ಮಂಗಳವಾರ, ನವೆಂಬರ್ 29, 2022
21 °C

ಎಂಎಸ್‌ಎಂಇಗಳ ಸಂಕಷ್ಟ ಬಗೆಹರಿಸಿ: ಸಚಿವೆ ನಿರ್ಮಲಾಗೆ ಕೆಸಿಸಿಐ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಿವಾಳಿಯಾದ ಆಸ್ತಿಗಳನ್ನು ದಿವಾಳಿ ಸಂಹಿತೆಯ (ಐಬಿಸಿ) ಅಡಿ ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೆ ಮಾಡುವಾಗ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು ಹಾಗೂ ಕಂಪನಿ ಕಾಯ್ದೆಯಡಿ ಕಾರ್ಮಿಕರ ಬಾಕಿ ಪಾವತಿಗೆ ಸಂಬಂಧಿಸಿದ ಸೆಕ್ಷನ್‌ 53ರ ಉಪ ಸೆಕ್ಷನ್‌ 1ರ ಸಂಬಂಧ ಅನುಬಂಧ (ಬಿ)ಯ ಅಡಿ ಎಂಎಸ್‌ಎಂಇಗಳನ್ನೂ ಸೇರಿಸಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ) ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರನ್ನು ಒತ್ತಾಯಿಸಿದೆ.

ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿರುವ ಕೆಸಿಸಿಐ ಅಧ್ಯಕ್ಷ ಎಂ.ಗಣೇಶ ಕಾಮತ್‌, ‘2016ರ ದಿವಾಳಿ ಸಂಹಿತೆಗೆ ತಿದ್ದುಪಡಿ ತರುವ ಅಗತ್ಯ ಇದೆ. ದಿವಾಳಿಯಾದ ಕಂಪನಿಗಳ ಆಸ್ತಿ ಮಾರಾಟದ ಹಣವನ್ನು ಹಂಚಲು ರೂಪಿಸಿರುವ ವ್ಯವಸ್ಥೆಯಲ್ಲಿ ಎಂಎಸ್‌ಎಂಇಗಳಿಗೆ  ಸೇರಬೇಕಾದ ಮೊತ್ತ ತಲುಪಿಸಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು. 

‘ಸಿಮಿತ ಸಾಲವನ್ನು ಹೊಂದಿರುವ ಕಂಪನಿಗಳ ಜೊತೆ ಎಂಎಸ್‌ಎಂಇಗಳು ವಹಿವಾಟು ನಡೆಸುತ್ತವೆ. ಈ ಕಂಪನಿಗಳ ವ್ಯಾಜ್ಯಗಳು ಕ್ರಮೇಣ  ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯವರೆಗೆ (ಎನ್‌ಸಿಎಲ್‌ಟಿ) ತಲುಪಿದರೆ, ಅಂತಹ ಸಂದರ್ಭದಲ್ಲಿ ತಮಗೆ ಬರಬೇಕಾದ ಮೊತ್ತವನ್ನು ಪಡೆಯಲು ಎಂಎಸ್‌ಎಂಇಗಳಿಗೆ ಸಾಧ್ಯವಾಗುವುದೇ ಇಲ್ಲ. ಗ್ರಾಹಕರ ಸಾಲಪಡೆಯುವ ಯೋಗ್ಯತೆಯನ್ನು ವಿಶ್ಲೇಷಣೆಗೆ ಒಳಪಡಿಸುವ ಚಾಕಚಕ್ಯತೆಯನ್ನಾಗಲೀ ಸಂಪನ್ಮೂಲವನ್ನಾಗಲೀ ಎಂಎಸ್‌ಎಂಇಗಳು ಹೊಂದಿಲ್ಲ.  ಅಂತಹ ಸಂಸ್ಥೆಗಳೂ ತಮ್ಮ ಬದ್ಧತೆಯನ್ನು ಗೌರವಿಸಬೇಕು ಮತ್ತು ಅವರ ಹಣಕಾಸು ಹೊಣೆಗಾರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಬೇಕು ಎಂದು ಎಂಎಸ್‌ಎಂಇಗಳು ಕೂಡ ಆಶಿಸುತ್ತವೆ. ಇಂತಹ ಪ್ರಕರಣಗಳಲ್ಲಿ ಕಾರ್ಪೊರೇಟ್ ಗ್ರಾಹಕರ ಜೊತೆ ಚೌಕಾಸಿ ನಡೆಸುವ ಅತ್ಯಲ್ಪ ಅವಕಾಶಗಳು ಮಾತ್ರ ಎಂಎಸ್‌ಎಂಇಗಳಿಗೆ ಇವೆ’ ಎಂದು ಅವರು ತಿಳಿಸಿದ್ದಾರೆ.

‘ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡ ಮೊತ್ತದ ಪಾವತಿಗೆ ಸಂಬಂಧಿಸಿದಂತೆ ಕಾಯ್ದೆಯ ಸೆಕ್ಷನ್‌ 53ರ ಉಪ ಸೆಕ್ಷನ್‌ 1ರ ಅನುಬಂಧ (ಬಿ) ಅಡಿ ಎಂಎಸ್ಎಂಇಗಳನ್ನು ಸೇರಿಸಬೇಕು ಎಂಬುದು ಸಾಮಾನ್ಯ ಬೇಡಿಕೆ. ಎನ್‌ಸಿಎಲ್‌ಟಿ ಹಾಗೂ ಎನ್‌ಸಿಎಲ್‌ಎಟಿ ಅಡಿ ವಿಚಾರಣೆಗೆ ಬಾಕಿ ಇರುವ ಎಲ್ಲ ವ್ಯಾಜ್ಯಗಳಿಗೂ ಈ ಸವಲತ್ತು ಅನ್ವಯವಾಗಬೇಕು. ಇದನ್ನು ಮಾಡದ ಹೊರತು ಎಂಎಸ್‌ಎಂಇಗಳಿಗೆ ಉಳಿಗಾಲವಿಲ್ಲ. ಎನ್‌ಸಿಎಲ್‌ಟಿ ಮೊರೆ ಹೋಗಿರುವ ಕಂಪನಿಗಳ ಜಾಲದಲ್ಲಿ ಸಿಲುಕಿ ಎಂಎಸ್‌ಎಂಇಗಳು ಒದ್ದಾಡುತ್ತಿವೆ. ಎಂಎಸ್‌ಎಂಇಗಳು ಎದುರಿಸುತ್ತಿರುವ ಒತ್ತಡ ಹೇಗಿದೆ ಎಂಬುದು ಕೆಸಿಸಿಐಗೆ ಚೆನ್ನಾಗಿ ತಿಳಿದಿದೆ. ಇಂತಹ ಅನೇಕ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಎಂಎಸ್‌ಎಂಇಗಳು ಕೆಸಿಸಿಐಯನ್ನು ಸಂಪರ್ಕಿಸುತ್ತವೆ’ ಎಂದರು. 

‘ದೇಶದ ಆರ್ಥಿಕತೆ ಬೆನ್ನೆಲುಬು ಎಂಎಸ್‌ಎಂಇಗಳು. ಕೇಂದ್ರ ಸರ್ಕಾರವು ಹಣಕಾಸು ನೆರವನ್ನು ಒದಗಿಸುವ ವಿಶೇಷ ಯೋಜನೆಗಳನ್ನು ಆರಂಭಿಸಿದ್ದು ಸ್ವಾಗತಾರ್ಹ. ಇದನ್ನು ಜಾರಿಗೊಳಿಸುವಾಗ ಎಂಎಸ್‌ಎಂಇಗಳಿಗೆ ಸಕಾಲದಲ್ಲಿ ನೆರವು ಒದಗಿಸಿದರೆ ಇನ್ನೂ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.