ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಭಟನೆ ವೇಳೆ ಪ್ರಚೋದನೆ: ಶರಣ್ ಪಂಪ್‌ವೆಲ್ ಸೇರಿ 6 ಮಂದಿ ವಿರುದ್ಧ ಪ್ರಕರಣ

Published : 17 ಸೆಪ್ಟೆಂಬರ್ 2024, 19:47 IST
Last Updated : 17 ಸೆಪ್ಟೆಂಬರ್ 2024, 19:47 IST
ಫಾಲೋ ಮಾಡಿ
Comments

ಬಂಟ್ವಾಳ (ದಕ್ಷಿಣ ಕನ್ನಡ): ಬಿ.ಸಿ.ರೋಡ್‌ನಲ್ಲಿ ಸೋಮವಾರ ‘ಬಿ.ಸಿ.ರೋಡ್ ಚಲೋ’ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹಾಗೂ ಮುಖಂಡ ಭರತ್ ಕುಮ್ಡೇಲು ವಿರುದ್ಧ ಮಂಗಳವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196(1) (ಧರ್ಮ, ಜಾತಿ ಆಧಾರದ ಮೇಲೆ ದ್ವೇಷ ಸೃಷ್ಟಿಸುವುದು), ಸೆಕ್ಷನ್ 352, 3 (ಪ್ರಚೋದನೆ, ಶಾಂತಿ ಭಂಗ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಬಿ.ಸಿ.ರೋಡ್‌ನಲ್ಲಿ ಪ್ರತಿಭಟನೆ ನಡೆಸಿದ ವೇಳೆ ಶರಣ್ ಹಾಗೂ ಭರತ್, ಮುಸ್ಲಿಂ ಧರ್ಮದ ಘನತೆ ಹಾಗೂ ಸಮುದಾಯದ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ’ ಎಂದು ಆರೋಪಿಸಿ, ಮಹಮ್ಮದ್ ರಫೀಕ್ ಕೆಳಗಿನಪೇಟೆ ಎನ್ನುವವರು ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಭೆ ಖಂಡಿಸಿ ಮಂಗಳೂರಿನಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ಶರಣ್ ಪಂಪ್‌ವೆಲ್, ‘ಹಿಂದೂಗಳು ಮನಸ್ಸು ಮಾಡಿದರೆ ಮುಸ್ಲಿಮರು ಈದ್ ಮೆರವಣಿಗೆ ನಡೆಸುವುದು ಅಸಾಧ್ಯ’ ಎಂದಿದ್ದರು. ಇದಕ್ಕೆ ಪ್ರತಿಯಾಗಿ, ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತು ಪುರಸಭೆ ಸದಸ್ಯ ಹಸೈನಾರ್, ‘ತಾಕತ್ತಿದ್ದರೆ ಬಿ.ಸಿ. ರೋಡ್‌ಗೆ ಬನ್ನಿ’ ಎಂದು ಸವಾಲು ಹಾಕಿದ್ದ ಧ್ವನಿ ಮುದ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಸೋಮವಾರ ಬಿ.ಸಿ.ರೋಡ್‌ನಲ್ಲಿ ವಿವಿಧ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದ್ದರು.

ಮತ್ತೊಂದು ಪ್ರಕರಣ: ಬಿಜೆಪಿ ಬಾಳ್ತಿಲ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಯಶೋಧರ್ ಕರ್ಬೆಟ್ಟು ಎಂಬುವವರು ಮುಸ್ಲಿಮರನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾಡಿದ್ದಾರೆ ಎನ್ನಲಾದ ಧ್ವನಿ ಮುದ್ರಿಕೆ, ಸದ್ದು ಮಾಡಿತ್ತು. ಮಹಮ್ಮದ್ ಶರೀಫ್ ಧ್ವನಿ ಮುದ್ರಿಕೆಗೆ ಪ್ರತಿಯಾಗಿ ಯಶೋಧರ್ ಈ ಧ್ವನಿ ಮುದ್ರಣ ಹರಿಯಬಿಟ್ಟಿದ್ದರು ಎನ್ನಲಾಗಿದೆ. ಬಂಟ್ವಾಳದ ಮೊಹಮ್ಮದ್ ಸರ್ಫರಾಜ್ ನವಾಜ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಶೋಧರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 192 (ಸುಳ್ಳು ಸಾಕ್ಷ್ಯ ಸೃಷ್ಟಿ), 352ರ (ಪ್ರಚೋದನೆ, ಶಾಂತಿ ಭಂಗ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದ್ದು, ಆಯಕಟ್ಟಿನಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಬಂಧನಕ್ಕೆ ಆಗ್ರಹ

ಪ್ರಚೋದನಕಾರಿ ಹೇಳಿಕೆ ನೀಡಿರುವ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತು ಸದಸ್ಯ ಹಸೈನಾರ್ ಅವರನ್ನು ಪೊಲೀಸರು ತಕ್ಷಣ ಬಂಧಿಸಿ, ಕಾನೂನುಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

ಹಿಂದೂ ಸಮಾಜದ ವಿರುದ್ಧ ಹೇಳಿಕೆ : ದೂರು

ಕಾರಟಗಿ (ಕೊಪ್ಪಳ ಜಿಲ್ಲೆ): ವಕ್ಫ್‌ (ತಿದ್ದುಪಡಿ) ಮಸೂದೆ ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಇತ್ತೀಚೆಗೆ ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಹಿಂದೂ ಸಮಾಜದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸಂಘಟನೆಯ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಂಘಟನೆಯ ಕಾರ್ಯದರ್ಶಿ ಇಮ್ರಾನ್‌, ಕನಕಗಿರಿ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಅಜ್ಮೀರ್‌ ಸಿಂಗನಾಳ ಮತ್ತು ಉಪಾಧ್ಯಕ್ಷ ದಾವೂದ್‌ ವಿರುದ್ಧ ಕಾರಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೇಳಿಕೆಯೇನು?: ಸೆಪ್ಟೆಂಬರ್ 13ರಂದು ಎಸ್‌ಡಿಪಿಐ ಪ್ರತಿಭಟನೆ ನಡೆಸುವಾಗ ಇಮ್ರಾನ್‌ ಅವರು, ‘1992ರಲ್ಲಿ ಬಾಬರಿ ಮಸೀದಿ ಘಟನೆ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಘಟನೆಯ ಪ್ರತೀಕಾರವಾಗಿ ವೀರ ಸಾವರ್ಕರ್ ಅವರ ಸಂತತಿ ಮುಗಿಸುತ್ತೇವೆ. ನಾಗ್ಪುರದಲ್ಲಿರುವ ವೀರ ಸಾವರ್ಕರ್‌ ಸಂತತಿ ಬಂದರೂ ಮುಸಲ್ಮಾನರ ವಕ್ಫ್‌ ಆಸ್ತಿ ಮುಟ್ಟಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದ್ದರು.

‘ಮುಸಲ್ಮಾನರು ಕಾರಟಗಿಯಲ್ಲಿ ಸಣ್ಣ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರಬಹುದು. ನೆನಪಿರಲಿ ಇದೇ ದೇಶದಲ್ಲಿ ಎನ್‌ಆರ್‌ಸಿ ಕಾಯ್ದೆ ಬಂದಿತ್ತು. ಅದನ್ನು ನಮ್ಮ ಹೆಣ್ಣುಮಕ್ಕಳು ಒದ್ದು ತಿರಸ್ಕಾರ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಇದನ್ನು ಆಕ್ಷೇಪಿಸಿ ಬಿಜೆಪಿ ಕಾರಟಗಿ ಮಂಡಲದ ಅಧ್ಯಕ್ಷ ಮಂಜುನಾಥ ಮಸ್ಕಿ ದೂರು ನೀಡಿದ್ದರು.

ಘಟನೆ ಕುರಿತು ಕೊಪ್ಪಳದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ‘ಸಮಾಜದ ಶಾಂತಿ ಕದಡಿದರೆ ಯಾವ ಸಂಘಟನೆಯಾದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT