ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಸ್ಲಿಂ ಆರಾಧನಾ ಬಗ್ಗೆ ದ್ವೇಷಪೂರಿತ ಹೇಳಿಕೆ: ಪೂಂಜ ವಿರುದ್ಧ ಸ್ಪೀಕರ್‌ಗೆ ದೂರು

Published 15 ಜೂನ್ 2024, 15:16 IST
Last Updated 15 ಜೂನ್ 2024, 15:16 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಮುಸ್ಲಿಂ ಸಮುದಾಯದ ಧಾರ್ಮಿಕ ಆರಾಧನಾ ಕೇಂದ್ರಗಳ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ‌ ಕೈಗೊಳ್ಳಬೇಕು’ ಎಂದು ಆಗ್ರಹಿಸಿ‌ ಬೆಳ್ತಂಗಡಿ ತಾಲ್ಲೂಕು ಜಮಾಅತ್‌ಗಳ ಒಕ್ಕೂಟದಿಂದ ಶನಿವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಗೂ ವಿಧಾನ ಸಭಾಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಲಾಯಿತು.

ತಾಲ್ಲೂಕಿನ ಜಮಾಅತ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಆಯಾ ಪ್ರದೇಶದ ಜಮಾಅತ್ ಪ್ರಮುಖರನ್ನೊಳಗೊಂಡ ‘ತಾಲೂಕು ಜಮಾಅತ್ ಒಕ್ಕೂಟ’ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಿ ಬಳಿಕ ಈ ದೂರು ಸಲ್ಲಿಸಲಾಯಿತು.

‘ಜಿಲ್ಲೆಯಲ್ಲಿರುವ ಎಲ್ಲ ಮಸೀದಿಗಳನ್ನು ತಪಾಸಣೆಗೆ ಒಳಪಡಿಸಬೇಕು. ಅನೇಕ ವರ್ಷಗಳಿಂದ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಈ‌ ಬಗ್ಗೆ ಆಗ್ರಹ ಮಾಡುತ್ತಿದೆ’ ಎಂದು ಶಾಸಕರು ನೀಡಿರುವ ದ್ವೇಷಪೂರಿತ ಹೇಳಿಕೆಯ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಖಂಡನಾ ಸಭೆ ನಡೆಸಲಾಯಿತು.

‘ಶಾಸಕರ ಈ‌ ಹೇಳಿಕೆಯಿಂದ ಸಾರ್ವಜನಿಕವಾಗಿ ಆತಂಕ ಉಂಟಾಗಿದೆ. ಸಮಾಜದ ಶಾಂತಿ ಮತ್ತು ಸೌಹಾರ್ದ ಕೆಡಿಸಿ ಗಲಭೆ ಸೃಷ್ಟಿಸುವ ಹುನ್ನಾರ ಇದೆ. ರಾಜ್ಯದ ಕೋಮು ಸೌಹಾರ್ದ ಕದಡಲು ಈ ಹೇಳಿಕೆ ಪ್ರಚೋದನೆ ನೀಡುವಂತಿದೆ. ಆದ್ದರಿಂದ ಅವರ ವಿರುದ್ಧ ಶೀಘ್ರ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಲಾಯಿತು.

ಇನ್‌ಸ್ಪೆಕ್ಟರ್‌ ಬಿ.ಜಿ.ಸುಬ್ಬಾಪುರಮಠ್ ಅವರು ದೂರು ಅರ್ಜಿ ಸ್ವೀಕರಿಸಿ, ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ಜರುಗಿಸುವ ಭರವಸೆ ನೀಡಿದರು.‌

ನಿಯೋಗದಲ್ಲಿ ತಾಲ್ಲೂಕಿನ ವಿವಿಧ ಜಮಾಅತ್‌ಗಳ ಪದಾಧಿಕಾರಿಗಳು, ‌ಸಮುದಾಯ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT