ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಗಾರ ರೈತರ ಆಸ್ತಿ ಹರಾಜು ತಡೆಯಲು ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
Last Updated 18 ನವೆಂಬರ್ 2022, 14:11 IST
ಅಕ್ಷರ ಗಾತ್ರ

ಮಂಗಳೂರು: ‘ಸಾಲ ಮರುಪಾವತಿ ಮಾಡದ ರೈತರ ಆಸ್ತಿಯನ್ನು ಬ್ಯಾಂಕ್‌ಗಳು ಹರಾಜು ಹಾಕುವುದನ್ನು ತಡೆಯಲು ಕಾನೂನು ರೂಪಿಸುವ ದಿಟ್ಟ ಹೆಜ್ಜೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಟ್ಟಿದ್ದಾರೆ. ಶೀಘ್ರವೇ ಇದು ಜಾರಿಗೆ ಬರುವ ನಿರೀಕ್ಷೆ ಇದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

‘69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022’ರ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಆಶ್ರಯದಲ್ಲಿ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‌‘ಸಹಕಾರಿ ಬ್ಯಾಂಕ್‌ಗಳು ಸಾಲಗಾರರಿಗೆ ಕಿರುಕುಳ ನೀಡುತ್ತಿಲ್ಲ. ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸುತ್ತಿದ್ದು, ಡಿಸಿಸಿ ಬ್ಯಾಂಕ್‌ಗಳ ಸಾಲ ವಸೂಲಾತಿ ಪ್ರಮಾಣ ಶೇ 90ಕ್ಕಿಂತಲೂ ಹೆಚ್ಚು ಇದೆ. ಮಹಿಳೆಯರ ಸ್ವಸಹಾಯ ಗುಂಪುಗಳಂತೂಶೇ 100ರಷ್ಟು ಸಾಲಮರುಪಾವತಿ ಮಾಡುತ್ತಿವೆ’ ಎಂದರು.

‘ಹೈನುಗಾರರ ವರಮಾನ ದ್ವಿಗುಣಗೊಳಿಸಲು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಕ್ರಮಕೈಗೊಂಡಿದೆ. ಇತ್ತೀಚೆಗೆ ಯಾವುದೇ ಸಹಕಾರಿ ಬ್ಯಾಂಕ್‌ ಸ್ಥಾಪನೆಗೂ ಭಾರತೀಯ ರಿಸರ್ವ್‌ ಬ್ಯಾಂಕ್ ಅನುಮತಿ ನೀಡಿಲ್ಲ. ಕೇಂದ್ರ ಹಣಕಾಸು ಸಚಿವರಾರ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿಯವರು ಈ ಸಹಕಾರಿ ಬ್ಯಾಂಕ್‌ ಸ್ಥಾಪನೆಯ ಉದ್ದೇಶವನ್ನು ಮನವರಿಕೆ ಮಾಡಿದ್ದಾರೆ. ಆರ್‌ಬಿಐ ಅಧಿಕಾರಿಗಳ ಜೊತೆ ಇದೇ 25ರಂದು ಸಭೆ ನಿಗದಿಯಾಗಿದ್ದು, ಈ ಸಹಕಾರಿ ಬ್ಯಾಂಕ್‌ ಸ್ಥಾಪನೆಗೆ ಅನುಮತಿ ಸಿಗುವ ವಿಶ್ವಾಸವಿದೆ’ ಎಂದರು.

‘ಸರ್ಕಾರ ಈ ವರ್ಷವೂ ರೈತರಿಗೆ ₹ 3 ಲಕ್ಷದವರೆಗೆ ಶೂನ್ಯ ಬಡ್ಡಿದರದ ಸಾಲ ಒದಗಿಸಲಿದೆ. 3 ಲಕ್ಷ ಹೊಸ ರೈತರೂ ಸೇರಿ ಒಟ್ಟು ‌33 ಲಕ್ಷ ಪ್ರಯೋಜನ ಸಿಗಲಿದೆ’ ಎಂದರು.

‘ಯಶಸ್ವಿನಿ ಯೋಜನೆಯ ಮರುಜಾರಿಗಾಗಿ ಬಜೆಟ್‌ನಲ್ಲಿ ₹ 300 ಕೋಟಿ ಮೀಸಲಿಟ್ಟಿದ್ದು, ₹ 100 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ಇರುವ ಅಡ್ಡಿಗಳನ್ನು ಸರಿಪಡಿಸಿ, ಆದಷ್ಟು ಹೆಚ್ಚು ಸಹಕಾರಿಗಳಿಗೆ ಅನುಕೂಲವಾಗುವಂತೆ ಮಾಡಲಿದ್ದೇವೆ’ ಎಂದರು.

‘ನಬಾರ್ಡ್‌ನಿಂದ ಸಿಗುವ ಸಾಲದ ಮೊತ್ತವನ್ನು ದ್ವಿಗುಣಗೊಳಿಸಲು ಬೇಡಿಕೆ ಸಲ್ಲಿಸಲಾಗಿದೆ. ಸಹಕಾರಿ ಸಂಘಗಳಿಂದ ಸಿಗುವ ಸಾಲ ಸಾಕಾಗದೇ ಕೆಲ ರೈತರು ರಾಷ್ಟ್ರೀಯ ಬ್ಯಾಂಕ್‌ಗಳ ಮೊರೆ ಹೋಗುತ್ತಿದ್ದಾರೆ. ಸಂಪೂರ್ಣ ಸಾಲವನ್ನು ರೈತರು ಸಹಕಾರಿ ಸಂಘಗಳಿಂದಲೇ ಪಡೆಯುವಂತಾಗಬೇಕು’ ಎಂದರು.

ರಾಜ್ಯ ಸಹಕಾರ ಮಾರಾಟ ಮಂಡಳಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಸಹಕಾರ ರತ್ನ ಪ್ರಶಸ್ತಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ನಿತ್ಯಾನಂದ ಮುಂಡೋಡಿ, ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕೊಂಕೋಡಿ ಪದ್ಮನಾಭ, ದಂಬೆಕ್ಕಾನ ಸದಾಶಿವ ರೈ ಹಾಗೂ ಯಶಪಾಲ ಸುವರ್ಣ ಅವರನ್ನು ಅಭಿನಂದಿಸಲಾಯಿತು.

ಶಾಸಕ ವೇದವ್ಯಾಸ ಡಿ. ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ, ಸಹಕಾರ ಸಂಘಗಳ ನಿಬಂಧಕರಾದ ಕ್ಯಾ.ಕೆ.ರಾಜೇಂದ್ರ, ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಐಕಳಬಾವ ದೇವಿಪ್ರಸಾದ ಶೆಟ್ಟಿ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ಸೂರಿಂಜೆ, ಸಿಇಒ (ಪ್ರಭಾರ) ಗೊಪಾಲಕೃಷ್ಣ ಭಟ್ ಹಾಗೂ ಇತರರು ಇದ್ದರು.

ಟಿ.ಜಿ. ರಾಜರಾಮ ಭಟ್ ಸ್ವಾಗತಿಸಿದರು. ನಿತೀಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

ಅದ್ಧೂರಿ ಸಹಕಾರ ಜಾಥಾ
ಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿಯಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ ಜಾಥಾ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆ, ಕಂಬಳದ ಕೋಣಗಳ,ಉಳುಮೆಯ ಎತ್ತುಗಳ ಪ್ರತಿಕೃತಿಗಳು, ಅಡಿಕೆ ಕೃಷಿ, ರಬ್ಬರ್‌ ಬೆಳೆ, ಭತ್ತದ ಕೊಯಿಲೋತ್ತರ ಕೆಲಸ, ತೆಂಗಿನಕಾಯಿಯ ಸಿಪ್ಪೆ ಸುಲಿಯುವುದನ್ನು ಬಿಂಬಿಸುವ ಸ್ತಬ್ಧಚಿತ್ರ ಚಿತ್ರಗಳು ಗಮನಸೆಳೆದವು. ಗಣ್ಯರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ನಂದಿನಿ, ಬೆಣ್ಣೆ, ಮಜ್ಜಿಗೆ ಬಿಡುಗಡೆ
ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಮಸಾಲ ಮಜ್ಜಿಗೆ ಹಾಗೂ ಉಪ್ಪುರಹಿತ ಬೆಣ್ಣೆ ಉತ್ಪನ್ನಗಳನ್ನು ಸಮುದ್ರಮಥನದ ಯಕ್ಷರೂಪಕದ ವಿನೂತನ ಪ್ರಯೋಗದ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

*
ಎಂ.ಎನ್‌.ರಾಜೇಂದ್ರ ಕುಮಾರ್‌ ಚಾಣಾಕ್ಯ ವ್ಯಕ್ತಿ. ಅವರನ್ನು ಕೆಣಕಿದವರು ಶಾಸಕರಾಗಲು ಸಾಧ್ಯವಿಲ್ಲ
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

*
ನಾರಿ ಶಕ್ತಿ ಹಾಗೂ ಸಹಕಾರ ಶಕ್ತಿ ಒಂದಾದರೆ ಅವರನ್ನು ತಡೆಯುವುದು ಕಷ್ಟ. ದೇಶದ ಅಭಿವೃದ್ಧಿಗೆ ಇವೆರಡರ ಕೊಡುಗೆ ಮಹತ್ವದ್ದು
-ಎಂ.ಎನ್‌.ರಾಜೇಂದ್ರ ಕುಮಾರ್‌, ರಾಜ್ಯ ಸಹಕಾರ ಮಾರಾಟ ಮಂಡಳಿ ಅಧ್ಯಕ್ಷ

*
ಸಹಕಾರ ಕ್ಷೇತ್ರವನ್ನು ಕೇಂದ್ರ ಸರ್ಕಾರದ ಕಪಿಮುಷ್ಠಿಗೆ ಒಪ್ಪಿಸಬೇಡಿ. ರಾಜ್ಯಗಳ ಗೌರವ ಉಳಿಸುವ ಕೆಲಸ ಆಗಲಿ
-ಯು.ಟಿ.ಖಾದರ್‌, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT