ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಡುವ ಕಾಯಿಲೆ ಪತ್ತೆ ಇನ್ನು ಸುಲಭ

ದಕ್ಷಿಣ ಕನ್ನಡ: ಸಮಗ್ರ ಆರೋಗ್ಯ ಮಾಹಿತಿ ದಾಖಲಾತಿ ಪ್ರಕ್ರಿಯೆ ಪ್ರಗತಿಯಲ್ಲಿ
Last Updated 13 ಸೆಪ್ಟೆಂಬರ್ 2022, 6:31 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರೀಕೃತ ನೋಂದಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಮೂಲಕ, ಶೀಘ್ರ ಹರಡುವ ಕಾಯಿಲೆಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಷನ್ ಫ್ಲಾಟ್‌ಫಾರ್ಮ್‌ನಲ್ಲಿ (ಐಎಚ್‌ಐಪಿ) ದಾಖಲಿಸಲಾಗುತ್ತಿತ್ತು. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಕೂಡ ತಮ್ಮಲ್ಲಿ ದಾಖಲಾಗುವ ರೋಗಿಗಳ ಮಾಹಿತಿಯನ್ನು ಈ ಪೋರ್ಟಲ್‌ನಲ್ಲಿ ದಾಖಲಿಸಬೇಕಾಗಿದೆ. ಇದರಿಂದ ಡೆಂಗಿ, ಮಲೇರಿಯಾ, ಎಚ್‌1ಎನ್‌1, ಶೀತ–ಜ್ವರ, ಲೆಪ್ಟೊಸ್ಪೈರೋಸಿಸ್ (ಸಸ್ತನಿಗಳಿಗೆ ಬರುವ ರೋಗ) ಮೊದಲಾದ ಶೀಘ್ರ ಹರಡುವ ಕಾಯಿಲೆಯಿಂದ ಬಳಲುವ ರೋಗಿಗಳ ಮೂಲವನ್ನು ಪತ್ತೆ ಹಚ್ಚಿ, ಸ್ಥಳೀಯವಾಗಿ ಮುನ್ನೆಚ್ಚರಿಕೆ ಕೈಗೊಂಡು, ಇತರರಿಗೆ ರೋಗ ಹರಡುವುದನ್ನು ನಿಯಂತ್ರಿಸಬಹುದಾಗಿದೆ.

‘ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಕಾಯಿಲೆಗಳಿಂದ ಬಳಲುವ ರೋಗಿಗಳು ದಾಖಲಾದರೆ, ಈ ಹಿಂದೆ ಇ–ಮೇಲ್ ಮೂಲಕ ಮಾಹಿತಿ ಲಭ್ಯವಾಗುತ್ತಿತ್ತು. ಇ–ಮೇಲ್ ವಿಳಂಬವಾದರೆ ಅಥವಾ ಚೆಕ್ ಮಾಡಲು ತಡವಾದರೆ, ವಿಷಯ ತಿಳಿಯುವಷ್ಟರಲ್ಲಿ ವಿಳಂಬ ಆಗುತ್ತಿತ್ತು. ಈ ರೀತಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಂಡರೆ, ಪ್ರತಿದಿನ ಸಂಜೆ ಇಡೀ ಜಿಲ್ಲೆಯ ರೋಗಿಗಳ ಮಾಹಿತಿ ಪೋರ್ಟಲ್‌ನಲ್ಲಿ ಲಭ್ಯವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಖಾಸಗಿ ಆಸ್ಪತ್ರೆಗಳು ಇವೆ. ಇಲ್ಲಿ ಹೊರ ಜಿಲ್ಲೆಗಳ ರೋಗಿಗಳು ಕೂಡ ಬರುತ್ತಾರೆ. ರೋಗಿಗಳ ಮಾಹಿತಿ ತಕ್ಷಣಕ್ಕೆ ದೊರೆತರೆ, ಆಯಾ ಜಿಲ್ಲೆಗಳ ಸಂಬಂಧಿತ ಆರೋಗ್ಯ ಕೇಂದ್ರಗಳಿಗೆ ಇದನ್ನು ತ್ವರಿತವಾಗಿ ತಲುಪಿಸಬಹುದು’ ಎನ್ನುತ್ತಾರೆ
ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್.

‘ಜಿಲ್ಲೆಯ ಸುಮಾರು 40 ವೈದ್ಯಕೀಯ ಸಂಸ್ಥೆಗಳು, ಒಂಬತ್ತು ಮೆಡಿಕಲ್‌ ಕಾಲೇಜುಗಳನ್ನು ಐಎಚ್‌ಐಪಿ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗಿದೆ. ಗ್ರಾಮೀಣ ಭಾಗದ ಕೆಲವು ಆಸ್ಪತ್ರೆಗಳನ್ನು ಸೇರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಸಂಬಂಧ ಈಗಾಗಲೇ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇನ್ನೊಂದು ಸುತ್ತಿನ ತರಬೇತಿ ನಡೆಯುತ್ತಿದೆ. ಆಯಾ ಆಸ್ಪತ್ರೆಯಲ್ಲಿ ದಾಖಲಾಗುವ ಡೆಂಗಿ, ಕೋವಿಡ್, ಮಲೇರಿಯಾ, ಇಲಿ ಜ್ವರ ಸೇರಿದಂತೆ ಎಲ್ಲ ರೀತಿಯ ಜ್ವರಪೀಡಿತರ ಮಾಹಿತಿಯನ್ನು ಪ್ರತಿದಿನ ಸಂಜೆ 4 ಗಂಟೆಯೊಳಗೆ ದಾಖಲಿಸಬೇಕು. ನಂತರ ದಾಖಲಾಗುವ ರೋಗಗಳ ವಿವರವನ್ನು ಮರುದಿನ ದಾಖಲಿಸಬೇಕು’ ಎನ್ನುತ್ತಾರೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸೋಂಕುತಜ್ಞೆ ಡಾ. ಶ್ವೇತಾ.

‘ಜುಲೈ ಕೊನೆಯಿಂದ ನೋಂದಣಿ ಆರಂಭವಾಗಿದೆ. ಕೇಂದ್ರ ಕಚೇರಿಯಲ್ಲಿ ಲಭ್ಯವಾಗುವ ಮಾಹಿತಿ ಆಧರಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ತಕ್ಷಣ ಕಾರ್ಯಪ್ರವೃತ್ತರಾಗುವ ಆರೋಗ್ಯ ಸಿಬ್ಬಂದಿ, ಸ್ಥಳ ಭೇಟಿ ನೀಡಿ, ರೋಗಿಯ ಕುಟುಂಬದವರು, ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ನಿಗಾವಹಿಸುತ್ತಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT