ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕೊಡಮಾಡುವ ನಿರಂಜನ ಪ್ರಶಸ್ತಿಗೆ ಕತೆ ಹಾಗೂ ಕಾದಂಬರಿಕಾರ್ತಿ ಗಂಗಾ ಪಾದೇಕಲ್ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 15 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1948ರ ಸೆಪ್ಟೆಂಬರ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದ ಗಂಗಾ ಪಾದೇಕಲ್ಲು ಅವರ ಮೂಲ ಹೆಸರು ಗಂಗಾರತ್ನ. ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತಿ ಅಮ್ಮ. ಏಳನೇ ತರಗತಿ ವರೆಗೆ ಓದಿದ ಗಂಗಾ ಅವರು 16ನೇ ವಯಸ್ಸಿನಲ್ಲಿ ಪಾದೇಕಲ್ಲು ಗೋವಿಂದ ಭಟ್ಟ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. 34ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಗಂಗಾ, ಸಾಹಿತ್ಯ ಚಟುವಟಿಕೆ ಮೂಲಕ ಹೆಸರು ಗಳಿಸಿದರು.
ಪುಲಪೇಡಿ ಮತ್ತು ಇತರ ಕತೆಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಹೊಸ ಹೆಜ್ಜೆ, ವಾಸ್ತವ, ಕ್ಷಮಯಾ ಧರಿತ್ರಿ, ನೆಲೆ ತಪ್ಪಿದ ಹಕ್ಕಿ, ಮನ್ನಣೆಯ ದಾಹ, ಈ ಪ್ರಜಾ ರಾಜ್ಯದಲ್ಲಿ, ಸಂಕ್ರಮಣ, ಚಿನ್ನದ ಸೂಜಿ ಕಥಾಸಂಕಲನಗಳು. ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಅದೃಷ್ಟ ರೇಖೆ, ಕನಕಾಂಬರಿ, ಸೆರಗಿನ ಕೆಂಡ, ಇನ್ನೊಂದು ಅಧ್ಯಾಯ, ಬಂಗಾರದ ಜಿಂಕೆ ಹಿಂದೆ ಕಾದಂಬರಿಗಳು. ಆಯ್ದ ಕತೆಗಳು, ಪ್ರತಿಬಿಂಬ, ಮುಳಿಯ ಮೂಕಾಂಬಿಕೆ, ಏರ್ಯ ಚಂದ್ರಭಾಗಿ ರೈ ಸಂಪಾದಿತ ಕೃತಿಗಳು. ಸೆರೆಯಿಂದ ಹೊರಗೆ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಇನ್ನೊಂದು ಅಧ್ಯಾಯ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ, ಕೃಷ್ಣಬಾಯಿ ದತ್ತಿನಿಧಿ ಪ್ರಶಸ್ತಿ, ನೀರ್ಪಾಜೆ ಭೀಮಭಟ್ಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ ದೊರೆತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.