ಗುರುವಾರ , ಜೂನ್ 30, 2022
27 °C
ಅಂಗವಿಕಲರಿಗೆ ಉಪಕರಣ ವಿತರಿಸಿದ ಡಾ. ಕುಮಾರ್

ಸ್ವಾಭಿಮಾನದ ಬದುಕಿಗೆ ಅವಕಾಶ ಕೊಡಿ: ಡಾ. ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಅಂಗವಿಕಲರಿಗೆ ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿ ಎಲ್ಲ ನಾಗರಿಕರದ್ದಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ನವರತ್ನ ಎಂಟರ್‌ ಪ್ರೈಸಸ್‌ನ ಆರ್‌ಇಸಿ ಲಿಮಿಟೆಡ್ ಹಾಗೂ ಕೃತಕ ಅಂಗಾಂಗ ಉತ್ಪಾದಕ ಕಾರ್ಪೊರೇಷನ್ (ಎಎಲ್‍ಐಎಂಕೊ) ಸಹಯೋಗದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಅಂಗವಿಕಲರಿಗೆ ಕೃತಕ ಉಪಕರಣ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನ, ಗ್ರಾಮ ನಿಧಿ ಹಾಗೂ ಇತರ ಹಣಕಾಸಿನಲ್ಲಿ ಅಂಗವಿಕಲರ ಕಲ್ಯಾಣ ಚಟುವಟಿಕೆಗಳಿಗೆಂದೇ ಶೇ 5ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಲಾಗುತ್ತದೆ.
ಅವರಲ್ಲಿ ಸೌಲಭ್ಯ ವಂಚಿತರನ್ನು ಗುರುತಿಸಿ, ಆದ್ಯತೆ ಮೇರೆಗೆ ಸವಲತ್ತುಗಳನ್ನು ನೀಡಬೇಕು. ಈ ರೀತಿಯ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಾಯವಾಗಲು ಅಂಗವೈಕಲ್ಯ ಪ್ರಮಾಣ ಪತ್ರ ಹಾಗೂ ಯುಡಿ ಗುರುತಿನ ಚೀಟಿಯನ್ನು ಅಂಗವಿಕಲರ ಪಡೆಯಬೇಕು ಎಂದು ಸಲಹೆ ನೀಡಿದರು.

ಅಂಗವಿಕಲರ ಏಳಿಗೆಗೆ ಶ್ರಮಿಸುವುದು ಹಾಗೂ ಅವರಿಗೆ ಸೌಲಭ್ಯಗಳನ್ನು ನೀಡಲು ಸ್ಥಳೀಯ ಸಂಘ-ಸಂಸ್ಥೆಗಳು ಮುಂದೆ ಬರುವುದು ಉತ್ತಮ ಬೆಳವಣಿಗೆ. ಇತರರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ನಿರೂಪಿಸಿಕೊಳ್ಳಲು ಸಾಕಷ್ಟು ಸಂಘ ಸಂಸ್ಥೆಗಳು ಅಂಗವಿಕಲರಿಗೆ ಸಹಕರಿಸುತ್ತಿವೆ. ಆತ್ಮವಿಶ್ವಾಸದಿಂದ ಅಂಗವಿಕಲರು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಗದೀಶ್ ಪೈ ಮಾತನಾಡಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಆರ್.ಇ.ಸಿ. ಲಿಮಿಟೆಡ್ ಪ್ರಾದೇಶಿಕ ಕಚೇರಿ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ಆರ್. ಅನ್‍ಬಾಲಗನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಟಿ. ಪಾಪ ಭೋವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು