ಶನಿವಾರ, ಫೆಬ್ರವರಿ 4, 2023
28 °C
ಗೆಜ್ಜೆಗಿರಿ ಆದಿ ಧೂಮಾವತಿ- ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ ಚಾಲನೆ

ಕಲೆ-ಸಂಸ್ಕೃತಿ ಪ್ರಚುರಪಡಿಸುವ ದೊಡ್ಡ ವಾಹಿನಿ ಯಕ್ಷಗಾನ: ವಿಖ್ಯಾತನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ‘ದೇಶದ ಕಲೆ, ಸಂಸ್ಕೃತಿಯ ವೈಭವ ವಿಶ್ವದಲ್ಲೇ ಅತ್ಯದ್ಭುತವಾದುದು. ದೇಶದ ಕಲಾ ವೈಭವ ಮತ್ತು ಭವ್ಯ ಸಂಸ್ಕೃತಿಯನ್ನು ಪ್ರಚಾರ ಮಾಡುವ ದೊಡ್ಡ ವಾಹಿನಿ ಯಕ್ಷಗಾನ’ ಎಂದು ಸೋಲೂರು ಮಠ ಆರ್ಯ ಈಡಿಗ ಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗೆಜ್ಜೆಗಿರಿ ಮೂಲಸ್ಥಾನ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಆದಿ ಧೂಮಾವತಿ- ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ಅವರು ಉದ್ಘಾಟಿಸಿ, ಆಶೀರ್ವಚನ ನೀಡಿದರು.

‘ಭಾರತೀಯ ಸಂಸ್ಕೃತಿ, ಕಲಾ ವೈಭವ ಮತ್ತು ವೈವಿಧ್ಯತೆಯನ್ನು ಬೇರಾವ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಆಧ್ಯಾತ್ಮಿಕತೆಯ ಮತ್ತು ಭಾರತೀಯ ಸಂಸ್ಕೃತಿಯ ಭಾವನೆಯನ್ನು ಇನ್ನಷ್ಟು ಬೆಳಗಿಸುವ ಕಾರ್ಯ ಗೆಜ್ಜೆಗಿರಿ ಮೇಳದ ಮೂಲಕ ಆಗಬೇಕಿದೆ’ ಎಂದರು.

ಧರ್ಮಸ್ಥಳದ ಡಿ.ಹರ್ಷೇದ್ರ ಕುಮಾರ್ ಮಾತನಾಡಿ, ‘ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ 180 ವರ್ಷಗಳ ಇತಿಹಾಸವಿದೆ. ಆದರೆ, ಈಗ ಬೆಳಿಗ್ಗಿನ ತನಕ ಯಕ್ಷಗಾನ ನೋಡಲು ಜನರಿಲ್ಲ ಎಂದು ನಾಲ್ಕೂವರೆ ಗಂಟೆಗಳ ಕಾಲಮಿತಿಗೆ ತಂದೆವು. ಇದಕ್ಕೆ ಜನಮನ್ನಣೆ ಸಿಕ್ಕಿದೆ. ಆದರೆ, ಇದರಿಂದಾಗಿ ಕಲಾವಿದರ ವಿದ್ವತ್ ಪ್ರದರ್ಶನಕ್ಕೆ ಅವಕಾಶವಿಲ್ಲದಾಗಿದೆ. ಇದೀಗ ಗೆಜ್ಜೆಗಿರಿ ಮೇಳದ ಮೂಲಕ ಕಲಾವಿದರಿಗೆ ಪುನರ್ಜನ್ಮ ಸಿಕ್ಕಿದೆ. ಆದರೆ ಕಲಾವಿದರಾದವರಿಗೆ ಸಮಯಪ್ರಜ್ಞೆ ಬೇಕು’ ಎಂದರು.

ಕಟೀಲು ಕ್ಷೇತ್ರದ ಸದಾನಂದ ವೆಂಕಟೇಶ್ ಆಸ್ರಣ್ಣ ಮಾತನಾಡಿ, ‘ಸಂಸ್ಕಾರಯುತ ಕಥೆಗಳನ್ನು ತೋರಿಸುವ ಮೂಲಕ ಜ್ಞಾನ ಪಸರಿಸಿ, ಅಜ್ಞಾನವನ್ನು ತೊಳಗಿಸುವ ಗಂಡು ಕಲೆ ಯಕ್ಷಗಾನ. ಗೆಜ್ಜೆಯೇ ಗಿರಿಯಾಗಿ ನಿಂತ ಕ್ಷೇತ್ರ ಗೆಜ್ಜೆಗಿರಿ. ಈ ಗಿರಿಯಲ್ಲಿ ಗೆಜ್ಜೆನಾದ ಕೇಳಿಬರಬೇಕು ಎಂಬುವುದು ಇಲ್ಲಿನ ಶಕ್ತಿಗಳ ಚಿತ್ತವಾಗಿತ್ತು. ಹಾಗಾಗಿಯೇ ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ಮೇಳದ ಜೋಡಣೆ ಆಗಿದೆ’ ಎಂದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಯಕ್ಷಗಾನವು ಜ್ಞಾನ ಮತ್ತು ಅನುಭವ ಕೊಡುವ ಸಾಧನ. ನಮ್ಮ ಹಿಂದಿನ ಹಿರಿಯರಿಗೆ ಬರಹ ಗೊತ್ತಿಲ್ಲದಿದ್ದರೂ ಮಹಾಭಾರತ, ರಾಮಾಯಣ, ಪುರಾಣ ಕಥೆಗಳು, ಇತಿಹಾಸಗಳು ತಿಳಿದಿತ್ತು. ಇದಕ್ಕೆ ಮೂಲ ಕಾರಣ ಯಕ್ಷಗಾನ’ ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ಯುವ ಸಂಶೋಧಕ ಡಾ.ಅರುಣ್ ಉಳ್ಳಾಲ್, ‘ಯಕ್ಷಗಾನ ನಾಟ್ಯ ಕಲಾಪ್ರಕಾರ. ಇಂಗ್ಲಿಷ್ ಭಾಷೆಯ ಮಿಶ್ರಣವಿಲ್ಲದೆ ಕನ್ನಡ ಭಾಷೆಯ ಸ್ವಚ್ಚತೆ ಉಳಿಸಿಕೊಂಡ, ಭಾಷಾ ಪ್ರೌಢಿಮೆಗೆ ಒತ್ತು ನೀಡಿದ ಕಲಾ ಪ್ರಕಾರ ಯಕ್ಷಗಾನ. ಯಕ್ಷ ಶಕ್ತಿ ದೀರ್ಘವಾಗಿ ಮೂಡಿಬರಬೇಕು. ಕಲೆಯ ಅಂತರಾರ್ಥ ಅನುಷ್ಠಾನಗೊಳ್ಳಬೇಕು. ಸಮುದಾಯ ಸೀಮಿತ ಕೂಟವಾಗದೆ ವಿಸ್ತಾರಕೂಟವಾಗಿ ಸಾಗಬೇಕು’ ಎಂದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ನವೀನ್‌ಚಂದ್ರ ಡಿ.ಸುವರ್ಣ, ಕುಳಾಯಿ ಫೌಂಡೇಷನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಜಯಂತ ನಡುಬೈಲು, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್, ಉಳ್ತೂರು ಡಾ.ಅಣ್ಣಯ್ಯ ಕುಲಾಲ್, ದುಬೈ ಬಿಲ್ಲವಾಸ್ ಅಧ್ಯಕ್ಷ ಪ್ರಭಾಕರ ಸುವರ್ಣ ಕರ್ನಿರೆ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಸುವರ್ಣ, ಸುಜಿತಾ ಬಂಗೇರ ಬೆಳ್ತಂಗಡಿ, ಕಮಲಾಕ್ಷ ಪೂಜಾರಿ ಮಂಗಳೂರು ಇದ್ದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿದರು. ಗೆಜ್ಜೆಗಿರಿ ಯಕ್ಷಗಾನ ಮೇಳದ ವ್ಯವಸ್ಥಾಪಕ ಪ್ರಶಾಂತ್ ಪೂಜಾರಿ ಮಸ್ಕತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಪ್ರಶಸ್ತಿ, ಅಭಿನಂದನೆ

ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಅವರಿಗೆ ‘ಧರ್ಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ‘ಯಕ್ಷ ಕೋಟಿ ಸಾಧಕ’ ಸನ್ಮಾನ, ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರಿಗೆ ‘ದೇಯಿ ಬೈದೆತಿ ಮಾತೃ’ ಸನ್ಮಾನ, ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರಿಗೆ ‘ಸಾಯನ ಬೈದ್ಯ ಗುರು’ ಸನ್ಮಾನ, ಕಲಾ ಪೋಷಕ ಯಾದವ ಕೋಟ್ಯಾನ್ ಪೆರ್ಮುದೆ ಅವರಿಗೆ ‘ಕೋಟಿ-ಚೆನ್ನಯ ಕಲಾಪೋಷಕ’ ಸನ್ಮಾನ ಮಾಡಿ ಗೌರವಿಸಲಾಯಿತು.

ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಪೂಜಾರಿ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು, ಆರ್.ಡಿ.ಸಂತೋಷ್ ಪೂಜಾರಿ, ಭವ್ಯಶ್ರೀ ಮಂಡೆಕೋಲು, ಇಂಚರ ಪೂಜಾರಿ ಶಿವಪುರ ಅವರನ್ನು ಸನ್ಮಾನಿಸಲಾಯಿತು. ಗೆಜ್ಜೆಗಿರಿ ಭಕ್ತಿ ಸುದಿಪು ಹಾಡುಗಾರ್ತಿ ಅಕ್ಷಿತಾ ನಿತೇಶ್ ಅವರನ್ನು ಗೌರವಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು