ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಬೆದರಿಕೆ ಇರುವ ಹಿಂದೂ ನಾಯಕರಿಗೆ ರಕ್ಷಣೆ ನೀಡಿ: ಹಿಂದೂ ಮಹಾಸಭಾ ಒತ್ತಾಯ

Last Updated 22 ಆಗಸ್ಟ್ 2022, 12:21 IST
ಅಕ್ಷರ ಗಾತ್ರ

ಮಂಗಳೂರು: 'ಜೀವ ಬೆದರಿಕೆ ಎದುರಿಸುತ್ತಿರುವ ಹಿಂದೂ ಮುಖಂಡರಿಗೆ ಸರ್ಕಾರ ರಕ್ಷಣೆ ನೀಡಬೇಕು. ಹಿಂದೂ ಮುಖಂಡರಿಗೆ ಜೀವ ಬೆದರಿಕೆ ಒಡ್ಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘಟನೆಯ ಕರ್ನಾಟಕ ಘಟಕದ ಅಧ್ಯಕ್ಷ ರಾಜೇಶ್‌ ಪವಿತ್ರನ್‌, ‘ನನ್ನ ಕಾರು ಚಾಲಕನಾಗಿ ಕಾರ್ಯನಿರ್ವಹಿಸಿದ್ದ ಕಿರಣ್‌ ಕುಮಾರ್‌ ಮನೆ ಸುರತ್ಕಲ್‌ ಠಾಣೆಯ ವ್ಯಾಪ್ತಿಯ ಮುಕ್ಕ ಎಂಬಲ್ಲಿದೆ. ಆ.17ರಂದು ರಾತ್ರಿ 9 ಗಂಟೆ ಸುಮಾರಿಗೆ ಅವರ ಮನೆಗೆ ಬಂದಿದ್ದ ಐವರು ಅಪರಿಚಿತರು ನನ್ನ ಚಲನವಲನ ಹಾಗೂ ವಹಿವಾಟುಗಳ ಬಗ್ಗೆ ವಿಚಾರಿಸಿದ್ದಾರೆ. ಕಿರಣ್‌ ಅವರು ಪ್ರಶ್ನೆ ಮಾಡಿದಾಗ, ಅಪರಿಚಿತರು ತಾವು ಸಿಸಿಬಿ ಪೊಲೀಸರು ಎಂದು ಹೇಳಿಕೊಂಡಿದ್ದಾರೆ. ಬಂದೂಕು ತೋರಿಸಿ ಕಿರಣ್ ಅವರನ್ನು ಬೆದರಿಸಿರುವ ಅವರು ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದೂ ಹೇಳಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮ ಸಂಘಟನೆಯವರು ಕಲೆ ಹಾಕಿದ ಮಾಹಿತಿ ಪ್ರಕಾರ ಕಿರಣ್‌ ಮನೆಗೆ ಭೇಟಿ ನೀಡಿದವರು ಹಿಂದೂಗಳೇ ಆಗಿದ್ದಾರೆ. ಈ ಘಟನೆ ಬಗ್ಗೆ ನಾನು ನಗರ ಪೊಲೀಸ್‌ ಕಮಿಷನರ್‌ಗೆ ಹಾಗೂ ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಒತ್ತಡಕ್ಕೆ ಒಳಗಾಗದೇ ನಿಷ್ಪಕ್ಷಪಾತವಾಗಿ ಹಾಗೂ ಸಮಗ್ರವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ, ಅವರನ್ನು ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಹಿಂದೂ ಮುಖಂಡರ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ನನಗೆ ಗನ್‌ಮ್ಯಾನ್‌ ಭದ್ರತೆ ಒದಗಿಸುವಂತೆ ಈ ಹಿಂದೆಯೇ ಕೋರಿದ್ದೆ. ಈಗ ಮತ್ತೆ ಬೇಡಿಕೆ ಸಲ್ಲಿಸಿದ್ದೇನೆ. ಸರ್ಕಾರ ನನಗೆ ಗನ್‌ಮ್ಯಾನ್‌ ಭದ್ರತೆ ಒದಗಿಸುತ್ತದೆ ಎಂಬ ನಿರೀಕ್ಷೆ ಇಲ್ಲ’ ಎಂದರು.

‘ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾದ ಮುಖಂಡ ಕಮಲೇಶ್ ತಿವಾರಿ ಅವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ಬಿಜೆಪಿ ಸರ್ಕಾರ ಹಿಂಪಡೆಯಿತು. ಇದಾಗಿ ಕೆಲವೇ ದಿನಗಳಲ್ಲಿ ತಿವಾರಿ ಅವರ ಹತ್ಯೆ ನಡೆಯಿತು’ ಎಂದು ಅವರು ನೆನಪಿಸಿದರು.

‘ಹಿಂದುತ್ವದ ವಿಚಾರದಲ್ಲಿ ನಾವು ಧ್ವನಿ ಎತ್ತುವುದನ್ನು ಸಹಿಸಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ನಮಗೆ ಬಿಜೆಪಿ ವಿರುದ್ಧ ಯಾವುದೇ ದ್ವೇಷ ಇಲ್ಲ. ಆದರೆ, ಅವರು ಮಾಡುತ್ತಿರುವ ತಪ್ಪುಗಳನ್ನು ನಾವು ಎತ್ತಿ ತೋರಿಸಲೇಬೇಕಾಗುತ್ತದೆ’ ಎಂದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ‘ವೀರ ಸಾವರ್ಕರ್‌ ಹಾಗೂ ನಾಥೂರಾಮ್‌ ಗೋಡ್ಸೆ ಮೊದಲಿನಿಂದಲೂ ನಮ್ಮ ನಾಯಕರು. ನಾವು ಮತ ಪಡೆಯುವ ಉದ್ದೇಶಕ್ಕಾಗಿ ಅವರ ಹೆಸರು ಬಳಸುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಘಟನೆಯ ಜಿಲ್ಲಾ ವಕ್ತಾರ ಶಿವಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT