ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಅಣ್ಣೈ ವೆಲ್ಲಾಂಕಣಿ ಜತೆ ಐಸಿಎಆರ್‌ ಒಪ್ಪಂದ

ಗೇರು ಸಂಶೋಧನಾ ನಿರ್ದೇಶನಾಲಯದ ಹೊಸ ತಳಿ ‘ಎಚ್- 130’
Last Updated 15 ಜುಲೈ 2020, 17:56 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ಐ.ಸಿ.ಎ.ಆರ್ - ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಹೊಸ ‘ಎಚ್-130’ ಗೇರು ತಳಿಯನ್ನು ಉತ್ಪಾದನೆ ಮಾಡಿ, ರೈತರಿಗೆ ತಲುಪಿಸಲು ತಮಿಳುನಾಡಿನ ಅಣ್ಣೈ ವೆಲ್ಲಾಂಕಣಿ ನರ್ಸರಿಯ ಜತೆ ಬುಧವಾರ ಲೈಸೆನ್ಸಿಂಗ್ ಒಪ್ಪಂದ ಮಾಡಲಾಯಿತು. ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಜಿ. ನಾಯಕ್ ಮತ್ತು ನರ್ಸರಿ ಮಾಲೀಕ ಡಿ.ಕ್ಸೇವಿಯರ್ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ನಿರ್ದೇಶಕ ಡಾ.ಎಂ.ಜಿ.ನಾಯಕ್, ‘ಈ ಎಚ್-130 ತಳಿಯು ಸಂರಕ್ಷಣೆ ಮತ್ತು ರೈತರ ಹಕ್ಕು ಕಾಯ್ದೆ 2001ರ ಅಡಿಯಲ್ಲಿ ಹಕ್ಕುಸ್ವಾಮ್ಯವನ್ನು ಪಡೆದಿದ್ದು, ಕಾನೂನಾತ್ಮಕ ರಕ್ಷಣೆ ಪಡೆದಿದೆ. ಪುತ್ತೂರು ಐ.ಸಿ.ಎ.ಆರ್ - ಗೇರು ಸಂಶೋಧನಾ ನಿರ್ದೇಶನಾಲಯದ ಜತೆ ಒಪ್ಪಂದ ಮಾಡಿಕೊಂಡ ನರ್ಸರಿಗಳು ಮಾತ್ರ ಈ ತಳಿಯ ಗಿಡಗಳನ್ನು ಉತ್ಪಾದನೆ ಮಾಡಿ, ಮಾರುವ ಹಕ್ಕನ್ನು ಪಡೆದಿವೆ. ಒಪ್ಪಂದ ಮಾಡಿಕೊಳ್ಳದೇ ಬೇರೆ ಯಾವುದೇ ನರ್ಸರಿಗಳು ಉತ್ಪಾದನೆ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ’ ಎಂದು ತಿಳಿಸಿದರು.

‘2001ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಕಾಯ್ದೆಯ ಪ್ರಕಾರ ಯಾವುದೇ ಹೊಸ ಸಸ್ಯ ತಳಿಯನ್ನು ಅಭಿವೃದ್ಧಿಪಡಿಸಿ, ಅದನ್ನು ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಪ್ರಾಧಿಕಾರದಲ್ಲಿ ನೋದಣಿ ಮಾಡಿದಲ್ಲಿ, ಅದರ ಹಕ್ಕುಸ್ವಾಮ್ಯ ಆ ತಳಿಯನ್ನು ಅಭಿವೃದ್ಧಿ ಪಡಿಸಿದವರದ್ದೇ ಆಗಿರುತ್ತದೆ. ಅನುಮತಿ ಪಡೆಯದೇ ಇತರರು ಇದನ್ನು ದುರುಪಯೋಗ ಮಾಡುವಂತಿಲ್ಲ. ದುರುಪಯೋಗ ಕಂಡುಬಂದರೆ ಅದು ಕಾನೂನಿನ ಪ್ರಕಾರ ಅಪರಾಧ’ ಎಂದು ಹೇಳಿದರು.

ಈಗಾಗಲೇ ಕೆಲವು ನರ್ಸರಿಯವರು ಈ ತಳಿಯ ಸಸಿಗಳನ್ನು ಉತ್ಪಾದಿಸಿ, ಬೇರೆ ಹೆಸರಿನಲ್ಲಿ ಹಂಚಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಇದು ಮುಂದುವರಿಯಬಾರದು. ಮುಂದುವರಿದಲ್ಲಿ ಸಂಬಂಧಪಟ್ಟವರು ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಸಂಸ್ಥೆ ಜವಾಬ್ದಾರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೇರು ಕೃಷಿಕರು ಎಚ್-130 ತಳಿಯ ಕಸಿ ಗಿಡಗಳನ್ನು ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ನರ್ಸರಿಗಳಲ್ಲಿ ಮಾತ್ರ ಪಡೆಯುವಂತೆ ಹಾಗೂ ಎಚ್-130 ತಳಿಯ ಕಸಿ ಗಿಡಗಳನ್ನು ಉತ್ಪಾದಿಸುವ ಅನುಮತಿಗಾಗಿ ಆಸಕ್ತ ನರ್ಸರಿಗಳು ನಿರ್ದೇಶಕರು, ಐ.ಸಿ.ಎ.ಆರ್-ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, 574202 (ದೂ.ಸಂ. 08251 230902) ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಂಸ್ಥೆಯ ವಿಜ್ಞಾನಿಗಳಾದ ಡಾ. ಮೋಹನ್ ಜಿ.ಎಸ್., ಡಾ. ಶಂಸುದ್ದೀನ್ ಮಂಗಳಶ್ಯೇರಿ, ಡಾ. ಸಿದ್ದಣ್ಣ ಸವದಿ ಇದ್ದರು.

***

ಸಂಸ್ಥೆ ಖಾಸಗಿ ನರ್ಸರಿಗಳ ಉಪಯೋಗಕ್ಕಾಗಿ ತಳಿ ಅಭಿವೃದ್ಧಿ ಮಾಡುತ್ತಿಲ್ಲ. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ

- ಡಾ.ಎಂ.ಜಿ. ನಾಯಕ್,ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT