ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯಕ್ಕೆ ನಲುಗಿದ ಬಾಲೆಯರು: ಜಾಗೃತಿಗೆ ಮುಂದಾದ ಆಡಳಿತ

ತಾಯಂದಿರಲ್ಲಿ ಅವ್ಯಕ್ತ ಆತಂಕ; ಜಾಗೃತಿಗೆ ಮುಂದಾದ ಆಡಳಿತ
Last Updated 30 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ ತೆರವುಗೊಂಡ ನಂತರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ತಾಯಂದಿರ ಮನದಲ್ಲಿ ಅವ್ಯಕ್ತ ಆತಂಕ ಸೃಷ್ಟಿಸಿದೆ. ತೀರಾ ಇತ್ತೀಚೆಗೆ ಹೆಂಚಿನ ಕಾರ್ಖಾನೆ ಆವರಣದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆ ಮಾಡಿರುವ ಪ್ರಕರಣದಿಂದ ಈ ದುಗುಡ ಮತ್ತಷ್ಟು ಹೆಚ್ಚಿದೆ.

ಎಸ್ಸೆಸ್ಸೆಲ್ಸಿ ಓದುತ್ತಿರುವ ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಸುದ್ದಿ, ಸಮಾಜ ಬೆಚ್ಚಿ ಬೀಳುವಂತೆ ಮಾಡಿತ್ತು. ಇನ್ನೊಂದು ಪ್ರಕರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯನ್ನು ನಗರದ ವಸತಿ ನಿಲಯವೊಂದಕ್ಕೆ ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಒಣ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿರುವ ದಂಪತಿಯ ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಬಳಿಕ ಮಗುವನ್ನು ಉಪ್ಪು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಲೆ ಮಾಡುವ ಪ್ರಯತ್ನ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಹೀಗೆ ಒಂದರ ಬೆನ್ನಲ್ಲಿ ಇನ್ನೊಂದು ಪೋಕ್ಸೊ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ‘ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 48 ಪೋಕ್ಸೊ ಪ್ರಕರಣಗಳು ಮತ್ತು ಮಕ್ಕಳ ನ್ಯಾಯ ಸಂಬಂಧಿತ 4 ಪ್ರಕರಣಗಳು ಈ ವರ್ಷ ವರದಿಯಾಗಿವೆ’ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

‘ಆನ್‌ಲೈನ್‌ ತರಗತಿ ವೇಳೆ ಮಕ್ಕಳ ಕೈಗೆ ಹೆಚ್ಚು ಸಮಯ ಮೊಬೈಲ್ ಸಿಕ್ಕಿದ್ದು ಮುಳುವಾಗಿದೆ. ಆನ್‌ಲೈನ್‌ ಚಾಟಿಂಗ್, ನಂತರ ಆಮಿಷಕ್ಕೆ ಒಳಗಾಗಿ ಅಮಾಯಕ ಬಾಲಕಿಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಮೊಬೈಲ್‌ನಲ್ಲಿ ನಿರಂತರ ಚಾಟಿಂಗ್‌ ನಡೆದು, ನಂತರ ಆ ಸಲುಗೆ ದೈಹಿಕ ಸಂಪರ್ಕದವರೆಗೆ ತಲುಪುತ್ತದೆ. ಹದಿಹರೆಯದ ಮಕ್ಕಳಿಗೆ ಇದರ ಮುಂದಿನ ಪರಿಣಾಮದ ಅರಿವು ಇರುವುದಿಲ್ಲ. ಹೀಗೆ, ನಡೆದಿರುವ ಅನೇಕ ಪ್ರಕರಣಗಳು ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ಬಂದಿವೆ’ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ. ‘ಸಂತ್ರಸ್ತ ಬಾಲಕಿಯರ ಕೌನ್ಸೆಲಿಂಗ್ ಮಾಡಿದಾಗ ಬಹುತೇಕ ಪ್ರಕರಣಗಳಲ್ಲಿ ಆನ್‌ಲೈನ್‌ ಚಾಟಿಂಗ್‌ನಲ್ಲಿ ಆರೋಪಿ ಪರಿಚಯ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಸಂತ್ರಸ್ತರಲ್ಲಿ ಹೆಚ್ಚಿನವರು 13ರಿಂದ 17ವರ್ಷದೊಳಗಿನವರಾಗಿದ್ದಾರೆ’ ಎಂದು ಅವರು ತಿಳಿಸಿದರು.

‘ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿ ಮೂರು ಪೋಕ್ಸೊ ಪ್ರಕರಣಗಳಲ್ಲಿ ಒಂದು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಆಗುತ್ತಿರುವುದು ಅಧ್ಯಯನದ ವೇಳೆಗೆ ಗಮನಕ್ಕೆ ಬಂದಿದೆ’ ಎನ್ನುತ್ತಾರೆ ತಜ್ಞರು.

ಮಹಿಳೆಯರು, ಹೆಣ್ಣು ಮಕ್ಕಳಿರುವ ಹೊರ ರಾಜ್ಯ, ಜಿಲ್ಲೆಗಳ ಕಾರ್ಮಿಕರ ತಾಣಗಳಲ್ಲಿ ಭದ್ರತೆ, ಸುರಕ್ಷತೆಯ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳ ಮಾಲೀಕರು ಗಮನ ಹರಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.

‘ಪೊಲೀಸ್ ಸಿಬ್ಬಂದಿ ಕೂಡ ಇಂತಹ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ನಿಗಾ ವಹಿಸುವ ಕಾರ್ಯ ಮಾಡಲಿದ್ದಾರೆ. ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT