ ನಡೆಸಿದರು.

ಕಿನ್ನಿಗೋಳಿ, ಕೆರೆಕಾಡು, ಪಕ್ಷಿಕೆರೆ, ಮೂರುಕಾವೇರಿ, ಬಪ್ಪನಾಡು, ಹಳೆಯಂಗಡಿ, ಏಳಿಂಜೆ, ಬಳಕುಂಜೆ, ಉಳೆಪಾಡಿ, ಕೆ.ಎಸ್.ರಾವ್ ನಗರ, ಸಸಿಹಿತ್ಲುವಿನ ಪರಿಸರದಲ್ಲಿ ಶುಕ್ರವಾರ ಗಣೇಶೋತ್ಸವ ಶ್ರದ್ಧೆಯಿಂದ ನಡೆಯಿತು.

ಕಟೀಲು ಹಾಗೂ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಪಾವಂಜೆ ಹಾಗೂ ತೋಕೂರು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ, ಪಡುಪಣಂಬೂರುಗೌರೀಶಂಕರ ದೇವಸ್ಥಾನದಲ್ಲಿಯೂ ಗಣಪತಿಗೆ ಪೂಜೆ ನೆರವೇರಿಸಲಾಯಿತು. 

ಮೂಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ ಪಲ್ಲಕಿ ಮೂಲಕ ಗಣೇಶನ ವಿಗ್ರಹವನ್ನು ತಂದು ದೇವಸ್ಥಾನದ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಯಿತು. ಮೂಲ್ಕಿ ಪೊಲೀಸರು ಬಂದೋಬಸ್ತ್‌ ಒದಗಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು