ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಗೆ ಗೃಹರಕ್ಷಕ ದಳದ ಬಲ

ಹೊರನಾಡು, ಹೊರರಾಜ್ಯದಲ್ಲಿ ಕಾರ್ಯನಿರ್ವಹಿಸುವ ಅವಕಾಶ; ಪೊಲೀಸರು, ಸಾರ್ವಜನಕರ ಮೆಚ್ಚುಗೆಯ ಖುಷಿ
Published 8 ಏಪ್ರಿಲ್ 2024, 7:33 IST
Last Updated 8 ಏಪ್ರಿಲ್ 2024, 7:33 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಮಾದೇಷ್ಟರ ರಾಜ್ಯಮಟ್ಟದ ಸಭೆಯಾಗಿದೆ. ಇತ್ತ ಮಂಗಳೂರಿನಲ್ಲಿ ಘಟಕಾಧಿಕಾರಿಗಳ ಸಭೆಯೂ ನಡೆದಿದೆ. ಸಮವಸ್ತ್ರ ಧರಿಸಿಕೊಂಡು ರಸ್ತೆಯಲ್ಲಿ ಸಂಚಾರ ನಿಯಂತ್ರಿಸುವವರು, ಟೋಲ್ ಗೇಟ್‌ಗಳಲ್ಲಿ ಟೋಲ್ ಸಂಗ್ರಹಿಸಲು ನೆರವಾಗುತ್ತಿರುವವರು, ವಿಧಿವಿಜ್ಞಾನ ಕೇಂದ್ರದಲ್ಲಿ ಕರ್ವವ್ಯ ನಿರ್ವಹಿಸುತ್ತಿರುವವರು ಮುಂತಾದ ಎಲ್ಲರೂ ಈಗ  ಖುಷಿಯಲ್ಲಿದ್ದಾರೆ. ‘ನಿಷ್ಕಾಮ ಸೇವೆ; ಸೇವೆಯೇ ಪರಮಗುರಿ’ ಎಂಬ ಧ್ಯೇಯಮಂತ್ರವನ್ನು ನಿತ್ಯವೂ ಪಠಿಸುವ ಇವರೆಲ್ಲರೂ ಹೋಂ ಗಾರ್ಡ್ಸ್, ಅರ್ಥಾತ್ ಗೃಹರಕ್ಷಕ ದಳದ ಸಿಬ್ಬಂದಿ.

ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರಂತೆ ಹೋಂ ಗಾರ್ಡ್ಸ್‌ ಕೂಡ ಚುನಾವಣೆ ಬಂತೆಂದರೆ ಸಂಭ್ರಮದ ಅಲೆಯಲ್ಲಿ ತೇಲುತ್ತಾರೆ. ಅದಕ್ಕೆ ಕಾರಣ ಅವರ ಸೇವಾ ಮನೋಭಾವ ಮತ್ತು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ ಎಂಬ ಕೃತಾರ್ಥ ಭಾವ. ಹಲವರೊಂದಿಗೆ ಬೆರೆಯಲು, ಬೇರೆ ಊರು, ಬೇರೆ ಜಿಲ್ಲೆ, ಕೆಲವೊಮ್ಮೆ ಬೇರೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿ ಭಿನ್ನ ಸಂಸ್ಕೃತಿಯನ್ನು ತಿಳಿಯುವ, ಅವರೊಂದಿಗೆ ಬೆರೆಯುವ ಕುತೂಹಲ ತಣಿಸಲು ಅವರಿಗೆ ಚುನಾವಣೆ ನೆರವಾಗುತ್ತದೆ.

ನಿತ್ಯ ಜೀವನದಲ್ಲಿ ಹಲವು ಕಡೆಗಳಲ್ಲಿ ಕಾಣಸಿಗುವ, ಚುರುಕಾಗಿ ಕೆಲಸ ನಿರ್ವಹಿಸುವ ಹೋಂ ಗಾರ್ಡ್ಸ್‌ ಚುನಾವಣೆಯ ಸಂದರ್ಭದಲ್ಲಿ ಮತ್ತಷ್ಟು ಚೂಟಿಯಾಗಿ ಕಾರ್ಯನಿರ್ವಹಿಸಲು ಮುಂದಾಗುತ್ತಾರೆ. ಪೊಲೀಸರಂತೆಯೇ ಭದ್ರತೆಯ ಜೊತೆಯಲ್ಲಿ ಹಿರಿಯ ನಾಗರಿಕರು, ಅಸಹಾಯಕರು, ಗರ್ಭಿಣಿಯರು, ಅಂಗವಿಕಲರು ಮುಂತಾದವರಿಗೆ ನೆರವಾಗುವ ಗೃಹರಕ್ಷಕರು ಚುನಾವಣೆ ಘೋಷಣೆ ಆಗುತ್ತಿದ್ದಂತೆ ಮಾನಸಿಕ ಮತ್ತು ದೈಹಿಕವಾಗಿ ಸಜ್ಜಾಗತೊಡಗುತ್ತಾರೆ. ಅದಕ್ಕೆ ಬೇಕಾದ ಯೋಜನೆಗಳು ಉನ್ನತ ಅಧಿಕಾರಿಗಳ ಕಚೇರಿಯಲ್ಲಿ ಸಿದ್ಧವಾಗುತ್ತವೆ. ನಂತರ ಸಭೆ, ಮಾಹಿತಿ, ತರಬೇತಿ ಇತ್ಯಾದಿ ಪ್ರಕ್ರಿಯೆ ಆರಂಭವಾಗುತ್ತದೆ. ಮತದಾನದ ದಿನ ಅವರಿಗೆ ಸವಾಲಿನದ್ದು. ಆದರೂ ಆತಂಕ, ಬೇಸರ ಇಲ್ಲದೆ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಾಗ ಗೃಹರಕ್ಷಕ ದಳದ ಸಂಪೂರ್ಣ ಬಲವನ್ನು ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 15 ಘಟಕಗಳು ಇದ್ದು ಪ್ರತಿಯೊಂದರಲ್ಲಿ ಸರಾಸರಿ 50ರಷ್ಟು ಮಂದಿ ಇದ್ದಾರೆ. ಅತಿದೊಡ್ಡ ಘಟಕ ಮಂಗಳೂರಿನಲ್ಲಿ 130 ಮಂದಿ ಇದ್ದಾರೆ. ಜಿಲ್ಲೆಯಲ್ಲಿ 235 ಮಂದಿ ಮಹಿಳಾ ಸಿಬ್ಬಂದಿ ಇದ್ದಾರೆ. ದಳವನ್ನು ಸೇರಲು ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ. ಆದರೆ ಈಗೀಗ ಪದವಿ ಪೂರೈಸಿದವರು ಕೂಡ ಸೇರುತ್ತಿದ್ದಾರೆ. ಮಹಿಳೆಯರಿಗೆ ರಾತ್ರಿ ಕರ್ತವ್ಯ ನಿರ್ವಹಿಸುವುದು ಸ್ವಲ್ಪ ಕಷ್ಟ ಆಗುತ್ತದೆ. ಆದರೆ ಪುರುಷರು ಹಗಲು ಬೇರೆ ಕೆಲಸ ಮಾಡುವುದರಿಂದ ರಾತ್ರಿ ಹೋಂ ಗಾರ್ಡ್ ಆಗಿರಲು ಬಯಸುತ್ತಾರೆ. ಆದರೆ ಚುನಾವಣೆ ಬಂತೆಂದರೆ ಎಲ್ಲವನ್ನು ಮರೆತು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಜಿಲ್ಲಾ ಸಮಾದೇಷ್ಟ ಡಾ.ಮುರಲೀಮೋಹನ ಚೂಂತಾರು ತಿಳಿಸಿದರು.   

ವಿಶೇಷ ಭತ್ಯೆ ಇಲ್ಲ

ಪೊಲೀಸ್ ಕಮಿಷನರೇಟ್‌ ಕಚೇರಿಯಲ್ಲಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸಿಗುವಷ್ಟು ಸಂಭಾವನೆ ಇತರ ಕಡೆ ಕಾರ್ಯನಿರ್ವಹಿಸುವವರಿಗ ಸಿಗುವುದಿಲ್ಲ. ಚುನಾವಣಾ ಕರ್ತವ್ಯಕ್ಕೆ ವಿಶೇಷ ಭತ್ಯೆ ಏನೂ ಇಲ್ಲ. ದಿನಭತ್ಯೆ ಎಂದು ನಿರ್ದಿಷ್ಟ ಮೊತ್ತ ನೀಡುತ್ತಾರೆ. ಆದರೆ ಜಿಲ್ಲಾಡಳಿತವೇ ಆಹಾರ ಒದಗಿಸಿದರೆ ಈ ಭತ್ಯೆ ಸಿಗುವುದಿಲ್ಲ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಸಾಮಾನ್ಯ ದಿನಗಳಲ್ಲಿ ಸಂಭಾವನೆ ಸರಿಯಾಗಿ ಸಿಗುತ್ತದೆ. ಆದರೆ ಬಂದೋಬಸ್ತ್‌ನಂಥ ವಿಶೇಷ ಕರ್ತವ್ಯಕ್ಕೆ ತೆರಳಿದರೆ ಸಂಘಟನೆ ಮಾಡಿದವರಿಗೆ ಸರ್ಕಾರದ ಬಿಲ್ ಪಾಸ್ ಆಗಲು ತಡವಾಗುತ್ತದೆ. ಇದರಿಂದ ನಮ್ಮ ಸಂಭಾವನೆಯೂ ತಡವಾಗುತ್ತದೆ. ಕೆಲವೊಮ್ಮೆ ಒಂದು ತಿಂಗಳ ವರೆಗೆ ಕಾಯಬೇಕಾಗುತ್ತದೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಪರಿಸರದ ಆರೈಕೆ; ಜನಸೇವೆಯ ಬಯಕೆ

ಗೃಹರಕ್ಷಕ ದಳದ ಮಂಗಳೂರು ನಗರ ಘಟಕದ (ಯೂನಿಟ್‌) ಮುಖ್ಯಸ್ಥ ಮಾರ್ಕ್ ಸೇರಾ ಅವರ ಕೃಷಿ ಚಟುವಟಿಕೆ ಮೂಲಕ ಮಣ್ಣು ಮತ್ತು ಪರಿಸರದ ಆರೈಕೆ ಮಾಡುತ್ತಿದ್ದಾರೆ. ಮೇರಿ ಹಿಲ್ ನಿವಾಸಿಯಾಗಿರುವ ಅವರು ಮಡಂತ್ಯಾರ್‌ನಲ್ಲಿ ಸ್ಥಾಪಿಸಿರುವ ‘ಮನದಾಳು ಕೃಷಿ ನಿಲಯ’ ಎಂಬ ‘ಕೃಷಿ ರೆಸಾರ್ಟ್’ ಮೂಲಕ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಗೃಹರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತ ಜನಸೇವೆ ಮಾಡುವ ಆಶಯವನ್ನೂ ಕಾರ್ಯಗತಗೊಳಿಸುತ್ತಿದ್ದಾರೆ.

ಸೀನಿಯರ್ ‌ಪ್ಲಟೂನ್ ಕಮಾಂಡರ್ ಆಗಿರುವ ಮಾರ್ಕ್ ಈ ವರೆಗೆ 3 ಲೋಕಸಭೆ ಸೇರಿದಂತೆ 7 ಚುನಾವಣೆಗಳಲ್ಲಿ ಪಾಲ್ಗೊಂಡಿದ್ದಾರೆ.

‘ಚುನಾವಣೆಯ  ಕಾರ್ಯನಿರ್ವಹಣೆ ತುಂಬ ಜಬಾಬ್ದಾರಿಯಿಂದ ಮಾಡಬೇಕಾಗಿದೆ. ಹೀಗಾಗಿ ಅಧಿಸೂಚನೆ ಹೊರಬೀಳುತ್ತಿದ್ದಂತೆ ನಾವೆಲ್ಲ ಸಿದ್ಧರಾಗುತ್ತೇವೆ. ಪ್ರತಿ ತಿಂಗಳು ನಡೆಯುವ ಪೆರೇಡ್‌ಗಳಲ್ಲಿ ಈ ಕುರಿತು ‘ಬುಲಾವ್‌’ ನೀಡಲಾಗುತ್ತದೆ. ಮತದಾನ ಮತ್ತು ಮತ ಎಣಿಕೆ ಸಂದರ್ಭದಲ್ಲಿ ವೈಯಕ್ತಿಕ, ಕೌಟುಂಬಿಕ ಮತ್ತು ಇತರ ಯಾವುದೇ ಕೆಲಸಗಳನ್ನು ಒಪ್ಪಿಕೊಳ್ಳದೆ ಚುನಾವಣೆಗೆ ಮೀಸಲಿಡುವಂತೆ ತಿಳಿಸಲಾಗುತ್ತದೆ. ಅದನ್ನು ಎಲ್ಲರೂ ಪಾಲಿಸುತ್ತಾರೆ. ಚುನಾವಣಾ ಕರ್ತವ್ಯಕ್ಕೆ ಗೈರಾಗುವ ಪರಿಪಾಠ ನಮ್ಮಲ್ಲಿ ಯಾರಿಗೂ ಇಲ್ಲ’ ಎಂದು ಮಾರ್ಕ್ ಹೇಳಿದರು.

‘ಚುನಾವಣೆ ಪ್ರತಿ ಬಾರಿಯ ಹಬ್ಬ’

ಸುರತ್ಕಲ್‌ನ ಸೂರಿಂಜೆ ನಿವಾಸಿ ರಮೇಶ್ ಪೂಜಾರಿ ಸುರತ್ಕಲ್‌ನಲ್ಲಿ ಹೋಂ ಗಾರ್ಡ್ಸ್ ಘಟಕ ಅರಂಭದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈಗ ಈ ಘಟಕದ ಮುಖ್ಯಸ್ಥ. 15 ಮಹಿಳೆಯರು ಸೇರಿದಂತೆ 48 ಮಂದಿಯನ್ನು ಒಳಗೊಂಡ ಘಟಕವನ್ನು ಮುನ್ನಡೆಸುತ್ತಿರುವ ಅವರು ಈ ಸೇವೆಯಲ್ಲಿ ಅಪಾರ ಅನುಭವ ಇರುವವರು. ವಿಭಾಗದ ಮುಖ್ಯಸ್ಥ, ಕ್ವಾರ್ಟರ್ ಮಾಸ್ಟರ್ ಸರ್ಜಂಟ್‌ ಇತ್ಯಾದಿ ಜವಾಬ್ದಾರಿಗಳನ್ನು ನಿರ್ವಹಿಸಿದವರು.

ಈ ವರೆಗೆ 7 ಲೋಕಸಭೆ ಮತ್ತು 8 ವಿಧಾನಸಭೆ ಚುನಾವಣೆಯಲ್ಲಿ ಪಾಲ್ಗೊಂಡಿರುವ ರಮೇಶ್‌ ಚುನಾವಣೆಯನ್ನು ಪ್ರತಿ ಬಾರಿಯ ಹಬ್ಬ ಎಂದೇ ಪರಿಗಣಿಸಿದ್ದಾರೆ. ‘ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಸಣ್ಣ ವಿಷಯವೇನೂ ಅಲ್ಲ. ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ತುಂಬ ಖುಷಿಯ ವಿಷಯ’ ಎಂಬುದು ಅವರ ಅಭಿಪ್ರಾಯ.

ಪೊಲೀಸರ ಸ್ಪಂದನೆ; ಇಲ್ಲ ನಿಂದನೆ

ಪುತ್ತೂರಿನ ಪಂಜ ನಿವಾಸಿ ಜಗನ್ನಾಥ ಪಿ ಅವರು ಗೃಹರಕ್ಷಕ ದಳದ ಪುತ್ತೂರು ಘಕಟದ ಮುಖ್ಯಸ್ಥ. 58 ಮಂದಿಯ ಈ ಘಟಕದ ಜವಾಬ್ದಾರಿ ನಿರ್ವಹಿಸುತ್ತಿರುವ ಅವರು ಎರಡು ದಶಕಗಳಿಂದ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೊರೊನಾ ಕಾಲದಲ್ಲೂ ಸೇವೆ ಸಲ್ಲಿಸಿರುವ ಅವರು ಮಸ್ತಕಾಭಿಷೇಕ ಮತ್ತಿತರ ಸಂದರ್ಭದಲ್ಲಿ ಬಂದೋಬಸ್ತ್ ಜವಾಬ್ದಾರಿ ನಿಭಾಯಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಮುಂತಾದ ಕಡೆಗಳಿಗೂ ಹೋಗಿದ್ದಾರೆ. 

‘ಪೊಲೀಸರು ನಮಗೆ ಉತ್ತಮ ಸಹಕಾರ ನೀಡುತ್ತಾರೆ. ಸಾರ್ವಜನಿಕರಿಂದಲೂ ಒಳ್ಳೆಯ ಅಭಿಪ್ರಾಯ ಇದೆ. ಚುನಾವಣೆ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಜಾಗರೂಕರಾಗಿ ಇರಬೇಕು. ಆದರೂ ಹೊರನಾಡು, ಹೊರರಾಜ್ಯಗಳಿಗೆ ಹೋಗುವ ಅವಕಾಶ ಸಿಗುತ್ತಿರುವುದರಿಂದ ಸಂತೋಷ ಆಗುತ್ತದೆ. ಬೇರೆ ರಾಜ್ಯಗಳಲ್ಲಿ ಕರ್ನಾಟಕದ ಹೋಂ ಗಾರ್ಡ್ಸ್ ಬಗ್ಗೆ ಮೆಚ್ಚುಗೆ ಇದೆ’ ಎಂದು ಜಗನ್ನಾಥ ಹೇಳಿದರು.

ಉದ್ಯಮಿಗೆ ಸಮವಸ್ತ್ರದ ಮೇಲೆ ಪ್ರೀತಿ

ಪುತ್ತೂರಿನ ನೆಕ್ಕಿಲಾಡಿಯಲ್ಲಿ ಸಾಫ್ಟ್ ಡ್ರಿಂಕ್ಸ್ ಉದ್ಯಮ ನಡೆಸುತ್ತಿರುವ ದಿನೇಶ್ ಬಿ ಅವರಿಗೆ ಸಮವಸ್ತ್ರದ ಮೇಲೆ ಅಪಾರ ಪ್ರೀತಿ. ಈ ಕಾರಣದಿಂದಲೇ ಗೃಹರಕ್ಷಕ ದಳ ಸೇರಿದ್ದಾರೆ. ಈಗ ಉಪ್ಪಿನಂಗಡಿ ಘಟಕದ ಪ್ರಭಾರ ಅಧಿಕಾರಿಯಾಗಿದ್ದಾರೆ.

3 ಲೋಕಸಭೆ ಮತ್ತು ಅಷ್ಟೇ ವಿಧಾನಸಭೆ ಚುನಾವಣೆಗಳಲ್ಲಿ ಪಾಲ್ಗೊಂಡಿರುವ ಅವರು ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲು ತಮಿಳುನಾಡು, ಮಧ್ಯಪ್ರದೇಶ ಮತ್ತು ಕೇರಳ ರಾಜ್ಯಗಳಿಗೂ ಹೋಗಿದ್ದಾರೆ.

‘ಸಮಾಜದಲ್ಲಿ ಗೌರವ ಸಿಗುವ ಸೇವೆ ಇದು. ಚುನಾವಣೆ ಸಂದರ್ಭದಲ್ಲಿ ಹೆಚ್ಚು ಕ್ರಿಯಾಶೀಲರಾಗಿರಬೇಕು. ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ತುಂಬ ಖುಷಿಯ ಸಂಗತಿ. ಬೇರೆ ಊರಿಗೆ ತೆರಳುವುದು, ಅದಕ್ಕಾಗಿ ನಮಗೆ ಸಿದ್ಧಪಡಿಸಿರುವ ಬಸ್‌ ಹುಡುಕುವುದು, ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು, ಅಂಚೆ ಮತದಾನ ಮಾಡುವುದು ಸೇರಿದಂತೆ ಎಲ್ಲ ಕೆಲಸಗಳೂ ಹಿತಕರ’ ಎಂದು ದಿನೇಶ್ ಸಂಭ್ರಮದಿಂದ ತಿಳಿಸಿದರು.

ಪದವೀಧರೆಗೆ ಚುನಾವಣೆಯಲ್ಲಿ ಸಂಭ್ರಮ

ತೊಕ್ಕೊಟ್ಟು ನಿವಾಸಿ ಸೆಲೆಸ್ಟಿನ್ ಮೊಂತೆರೊ ತಲಪಾಡಿಯ ಟೋಲ್ ಗೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂವರೆ ದಶಕಗಳಿಂದ ಗೃಹರಕ್ಷಕ ದಳದಲ್ಲಿ ಇರುವ ಅವರು ಪದವೀಧರೆ.

ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿರುವ ಸೆಲೆಸ್ಟಿನ್ ಚುನಾವಣಾ ಕರ್ತವ್ಯಕ್ಕಾಗಿ ತಮಿಳುನಾಡು, ತುಮಕೂರು, ದಾವಣಗೆರೆ ಮುಂತಾದ ಕಡೆಗಳಿಗೆ ಹೋಗಿರುವುದಾಗಿ ತಿಳಿಸಿದರು. ‘ಚುನಾವಣೆಯ ವೇಳೆ ಬೇರೆ ಬೇರೆ ಊರು ನೋಡಲು ಸಿಗುತ್ತದೆ. ಅಲ್ಲಿನ ಜನರ ಪರಿಚಯ ಅಗುತ್ತದೆ, ವಿವಿಧ ಕಡೆಯ ಸಂಸ್ಕೃತಿ ತಿಳಿಯಲು ಸಾಧ್ಯವಾಗುತ್ತದೆ. ಎಲ್ಲರೊಂದಿಗೆ ಬೆರೆಯುವಾಗ ಮನಸ್ಸು ಪ್ರಫುಲ್ಲ ಅಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT