ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಶಿಕ್ಷಕರಿಗೆ 3 ತಿಂಗಳಿಂದ ಗೌರವಧನ ಇಲ್ಲ

ಸೆ. 26ರಂದು ಸಂಘದಿಂದ ಪ್ರತಿಭಟಿಸುವ ಎಚ್ಚರಿಕೆ
Last Updated 13 ಸೆಪ್ಟೆಂಬರ್ 2022, 15:42 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಈ ಬಾರಿ ಶೈಕ್ಷಣಿಕ ವರ್ಷ ಆರಂಭವಾದ ಮೇ 15ರಿಂದ ಈವರೆಗೆ ಸರ್ಕಾರ ಗೌರವಧನ ನೀಡಿಲ್ಲ. ಮೂರು ತಿಂಗಳುಗಳಿಂದ ಬಿಡಿಗಾಸು ದೊರೆಯದೆ ಪಾಠ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ಸೆ.25ರೊಳಗೆ ಗೌರವಧನ ನೀಡದಿದ್ದರೆ ಸೆ. 26ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಘಟಕ ಎಚ್ಚರಿಸಿದೆ.

ಸಂಘದ ಕಾರ್ಯದರ್ಶಿ ಚಿತ್ರಲೇಖಾ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರ ಗೌರವಧನ ನೀಡದಿದ್ದರೆ ಸೆ.26ರಂದು ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯಲ್ಲಿ 750 ಮಂದಿ ಅತಿಥಿ ಶಿಕ್ಷಕರಿದ್ದು, 500ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಶಾಲೆಯಲ್ಲಿ ಪಾಠಗಳಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ದಸರಾ ರಜೆಯ ಮೊದಲ ದಿನವೇ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಗೌರವಧನ ಸಿಗದೇ ಹಬ್ಬ ಆಚರಿಸಲೂ ಹಣವಿಲ್ಲದಂತಾಗಿದೆ’ ಎಂದರು.

‘ಅತಿಥಿ ಶಿಕ್ಷಕರಿಗೆ ಸರ್ಕಾರ ಈ ಹಿಂದೆ ತಿಂಗಳಿಗೆ ₹ 7,500 ಗೌರವಧನ ನೀಡುತ್ತಿತ್ತು. ಹಲವು ಬಾರಿ ಮನವಿ ನೀಡಿದ ಬಳಿಕ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ₹ 10 ಸಾವಿರ ಗೌರವಧನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಗೌರವಧನವನ್ನು ಪ್ರತಿ ತಿಂಗಳು ನಿಯಮಿತವಾಗಿ ನೀಡಬೇಕು. ಅನುಭವದ ಆಧಾರದ ಮೇಲೆ ಪ್ರತಿ ವರ್ಷ ನಮ್ಮನ್ನು ಕರ್ತವ್ಯದಲ್ಲಿ ಮುಂದುವರೆಸಬೇಕು. ಗೌರವಧನವನ್ನು ಕನಿಷ್ಠ ವೇತನಕ್ಕೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷೆ ಚಂದ್ರಿಕಾ, ತಾಲ್ಲೂಕು ಕಾರ್ಯದರ್ಶಿ ಭವ್ಯಾ, ಉಪಾಧ್ಯಕ್ಷೆ ಸೌಮ್ಯಾ, ಬಂಟ್ವಾಳ ತಾಲ್ಲೂಕು ಅಧ್ಯಕ್ಷೆ ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT