'ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿನ ಖಾತೆಯನ್ನು ತಮ್ಮ ಹೆಸರಿಗೆ ಬದಲಾಯಿಸಲು 2017ರಲ್ಲಿ ಕೌಕ್ರಾಡಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದೇ ಇದ್ದುದರಿಂದ 2021ನೇ ಇಸವಿಯಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಶುಲ್ಕವನ್ನು ಸಂದಾಯ ಮಾಡಿದರೂ ಸಹ ಅವರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ. ಹಾಗಾಗಿ ಅವರು 2023ರ ಜೂನ್ 20 ರಂದು ಕೌಕ್ರಾಡಿ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದರು. ಆಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್.ಜಿ.ಎನ್ ಅವರು ಈ ಕೆಲಸ ಮಾಡಿಕೊಡಲು ₹ 20,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರ ವ್ಯಕ್ತಿ ನಮಗೆ ದೂರು ನೀಡಿದ್ದರು' ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. 'ಆರೋಪಿ ಪಿಡಿಒ ಅವರು ಬುಧವಾರ ಅರ್ಜಿದಾರದಿಂದ ₹ 20,000 ಲಂಚದ ಹಣವನ್ನು ಪಡೆದಿದ್ದು, ತಕ್ಷಣವೇ ಅವರನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಿದ್ದೇವೆ. ಅವರು ಅರ್ಜಿ ದಾರರಿಂದ ಪಡೆದ ಲಂಚದ ಹಣವನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ, ಪೊಲೀಸ್ ವರಿಷ್ಠಾಧಿಕಾರಿ ಸಿ.ಎ.ಸೈಮನ್ ತಿಳಿಸಿದ್ದಾರೆ.