ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 6 ಕಡೆಗಳಲ್ಲಿ ಬಿಲ್ಲವರು ಬಹುಸಂಖ್ಯಾತರಾಗಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೇವಲ ಒಬ್ಬರಿಗೆ ಟಿಕೆಟ್ ನೀಡಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಮೊದಲನೇ ಪಟ್ಟಿಯಲ್ಲಿ ಬಿಲ್ಲವ, ನಾಮಧಾರಿ, ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಎರಡನೇ ಪಟ್ಟಿಯಲ್ಲಿಯೂ ಅನ್ಯಾಯವಾದರೆ ನಮ್ಮ ದಾರಿ ನಮಗೆ ಎಂದು’ ಎಂದು ಎಚ್ಚರಿಸಿದರು.
ಬಿಲ್ಲವ ಸಮುದಾಯದ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಬಿಲ್ಲವ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮತ್ತೆ ಹಕ್ಕೊತ್ತಾಯ ಮಾಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರ ಸೇರಿದಂತೆ ಬಿಲ್ಲವ ಮತಗಳು ಹೆಚ್ಚು ಇರುವ ಕ್ಷೇತ್ರಗಳಲ್ಲಿ ಸಮುದಾಯಕ್ಕೆ ಅವಕಾಶ ನೀಡದಿದ್ದಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ 11ಕ್ಕೂ ಹೆಚ್ಚು ಮಂದಿ ₹ 2 ಲಕ್ಷ ಕಟ್ಟಿ ಅರ್ಜಿ ಹಾಕಿದ್ದರೂ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಾಜಿ ಮೇಯರ್‌ಗಳು ಸೇರಿದಂತೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದವರು ಅರ್ಜಿ ಹಾಕಿದ್ದರು. ರಾಜ್ಯದಲ್ಲಿ ಎಲ್ಲ ಪಕ್ಷಗಳು ಬಿಲ್ಲವ ಸಮುದಾಯಕ್ಕೆ ತಲಾ 10 ಸ್ಥಾನ ನೀಡಬೇಕು ಎಂದು ಎಲ್ಲ ಪಕ್ಷಗಳಿಗೆ ಆಗ್ರಹ ಮಾಡಲಾಗಿದೆ ಎಂದು ತಿಳಿಸಿದರು.
ನಾನು ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಸಮಾಜದ ಬೇಡಿಕೆ ಬಗ್ಗೆ ಮನವರಿಕೆ ಮಾಡಿ ಬಂದಿದ್ದೇನೆ. ಸೋಮವಾರ ಮತ್ತೆ ನವದೆಹಲಿಗೆ ಹೋಗಿ ಮತ್ತೆ ಮಾತುಕತೆ ಮಾಡುತ್ತೇನೆ ಎಂದರು.
ಮಂಗಳೂರು ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜಿ. ಸುವರ್ಣ, ಲೋಕನಾಥ ಪೂಜಾರಿ, ಸುರೇಶ್ ಚಂದ್ರ ಕೋಟ್ಯಾನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.