ಬಂಟ್ವಾಳ: ಗ್ರಾಮೀಣ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ವಿನ್ಯಾಸಗೊಳಿಸಿದ ‘ಸಾರಿಗೆ ಸುರಕ್ಷಾ-ಐಸಿಯು ಬಸ್’ ಇಲ್ಲಿನ ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಡಿಪೊಗೆ ಬಂದಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡುಗು ಜಿಲ್ಲೆ ಒಳಗೊಂಡಂತೆ ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಈ ಬಸ್ ಬಂಟ್ವಾಳಕ್ಕೆ ಬಂದಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಳೆದ ತಿಂಗಳು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್‌ನ ಬಗ್ಗೆ ಬೇಡಿಕೆ ಇಟ್ಟಿದ್ದರು.
ಆಂಬುಲೆನ್ಸ್ ಮಾದರಿಯಲ್ಲಿ ಬಸ್‌ಗೆ ಸೈರನ್ ಅಳವಡಿಸಲಾಗಿದೆ. ಒಳಗೆ ಮಿನಿ ಕ್ಲಿನಿಕ್ ಮಾದರಿಯಲ್ಲಿ ಐದು ಹಾಸಿಗೆ, ಪ್ರತಿ ಹಾಸಿಗೆಗೆ ಆಮ್ಲಜನಕದ ವ್ಯವಸ್ಥೆ, ರೋಗಿಗಳ ರಕ್ತದೊತ್ತಡ, ಆಮ್ಲಜನಕ ಪ್ರಮಾಣ, ಇಸಿಜಿ, ತಾಪಮಾನವನ್ನು ಮಾನಿಟರ್ ಮಾಡುವ ವ್ಯವಸ್ಥೆ ಇದೆ. ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧ ಸಹಿತ ಜನರೇಟರ್ ವ್ಯವಸ್ಥೆಯೂ ಇದೆ. ಸೂಚನಾ ಫಲಕ, ವಿಶೇಷ ಬರಹಗಳು ಕೂಡ ಇವೆ.
13ರಂದು ಚಾಲನೆ: ಶಾಸಕ ರಾಜೇಶ್ ನಾಯ್ಕ್ ಇದೇ 13ರಂದು ಪೊಳಲಿ ಕ್ಷೇತ್ರದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡುವರು. ಪ್ರತಿ ಎರಡು ತಿಂಗಳಿಗೊಮ್ಮೆ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆ ರೀತಿಯಲ್ಲಿ ಬಸ್ ಕಾರ್ಯನಿರ್ವಹಿಸಲಿದೆ. ಇದರಲ್ಲಿ ತಜ್ಞ ವೈದ್ಯರು ಮತ್ತು ಆರೋಗ್ಯ ಸಹಾಯಕರು ಇರುತ್ತಾರೆ ಎಂದು
ಸಾರಿಗೆ ಘಟಕದ ವ್ಯವಸ್ಥಾಪಕ ಶ್ರೀಷ ಭಟ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.