ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದ್ರೋಳಿ ಕ್ಷೇತ್ರಕ್ಕೆ ಹರಿಕೃಷ್ಣ ಬಂಟ್ವಾಳರಿಂದ ಅವಮಾನ: ಬೇಬಿ ಕುಂದರ್‌

Last Updated 17 ಸೆಪ್ಟೆಂಬರ್ 2022, 5:22 IST
ಅಕ್ಷರ ಗಾತ್ರ

ಮಂಗಳೂರು: ‘ಕುದ್ರೋಳಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಿದರೆ 100 ಜನರೂ ಸೇರುವುದಿಲ್ಲ ಎನ್ನುವ ಮೂಲಕ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಕ್ಷೇತ್ರಕ್ಕೆ ಅವಮಾನ ಮಾಡಿದ್ದಾರೆ. ಅವರು ಕ್ಷೇತ್ರದ ಭಕ್ತರ ಕ್ಷಮೆ ಯಾಚಿಸಬೇಕು’ ಎಂದು ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬೇಬಿ ಕುಂದರ್‌ ಆಗ್ರಹಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘1983ರಲ್ಲಿ ಆರ್‌ಎಸ್‌ಎಸ್‌ನಲ್ಲಿದ್ದ ಹರಿಕೃಷ್ಣ ಬಂಟ್ವಾಳ ಅವರು ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣಕ್ಕೆ ಆ ಪಕ್ಷವನ್ನು ತೊರೆದಿದ್ದರು. ಕಾಂಗ್ರೆಸ್‌ಗೆ 1984ರಲ್ಲಿ ಸೇರ್ಪಡೆಗೊಂಡ ಬಳಿಕವೂ ಮೂರು ಸಲ ಅಮಾನತುಗೊಂಡಿದ್ದಾರೆ. ಅವರಿಗೆ ಕಾಂಗ್ರೆಸ್‌ ಮುಖಂಡ ರಮಾನಾಥ ‌ರೈ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ’ ಎಂದರು.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೇ ಇದ್ದಾಗಲೂ ಹರಿಕೃಷ್ಣ ಅವರು ಪಕ್ಷ ತೊರೆದಿರಲಿಲ್ಲ. ಈ ವೇಳೆ ಉಡುಪಿಯ ಗುತ್ತಿಗೆದಾರರೊಬ್ಬರನ್ನು ಭೇಟಿ ಆದ ಬಳಿಕ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದರು. ಆ ಗುತ್ತಿಗೆದಾರರಿಂದ ಅವರಿಗೆ ಯಾವ ಆಶ್ವಾಸನೆ ಸಿಕ್ಕಿತೋ, ಅಥವಾ ಗಂಟು ಸಿಕ್ಕಿತೋ ಗೊತ್ತಿಲ್ಲ. ಆ ಚುನಾವಣೆಯಲ್ಲಿ ಅವರಿಗೆ ಸಿಕ್ಕಿದ್ದು, 127 ಮತಗಳು ಮಾತ್ರ. ಅವರಿಗೆ ಎಷ್ಟು ಜನಬೆಂಬಲ ಇದೆ ಎಂಬುದು ಆಗಲೇ ಸಾಬೀತಾಗಿದೆ’ ಎಂದರು.

‘ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಗೆದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಹರಿಕೃಷ್ಣ ಅವರು ಹೇಳಿದ್ದಾರೆ. ಸನ್ಯಾಸ ಸ್ವೀಕರಿಸಲಿಕ್ಕೆ ಅವರಿಗೆ ಈಗ ರಾಜಕೀಯ ಅಸ್ತಿತ್ವವೇ ಇಲ್ಲ’ ಎಂದರು.

‘ಹರಿಕೃಷ್ಣ ಅವರನ್ನು ಹತ್ತಿರ ಸೇರಿಸಿಕೊಂಡ ಬಳಿಕ ಜನಾರ್ಧನ ಪೂಜಾರಿ ಅವಿಗೂ ಶನಿ ಹಿಡಿದ ಹಾಗೆ ಆಗಿದೆ. ಆ ಬಳಿಕ ಪೂಜಾರಿ ಚುನಾವಣೆಗಳನ್ನು ಸೋಲುತ್ತಾ ಬಂದರು. ಅವರ ಈಗಿನ ವರ್ತನೆ ನೋಡಿದರೆ 2014ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಜೊತೆ ಸೇರಿ ಜನಾರ್ದನ ಪೂಜಾರಿ ಸೋಲಿಗೆ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಸಂಶಯ ಕಾಡುತ್ತಿದೆ’ ಎಂದರು.

ಪಕ್ಷದ ಮುಖಂಡರಾದ ಉಮೇಶ್ ದoಡೇಕೇರಿ, ರಾಜಾರಾಮ್, ಸುದೀಪ್ ಕುಮಾರ್ ಶೆಟ್ಟಿ, ನೀರಜ್ ಚಂದ್ರ ಪಾಲ್, ಯಶವಂತ್ ಪ್ರಭು, ಚಂದ್ರಹಾಸ ಪೂಜಾರಿ ಇ‌ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT