ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು ನಗರಸಭೆಯ ಸಾಮಾನ್ಯ ಸಭೆ; ‘ಜಲಸಿರಿ’ ನಿರ್ವಹಣೆ ಕುರಿತ ಚರ್ಚೆ

Published : 18 ಸೆಪ್ಟೆಂಬರ್ 2024, 7:54 IST
Last Updated : 18 ಸೆಪ್ಟೆಂಬರ್ 2024, 7:54 IST
ಫಾಲೋ ಮಾಡಿ
Comments

ಪುತ್ತೂರು: ಜಲಸಿರಿ ಯೋಜನೆಗೆ ಸಂಬಂಧಿಸಿ ನೆಕ್ಕಿಲಾಡಿಯಲ್ಲಿರುವ ಕಿಂಡಿ ಅಣೆಕಟ್ಟೆ ಮತ್ತು ಗೇಟುಗಳನ್ನು ಜಲಸಿರಿ ಯೋಜನೆಯವರೇ ನಿರ್ವಹಿಸಬೇಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರಸಭೆಯ ಸದಸ್ಯರ ವಿಶೇಷ ಸಭೆ ಕರೆದು ಯೋಜನೆಗೆ ಸಂಬಂಧಿಸಿದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಮಂಗಳವಾರ ನಡೆದ ಪುತ್ತೂರು ನಗರಸಭೆಯ ಎರಡನೇ ಅವಧಿಯ ಮೊದಲ ಸಭೆಯಲ್ಲಿ ವ್ಯಕ್ತವಾಯಿತು.

ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಜೀವಂಧರ್ ಜೈನ್ ಅವರು, ಜಲಸಿರಿ ಯೋಜನೆಯವರಿಗೆ ನಗರಸಭೆಯಿಂದ ಮಾಸಿಕ ₹ 50 ಲಕ್ಷ ಪಾವತಿಸಬೇಕಾಗುತ್ತದೆ. ಆದರೆ, ಯೋಜನೆಯ ವಿಚಾರದಲ್ಲಿ ಮಾಡಿಕೊಂಡಿರುವ ಕರಾರುಪತ್ರದಲ್ಲಿ ಕಿಂಡಿ ಅಣೆಕಟ್ಟೆ ಮತ್ತು ಗೇಟ್ ನಿರ್ವಹಣೆಯ ಬಗ್ಗೆ ಉಲ್ಲೇಖವಿಲ್ಲ. 2023ಕ್ಕೆ ಅವರು ಯೋಜನೆಯನ್ನು ಪೂರ್ಣಗೊಳಿಸಬೇಕಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲೇ ಜಲಸಿರಿ ಯೋಜನೆಗೆ ಸಂಬಂಧಿಸಿದ ಕರಾರುಪತ್ರ ಮಾಡಿರುವುದರಿಂದ ಅವರ ಉಪಸ್ಥಿತಿಯಲ್ಲೇ ವಿಶೇಷ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದರು.

‌ಪೌರಾಯುಕ್ತ ಮಧು ಎಸ್.ಮನೋಹರ್ ಮಾತನಾಡಿ, ಜಲಸಿರಿ ಯೋಜನೆಯವರು 2023ರಲ್ಲಿ ಒಂದು ಬಾರಿ ಕಿಂಡಿ ಅಣೆಕಟ್ಟೆ ಮತ್ತು ಗೇಟ್ ದುರಸ್ತಿ ಮಾಡಿ ಕೊಟ್ಟಿದ್ದಾರೆ. ನಿರ್ವಹಣೆಯ ಜವಾಬ್ದಾರಿ ನಮ್ಮದಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಆದರೆ, 8 ವರ್ಷ ಅವರೇ ನಿರ್ವಹಣೆ ಮಾಡಿಕೊಡಬೇಕು ಎಂದರು.

ಜಲಸಿರಿ ಯೋಜನೆಯವರ ಧೋರಣೆಯನ್ನು ಸದಸ್ಯ ಭಾಮಿ ಅಶೋಕ್ ಶೆಣೈ ಖಂಡಿಸಿದರು.

ನಗರೋತ್ಥಾನ ಯೋಜನೆಯ ಕಾಮಗಾರಿಯ ವೇಳೆ 125 ಕಡೆ ಜಲಸಿರಿ ಯೋಜನೆಯ ಪೈಪ್‌ಗಳಿಗೆ ಹಾನಿಯಾಗಿದೆ ಎಂದು ಜಲಸಿರಿ ಯೋಜನೆಯ ಎಂಜಿನಿಯರ್ ತಿಳಿಸಿದರು.

ಕೂಡಲೇ ಸಮಸ್ಯೆ ನಿವಾರಣೆಗೆ  ಕ್ರಮ ಕೈಗೊಳ್ಳುವಂತೆ ಉಪಾಧ್ಯಕ್ಷ ಬಾಲಚಂದ್ರ ಸೂಚಿಸಿದರು.

ವಿಶೇಷ ಅನುದಾನಕ್ಕೆ ಪ್ರಯತ್ನಿಸಲು ಆಗ್ರಹ: ನಗರೋತ್ಥಾನ ಯೋಜನೆಯಡಿಯ ರಸ್ತೆ ದುರಸ್ತಿಯನ್ನು ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಗುತ್ತಿಗೆದಾರರು ತಿಳಿಸಿದರು.

ನಗರದ ಮುಖ್ಯ ರಸ್ತೆಯೂ ಸೇರಿದಂತೆ ಕೆಲವೊಂದು ರಸ್ತೆಗಳು ಸಂಪೂರ್ಣವಾಗಿ ಗುಂಡಿ ಬಿದ್ದಿವೆ. ಅವುಗಳ ದುರಸ್ತಿಗೆ ಕನಿಷ್ಠ ₹ 3 ಕೋಟಿಯಷ್ಟಾದರೂ ಬೇಕು. ನಗರಸಭೆಯ ಅನುದಾನದಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಶಾಸಕರ ಜತೆ ಮಾತುಕತೆ ನಡೆಸಿ ಸರ್ಕಾರದಿಂದ ವಿಶೇಷ ಅನುದಾನ ತರಿಸಿಕೊಳ್ಳಬೇಕು ಎಂದು ಭಾಮಿ ಅಶೋಕ್ ಶೆಣೈ ಸಲಹೆ ನೀಡಿದರು.

ಅನುದಾನ ಇಳಿಕೆ: 2024-25ನೇ ಸಾಲಿನಲ್ಲಿ ನಗರಸಭೆಯ ನಿಧಿ ಅನುದಾನದಡಿ ನಗರಸಭೆಯ 31 ವಾರ್ಡ್‌ಗಳಲ್ಲಿ ₹ 5 ಲಕ್ಷ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಒಟ್ಟು ₹ 1.55 ಕೋಟಿಯ ಕ್ರಿಯಾಯೋಜನೆಯನ್ನು ಸಭೆಯ ಅನುಮೋದನೆಗಾಗಿ ಮಂಡಿಸಲಾಯಿತು. ಈ ಹಿಂದಿನ ಬಜೆಟ್‌ನಲ್ಲಿ ಪ್ರತೀ ವಾರ್ಡ್‌ಗೆ ₹ 10 ಲಕ್ಷ ಅನುದಾನ ನೀಡಲಾಗಿತ್ತು ಎಂದ ಸದಸ್ಯ ಜೀವಂಧರ್ ಜೈನ್, ವಾರ್ಡ್‌ಗಳಿಗೆ ನೀಡಲು ಹಣ ಇಲ್ಲವೇ ಅಥವಾ ಅಧಿಕಾರಿಗಳಿಗೆ ಆಸಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.

ಸದಸ್ಯರಾದ ರಮೇಶ್ ರೈ, ಸಂತೋಷ್‌ಕುಮಾರ್, ಪಿ.ಜಿ.ಜಗನ್ನಿವಾಸ ರಾವ್, ವಿದ್ಯಾ ಆರ್.ಗೌರಿ, ಗೌರಿ ಬನ್ನೂರು, ಕೆ.ಫಾತಿಮತ್ ಝೋರಾ, ಸುಂದರ ಪೂಜಾರಿ ಬಡಾವು, ಶಶಿಕಲಾ ಸಿ.ಎಸ್. ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ನಗರಸಭೆಯ ಸಿಬ್ಬಂದಿ ಜಯಲಕ್ಷ್ಮಿ ಬೇಕಲ್, ಸದಸ್ಯರಾದ ದಿನೇಶ್ ಶೇವಿರೆ, ವಸಂತ ಕಾರೆಕ್ಕಾಡು, ಮೋಹಿನಿ ವಿಶ್ವನಾಥ, ರಾಬಿನ್ ತಾವ್ರೊ, ಪ್ರೇಮ್‌ಕುಮಾರ್‌, ಪದ್ಮನಾಭ ನಾಯ್ಕ ಪಡೀಲು, ಪ್ರೇಮಲತಾ ಜಿ., ನವೀನ್‌ಕುಮಾರ್‌ ಎಂ., ಯಶೋದಾ ಹರೀಶ್ ಪೂಜಾರಿ, ದೀಕ್ಷಾ ಪೈ, ಇಂದಿರಾ ಪಿ., ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಮಮತಾ ರಂಜನ್, ಬಿ.ಶೈಲಾ ಪೈ, ಇಸುಬು, ಬಿ.ಶೀನಪ್ಪ ನಾಯ್ಕ, ಪೂರ್ಣಿಮಾ ಕೋಡಿಯಡ್ಕ, ಶಾರದಾ ಅರಸ್, ಬಶೀರ್ ಅಹಮ್ಮದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT