ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳು: ವಿವಿಧ ಸಂಘಟನೆಗಳ ಆಕ್ರೋಶ

ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ
Last Updated 28 ಸೆಪ್ಟೆಂಬರ್ 2020, 8:53 IST
ಅಕ್ಷರ ಗಾತ್ರ

ಮಂಗಳೂರು: ಕೃಷಿ ಮಸೂದೆಗಳ ತಿದ್ದುಪಡಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ ಬೆಂಬಲಿಸಿ ಸಮಾನ ಮನಸ್ಕ ಸಂಘಟನೆಗಳು ನಗರದ ಹಂಪನಕಟ್ಟೆಯ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್, ಸಿಪಿಎಂ, ಜೆಡಿಎಸ್ ಪಕ್ಷಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ಯುವ, ಮಹಿಳಾ ಮತ್ತು ಕಾರ್ಮಿಕ ಸಂಘಟನೆಗಳು, ಡಿವೈಎಫ್‌ಐ, ಸಿಐಟಿಯು ಮತ್ತು ದಲಿತ ಸಂಘಟನೆಗಳು ಕೂಡಾ ಈ ಪ್ರತಿಭಟನೆಗೆ ಬೆಂಬಲ ನೀಡಿದೆ.

ಜಿಲ್ಲಾ ರೈತ ಸಂಘದ ಮುಖಂಡ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ, 'ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೃಷಿ ಮಸೂದೆ ಹೂಡಿಕೆದಾರರು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ರಕ್ಷಿಸುತ್ತದೆ. ಕಾಯ್ದೆಗೆ ತಿದ್ದುಪಡಿ ಮಾಡುವ ಮೊದಲು ಯಾವುದೇ ಚರ್ಚೆ ನಡೆಸದೆ ಸರ್ಕಾರ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದೆ. ಈ ಕಾಯ್ದೆಯಿಂದಾಗಿ ಕೃಷಿಯನ್ನೇ ತ್ಯಜಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ. ಬಿ. ಎಸ್‌. ಯಡಿಯೂರಪ್ಪನವರು ಹಸಿರು ಶಾಲು ಧರಿಸಿ ರೈತ ಪರ ಎಂದು ಬಿಂಬಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇಂದು ಸರ್ಕಾರ ರೈತ ವಿರೋಧಿಯಾಗಿದೆ ಎಂದು ಸಾಬೀತುಪಡಿಸಿದೆ' ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್‌ ಡಿಸೋಜ ಮಾತನಾಡಿ, 'ರೈತ ವಿರೋಧಿ ಕೃಷಿ ಮಸೂದೆಗಳನ್ನು ಅಂಗೀಕರಿಸಿದ್ದಕ್ಕಾಗಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಎಲ್ಲಾ ಸಂಘಟನೆಗಳು ಕೈಜೋಡಿಸಿವೆ. ಯಾವುದೇ ಸಮಾಲೋಚನೆ ಅಥವಾ ಚರ್ಚೆಯಿಲ್ಲದೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಸರ್ಕಾರ ಹೂಡಿಕೆದಾರರ ಪರವಾಗಿದ್ದು ರೈತರ ಆರ್ಥಿಕ ಬದುಕನ್ನು ನಾಶಪಡಿಸುತ್ತಿದೆ. ಕಾನೂನು ಬಂಡವಾಳದಾರರಿಗೆ ದಾರಿ ಮಾಡಿಕೊಡುತ್ತದೆ. ರೈತರ ಜೀವನೋಪಾಯದ ಬಾಗಿಲು ಮುಚ್ಚಿ ಅವರ ಉದ್ಯೋಗವನ್ನೇ ಕಸಿದುಕೊಳ್ಳುತ್ತದೆ' ಎಂದು ಹೇಳಿದರು.

ಕಾನೂನು ಸರಿಯಾಗಿದ್ದರೆ ಮತ್ತು ರೈತರಿಗೆ ಅನುಕೂಲಕರವಾಗಿದ್ದರೆ, ಶಿರೋಮಣಿ ಅಕಾಲಿದಳ ನರೇಂದ್ರ ಮೋದಿ ಸಚಿವ ಸಂಪುಟದಿಂದ ಏಕೆ ಹೊರಗೆ ಬಂತು ಎಂದು ಪ್ರಶ್ನಿಸಿದ ಅವರು, ಸಂಪುಟದಲ್ಲಿ ಈ ರೈತ ವಿರೋಧಿ ಕೃಷಿ ಮಸೂದೆಗಳಿಗೆ ಯಾವುದೇ ಬೆಂಬಲವಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಈ ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಹೇಳಿದರು.

ಜಿಲ್ಲಾ ಹಸಿರು ಸೇನೆ ಮುಖಂಡರಾದ ರವಿಕಿರಣ ಪುಣಚ, ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಜೆಡಿಎಸ್ ನಾಯಕಿ ಸುಮತಿ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ, ಪಿ.ವಿ.ಮೋಹನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಾಲೆಟ್ ಪಿಂಟೊ, ಸಿಐಟಿಯು ಮುಖಂಡರಾದ ಜೆ. ಬಾಲಕೃಷ್ಣ, ಜೆಎಂಎಸ್‌ ನಾಯಕಿಯರಾದ ಭಾರತಿ ಬೋಳಾರ್‌, ಜಯಂತಿ ಶೆಟ್ಟಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT