ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ | ಬೇಡ ಅನುಕರಣೆ; ಇರಲಿ ಅನುಸರಣೆ: ಸುಜಯೀಂದ್ರ ಹಂದೆ

‘ಯಕ್ಷ ಸುಮತಿ’ ವಿಚಾರಗೋಷ್ಠಿಯ ಸಮನ್ವಯಕಾರ ಸುಜಯೀಂದ್ರ ಹಂದೆ ಸಲಹೆ
Published 17 ಮಾರ್ಚ್ 2024, 4:16 IST
Last Updated 17 ಮಾರ್ಚ್ 2024, 4:16 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಗಾನದಲ್ಲಿ ಈಚೆಗೆ ಅನುಕರಣೆ ಹೆಚ್ಚಾಗಿದೆ. ಸಾಮಾಜಿಕ ತಾಣಗಳನ್ನು ನೋಡಿ ಕಲಿತು ಪ್ರದರ್ಶನ ನೀಡುವ ಪರಿಪಾಠ ಬೆಳೆಯುತ್ತಿದೆ. ಮಹಿಳೆಯರು ಪುರುಷ ಕಲಾವಿದರ ಅನುಕರಣೆ ಮಾಡಲು ಪ್ರಯತ್ನಿಸುತ್ತಾರೆ. ಈ ಪ್ರವೃತ್ತಿ ತೊಲಗಬೇಕು ಎಂದು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರಿಂಜದ ಯಕ್ಷಾವಾಸ್ಯಮ್, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ವಿವಿ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ವಿಭಾಗಗಳ ಆಶ್ರಯದಲ್ಲಿ ವಂಡಾರಿನ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಮಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಯಕ್ಷಗಾನ ಕಲಾವಿದೆಯರ ಸಾಧನೆಯ ಸಂಭ್ರಮದ ಸಮ್ಮಿಲನ 'ಯಕ್ಷ ಸುಮತಿ'ಯ ವಿಚಾರಗೋಷ್ಠಿಯ ಸಮನ್ವಯಕಾರರಾಗಿ ಅವರು ಮಾತನಾಡಿದರು.

ಕಲೆಯಲ್ಲಿ ತೊಡಗಿಸಿಕೊಂಡವರಿಗೆ ಶ್ರದ್ಧೆ ಮುಖ್ಯ. ಯಕ್ಷಗಾನದಲ್ಲಿ ಈಗ ಯುಟ್ಯೂಬ್‌ ಚಾನಲ್‌ಗಳೇ ಅಧ್ಯಯನಕ್ಕೆ ಮೂಲ ಅಗುತ್ತಿವೆ. ಅನುಕರಣೆಗಿಂತ ಅನುಸರಣೆ ಮುಖ್ಯವಾಗಬೇಕಾಗಿದೆ. ಇಲ್ಲವಾದರೆ ಯಕ್ಷಗಾನದಲ್ಲಿ ನಮ್ಮತನ ಇಲ್ಲದಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಯಕ್ಷಗಾನದಲ್ಲಿ ಈಚೆಗೆ ತೋರಿಕೆ ಹೆಚ್ಚಾಗುತ್ತಿದೆ. ಬಡಗು ತಿಟ್ಟಿನಲ್ಲಿ ಮೊದಲ ವೇಷ ಭಾಗವತರದು ಎಂಬ ಮಾತು ಇದೆ. ಆದರೆ ಈಗ ಸಂಗೀತ ಮತ್ತು ಭಾಗವತಿಕೆಯ ನಡುವಿನ ವ್ಯತ್ಯಾಸ ತಿಳಿಯದಷ್ಟು ಅಬ್ಬರ ಹೆಚ್ಚುತ್ತಿದೆ. ಭಾಗವತಿಕೆ ಕೆಲವೊಮ್ಮೆ ಆರ್ಕೆಸ್ಟ್ರಾದ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದ ಅವರು ಹೊಸಯುಗದ ಯಕ್ಷಗಾನದಲ್ಲಿ ಎಡಿಟಿಂಗ್‌ ಪರಿಕಲ್ಪನೆ ಬೆಳೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಆಧುನಿಕ ಪ್ರೇಕ್ಷಕರ ಅನುಕೂಲಕ್ಕಾಗಿ ಸಮಯ ಮೊಟಕು ಮಾಡಲಾಗುತ್ತಿದೆ. ಹಾಗೆ ಆದ ಮಾತ್ರಕ್ಕೆ ಯಕ್ಷಗಾನ ಕೆಟ್ಟುಹೋಯಿತು ಎನ್ನಲಾಗದು. ಕೆಲವು ಸಂದರ್ಭಗಳಲ್ಲಿ ಕಾಲಹರಣ ಮಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಬಾರದು ಎಂದು ಅವರು ಹೇಳಿದರು.

ಯಕ್ಷಗಾನದಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಪುರುಷರು ಮಾಡುವ ತಪ್ಪುಗಳು ಮಹಿಳೆಯರಿಂದ ಮುಂದುವರಿಯುವುದು ಬೇಡ. ಆಯುಧಗಳ ಬಳಕೆ, ನಡೆ ಇತ್ಯಾದಿ ಎಲ್ಲದಕ್ಕೂ ಗೌರವ ಸಿಕ್ಕಿದರೆ ಮಾತ್ರ ಪ್ರದರ್ಶನಗಳು ಯಕ್ಷಗಾನೀಯ ಆಗಲು ಸಾಧ್ಯ.

ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜು ಉಪನ್ಯಾಸಕಿ ದಿವ್ಯಶ್ರೀ ಡೆಂಬಳ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಶಿವಕುಮಾರ್ ಅಳಗೋಡು, ಶಕ್ತಿನಗರದ ಶಕ್ತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುನಿಲ್ ಕುಮಾರ್ ಪಲ್ಲಮಜಲು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಕಲ್ಲಡ್ಕ ಪ್ರಬಂಧ ಮಂಡಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಮಾಧವ ಎಂ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಡಾ.ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಧನಂಜಯ ಕುಂಬ್ಳೆ, ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕಣಿಪುರ ಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮತ್ತು ವಂಡಾರು ನಾದನೂಪುರ ಯಕ್ಷೋತ್ಥಾನ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ವಂಡಾರು ಪಾಲ್ಗೊಂಡಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರನ್ನು ಸನ್ಮಾನಿಸಲಾಯಿತು. ತಲಕಳದ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಕಲಾವಿದೆಯರು ಪ್ರಸ್ತುತಪಡಿಸಿದ, ಹರಿನಾರಾಯಣ ಬೈಪಾಡಿತ್ತಾಯ ಅವರ ನಿರ್ದೇಶನದ ‘ಅಬ್ಬರತಾಳ’ ನಾದಪ್ರಿಯರಿಗೆ ರಸರೋಮಾಂಚನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT