ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಕೈಯಲ್ಲಿ ಗೋವಿಂದ ಪೈಗಳ ಊರುಗೋಲು

Last Updated 12 ಆಗಸ್ಟ್ 2022, 22:45 IST
ಅಕ್ಷರ ಗಾತ್ರ

ಕಾಸರಗೋಡು: ದಂಡಿ ಯಾತ್ರೆಗೆ ಗಾಂಧೀಜಿ ತೆರಳಿದ್ದ ಚಿತ್ರವು ಇಂದಿಗೂ ಪ್ರಸಿದ್ಧ. ಆ ಚಿತ್ರದಲ್ಲಿ ಗಾಂಧೀಜಿ ಹಿಡಿದಿರುವ ಊರುಗೋಲು ಮಂಜೇಶ್ವರ ಗೋವಿಂದ ಪೈಯವರ ಮನೆಯದ್ದು. ಮಹಾತ್ಮ ಗಾಂಧಿ ಉಪಯೋಗಿಸಿದ ವಸ್ತುಗಳ ಸಂಗ್ರಹಾಲಯದಲ್ಲಿ, ದಂಡಿ ಯಾತ್ರೆಯ ಸ್ಮಾರಕವಾದ ಈ ಊರುಗೋಲನ್ನು ಇಂದಿಗೂ ಕಾಣಬಹುದಾಗಿದೆ.

ಸ್ವಾತಂತ್ರ್ಯ ಹೋರಾಟ, ಗ್ರಾಮೋದ್ಧಾರ, ದೀನದಲಿತೋದ್ಧಾರ ವಿಷಯಗಳಿಗೆ ಕಾಸರಗೋಡಿನ ಅನೇಕರು ವಿಶೇಷ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಇಂತಹ ಅನೇಕ ನೆನಪುಗಳು ಕಾಸರಗೋಡಿನ ನೆಲದಲ್ಲೂ ಸಾಕಷ್ಟಿವೆ.

ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಗಾಂಧೀಜಿ ಅಭಿಮಾನಿ. ಪೈಗಳೂ ಖಾದಿವ್ರತವನ್ನು ಸ್ವೀಕರಿಸಿ ಕೊನೆಗಾಲದವರೆಗೂ ಪಾಲಿಸಿದ‌್ದರು. ಪೈಗಳು ಅರವಿಂದ ಘೋಷ್ ಅವರಿಂದಲೂ ದೇಶಸೇವೆಯ ಸ್ಫೂರ್ತಿ ಪಡೆದಿದ್ದರು. ಸ್ವಾತಂತ್ರ್ಯ ಚಳವಳಿಗಾಗಿ ದೇಶ ಸುತ್ತುತ್ತಿದ್ದ ವಿದ್ವಾಂಸ ಕಾಕಾ ಕಾಲೇಲ್ಕರ್‌ ಒಮ್ಮೆ ಗೋವಿಂದ ಪೈಯವರನ್ನು ಭೇಟಿಯಾದರು. ಕಾಲೇಲ್ಕರ್‌ ಮೂಲಕ ರಾಷ್ಟ್ರದ ಅಂದಿನ ಕ್ರಾಂತಿ ಕಾರ್ಯಕ್ರಮಗಳಲ್ಲಿ ಮಾಹಿತಿ ಪಡೆಯಲು ಪೈಗಳು ಆಸಕ್ತಿ ತೋರಿದ್ದರು.ಅವರಿಬ್ಬರ ಸಂಬಂಧ ಗಾಢವಾಯಿತು. ತಮ್ಮ ಹಿರಿಯರು ಉಪಯೋಗಿಸುತ್ತಿದ್ದ ಒಂದು ಊರುಗೋಲನ್ನು ಪೈಗಳು ಕಾಕಾ ಕಾಲೇಲ್ಕರ್‌ಗೆ ಉಡುಗೊರೆಯಾಗಿ ನೀಡಿದ್ದರು. ಕಾಲೇಲ್ಕರ್‌ ಅವರು ಅದನ್ನು 1930ರಲ್ಲಿ ದಂಡಿ ಯಾತ್ರೆಗೆ ಹೊರಟ ಗಾಂಧಿಜಿಗೆ ನೀಡಿದ್ದರು.

ಗೋವಿಂದ ಪೈ ಅವರು ಮಂಜೇಶ್ವರವನ್ನು ಬಿಟ್ಟು ದೇಶಸೇವೆಗಾಗಿ ನೌಸಾರಿಯಲ್ಲಿ ನೆಲೆಸಿದರು. ಆದರೆ ಪತ್ನಿಯ ಅಸೌಖ್ಯ ಕಾರಣದಿಂದ ಅವರಿಗೆ ಅಲ್ಲಿ ಹೆಚ್ಚು ಸಮಯ ನಿಲ್ಲಲಾಗಲಿಲ್ಲ.

ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಸ್ವಾತಂತ್ರ್ಯ ಗೀತೆಗಳು ಜನರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದವು. 1935ರಿಂದಲೇ ಪತ್ರಿಕಾರಂಗದಲ್ಲಿ ತೊಡಗಿಸಿಕೊಂಡ ಅವರು ಮಂಗಳೂರಿನ ಸ್ವದೇಶಾಭಿಮಾನಿ, ಪ್ರಭಾತ, ಕಂಠೀರವ ಪ್ರತಿಕೆಗಳ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸುತ್ತಿದ್ದರು. 1944ರವರೆಗೂ ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾದ ಸ್ಫೂರ್ತಿಯ ಲೇಖನ, ಕವನಗಳನ್ನು ಪ್ರಕಟಿಸಿದ್ದರು. ಹಗಲು ಪತ್ರಿಕಾ ಕಚೇರಿಯಲ್ಲಿ ಬರವಣಿಗೆಯಲ್ಲಿ, ರಾತ್ರಿ ಸ್ವಾತಂತ್ರ್ಯ ವೀರರಿಗೆ ಹೋರಾಟದ ಮಾಹಿತಿ ತಿಳಿಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು. 1930ರಲ್ಲಿ ಗಾಂಧೀಜಿ ಮಂಗಳೂರಿಗೆ ಬರುತ್ತಾರೆ ಎಂಬ ಸುದ್ದಿ ತಿಳಿದ ಕಯ್ಯಾರರು, ಸಹಪಾಠಿಗಳೊಂದಿಗೆ ಕಾಲ್ನಡಿಗೆಯಲ್ಲೇ ಮಂಗಳೂರಿಗೆ ತೆರಳಿದ್ದರು. ಗಾಂಧಿ ಭೇಟಿ ಬಳಿಕ ‘ಗಾಂಧಿ ದರ್ಶನ ಎಂಬ ಕವಿತೆ ಬರೆದರು. ಕುದ್ಮುಲ್‌ ರಂಗರಾಯರ ಪ್ರಭಾವ ತನ್ನ ಮೇಲಾಗಿದೆಯೆಂದು ಕಯ್ಯಾರರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ದೇವಪ್ಪ ಆಳ್ವರ ಜೊತೆಗೂ ಕಯ್ಯಾರರಿಗೆ ನಿಕಟ ಒಡನಾಟವಿತ್ತು. ದೇವಪ್ಪ ಆಳ್ವರು, ಮೇಲೋತ್ತ್‌ ನಾರಾಯಣ ನಂಬ್ಯಾರ್‌, ಒಬ್ಬರು ಸ್ವಾಮೀಜಿ ಜೊತೆಯಾಗಿ ಪೆರಡಾಲ ಉದನೇಶ್ವರ ದೇವಸ್ಥಾನಕ್ಕೆ ಹರಿಜನ ಪ್ರವೇಶ ಮಾಡಿಸಿದ್ದನ್ನು ಕಯ್ಯಾರರು ಸ್ಮರಿಸಿದ್ದಾರೆ.

ಕೇರಳದ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಗೊಂಡು ಇಂದಿಗೂ ದಾಖಲೆಯಾಗಿರುವ ಎಂ. ಉಮೇಶ ರಾವ್‌, ಡಾ.ಪಿ. ಎಸ್‌ ಶಾಸ್ತ್ರಿ, ಡಾ. ಎ.ಸುಬ್ಬರಾವ್‌, ಬಿ. ನಾಮದೇವ ಶೆಣೈ, ಗುರುಕೃಷ್ಣ ಭಟ್‌ ಪೆರ್ಲ, ಮಾಧವ ಪೈ ಕುಂಬಳೆ, ಬಿ.ವಿ ಕಕ್ಕಿಲ್ಲಾಯ, ಕೆ.ಟಿ. ಮೋಹನ ಟೇಲರ್‌, ಗಾಂಧಿ ಕೃಷ್ಣ ಭಟ್‌ ಖಂಡಿಗೆ, ಪುಂಡೂರು ಲಕ್ಷ್ಮಿನಾರಾಯಣ ಪುಣಿಂಚತ್ತಾಯ, ಬಾಡೂರು ಜಗನ್ನಾಥ ರೈ ಮುಂತಾದ ಕಾಸರಗೋಡಿನ ಕನ್ನಡಿಗರು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ್ಧ ಪಾತ್ರ ಸ್ಮರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT