ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿನದಲ್ಲಿ ಒಬ್ಬ ಬಡರೋಗಿಗಾದರೂ ನೆರವಾಗಿ

ಫಾದರ್‌ ಮುಲ್ಲರ್ಸ್‌ ದತ್ತಿ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ರಮೇಶ್ಚಂದ್ರ ಸಲಹೆ
Published 19 ಮಾರ್ಚ್ 2024, 5:22 IST
Last Updated 19 ಮಾರ್ಚ್ 2024, 5:22 IST
ಅಕ್ಷರ ಗಾತ್ರ

ಮಂಗಳೂರು: ‘ದಿನದಲ್ಲಿ ಕನಿಷ್ಠ ಪಕ್ಷ ಒಬ್ಬ ಬಡರೋಗಿಗೆ ನೆರವಾದರೂ ವೈದ್ಯಕೀಯ ವೃತ್ತಿ ಬದುಕು ಸಾರ್ಥಕವಾಗುತ್ತದೆ. ಹೆಚ್ಚು ಹಣ ಸಂಪಾದಿಸಬಹುದು ಎಂಬ ಕಾರಣಕ್ಕೆ ವೃತ್ತಿಜೀವನಕ್ಕೆ ನಗರವನ್ನೇ ನೆಚ್ಚಿಕೊಳ್ಳದಿರಿ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವತ್ತಲೂ ಗಮನಹರಿಸಿ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎವಿಎಸ್ ರಮೇಶ್ಚಂದ್ರ‌ ಸಲಹೆ ನೀಡಿದರು.

ಫಾದರ್‌ ಮುಲ್ಲರ್ಸ್‌ ದತ್ತಿ ಶಿಕ್ಷಣ ಸಂಸ್ಥೆಗಳ (ಎಫ್‌ಎಂಸಿಐ) ಪದವಿ ಪ್ರದಾನ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಸೋಮವಾರ ಮಾತನಾಡಿದರು.

‘ವೃತ್ತಿ ಬದುಕಿನಲ್ಲಿ ಬೆಳವಣಿಗೆಯನ್ನು ಎಲ್ಲರೂ ಎದುರು ನೋಡುತ್ತಾರೆ. ಬೆಳವಣಿಗೆಗೂ ಪ್ರಗತಿಗೂ ವ್ಯತ್ಯಾ‌ಸವಿದೆ. ಪ್ರಗತಿಯ ಜೊತೆ ನೈತಿಕತೆಯೂ ಬೆಸೆದಿರುತ್ತದೆ. ವೃತ್ತಿಬದುಕಿನಲ್ಲಿ ಪ್ರಗತಿಯ ಜೊತೆ ಯಶಸ್ಸನ್ನೂ ಗಳಿಸಬೇಕಾದರೆ ಮೌಲ್ಯವನ್ನೂ ಅಳವಡಿಸಿಕೊಳ್ಳಬೇಕಾಗುತ್ತದೆ. ತಾಯ್ನೆಲದ ಋಣ ತೀರಿಸುವತ್ತ ಹಾಗೂ ಮಾನವ ಘನತೆ ಎತ್ತಿಹಿಡಿಯುವತ್ತಲೂ ಚಿತ್ತಹರಿಸಬೇಕು’ ಎಂದರು.

‘ವೈದ್ಯಕೀಯ ವೃತ್ತಿಯ ಮಹತ್ವ ಏನೆಂಬುದನ್ನು ಕೋವಿಡ್‌ ಮಹಾಮಾರಿ ತೋರಿಸಿಕೊಟ್ಟಿದೆ. ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ನಿದ್ದೆಗೆಟ್ಟು ಸಾವಿರಾರು ಮಂದಿಯ ಪ್ರಾಣ ಉಳಿಸಿದ್ದಾರೆ.  ಜಗತ್ತು ನಮ್ಮ ದೇಶದ ನಾಯಕತ್ವವನ್ನು ಎದುರು ನೋಡುತ್ತಿದೆ. ಶಿಕ್ಷಣ ಪೂರೈಸಿದ ತಕ್ಷಣ ವಿದೇಶಕ್ಕೆ ಹಾರುವ ಬದಲು ಕನಿಷ್ಟ ಎರಡು ವರ್ಷವಾದರೂ ತಾಯ್ನೆಲದಲ್ಲಿ ಕೆಲಸ ಮಾಡಿ’ ಎಂದರು.   

ನವದೆಹಲಿಯ ಲೇಡಿ ಹಾರ್ಡಿಂಗ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ನಿರ್ದೇಶಕ  ಡಾ.ಸುಭಾಷ್‌ಗಿರಿ, ‘ದೇಶದಲ್ಲಿ ಬಡವ– ಬಲ್ಲಿದರ ನಡುವಿನ ಅಂತರ ಹೆಚ್ಚುತ್ತಿದೆ. ಒಂದೆಡೆ ಅತ್ಯಾಧುನಿಕ ಸೌಕರ್ಯಗಳು ಲಭ್ಯವಿದ್ದರೆ, ಚಿಕಿತ್ಸೆಗಾಗಿ ಮನೆ, ಭೂಮಿಯನ್ನೆಲ್ಲ ಮಾರಿಕೊಳ್ಳುವ ಸ್ಥಿತಿಯೂ ನಮ್ಮಲ್ಲಿದೆ. ವೈದ್ಯಕೀಯ ವೃತ್ತಿ ನಿರತರು ಹಣದ ಹಿಂದೆ ಓಡದೇ, ಸಮಾಜದಿಂದ ಪಡೆದುಕೊಂಡಿದ್ದರಲ್ಲಿ ಒಂದಂಶವನ್ನಾದರೂ ಮರಳಿಸುವ ಔದಾರ್ಯ ಹೊಂದಬೇಕು’ ಎಂದರು.   

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಪೀಟರ್ ಪಾವ್ಲ್‌ ಸಲ್ಡಾನ, ‘ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯೂ ಭಾರಿ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ರೋಗಿಗಳ ಹೃದಯದಲ್ಲಿ ಆಶಾವಾದವನ್ನು ತುಂಬುವವರು ವೈದ್ಯರು ಮತ್ತು ಶುಶ್ರೂಷಕಿಯರು’ ಎಂದರು.

ಎಫ್‌ಎಂಸಿಐ ನಿರ್ದೇಶಕ ಫಾ.ರಿಚರ್ಡ್‌ ಅಲೋಷಿಯಸ್‌ ಕೊವೆಲ್ಲೊ, ‘144 ವರ್ಷಗಳ ಇತಿಹಾಸವನ್ನು ಹೊಂದಿದ ಈ ಸಂಸ್ಥೆ ಆರೋಗ್ಯ ಸೇವೆಯಲ್ಲಿ ಉತ್ಕೃಷ್ಟತೆ ಸಾಧಿಸುವತ್ತ ಸದಾ ದೃಷ್ಟಿ ನೆಟ್ಟಿ‌ಇರುತ್ತದೆ. ನಮ್ಮ ಸಂಸ್ಥೆಯ ಎಂಬಿಬಿಎಸ್‌ ಕಾಲೇಜು ಪ್ರಸ್ತುತ ರಜತ ಮಹೋತ್ಸವ ಆಚರಿಸುತ್ತಿದೆ. ದುರ್ಬಲವರ್ಗದವರ ಸೇವೆಗೆ ಸದಾ ತುಡಿಯುತ್ತದೆ’ ಎಂದರು. 

ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್‌ ಬಿ.ಮಿನೇಜಸ್‌ ಹಾಗೂ ಉಪ ಡೀನ್‌ ಡಾ.ವೆಂಕಟೇಶ್‌ ಬಿ.ಎಂ. ಫಾದರ್‌ ಮುಲ್ಲರ್ಸ್‌ ಕಾಲೇಜ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌ ಪ್ರಾಂಶುಪಾಲರಾದ ಡಾ.ಹಿಲ್ಡಾ ಡಿಸೋಜ ಭಾಗವಹಿಸಿದ್ದರು.  

379 ಮಂದಿಗೆ ಪದವಿ ಪ್ರದಾನ

ಕಾರ್ಯಕ್ರಮದಲ್ಲಿ ಪಟ್ಟು 379 ಮಮದಿಗೆ ಪದವಿ ಪ್ರಮಾಣಪತ್ರ ವಿತರಿಸಿ ವೈದ್ಯಕೀಯ ವೃತ್ತಿಯ ಪ್ರತಿಜ್ಞೆ ಬೋಧಿಸಲಾಯಿತು. ಅಲೈಡ್‌ ಹೆಲ್ತ್‌ ವಿಭಾಗದ 61 ವಿದ್ಯಾರ್ಥಿಗಳಿಗೆ ಫಿಸಿಯೋಥೆರಪಿ ವಿಭಾಗದ 45 ಮಂದಿ 147 ವೈದ್ಯ ವಿದ್ಯರ್ಥಿಗಳಿಗೆ ಎಂ.ಎಚ್‌. ಆಂಕಾಲಜಿ ವಿಭಾಗದ ಒಬ್ಬ ವಿದ್ಯಾರ್ಥಿಗೆ ವೈದ್ಯಕೀಯ ಸ್ನಾತಕೋತ್ತರ ವಿಭಾಗದ 76 ವಿದ್ಯಾರ್ಥಿಗಳಿಗೆ ಇತರ ಸ್ನಾತಕೋತ್ತರ ವಿಭಾಗಳ 49 ವಿದ್ಯಾರ್ಥಿಗಳು  ಪ್ರಮಾಣಪತ್ರ ಸ್ವೀಕರಿಸಿದರು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2022ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ  ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೇಷ್ಠ ವಿದ್ಯಾರ್ಥಿ ಗೌರವಕ್ಕೆ ಪಾತ್ರವಾದ ಡಾ.ಅರಲ್‌ ಅಲಿಷಾ ಮೋಂತೆರೊ ಅವರಿಗೆ ಎಫ್‌ಎಂಸಿಐ ಅಧ್ಯಕ್ಷ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT