ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಅನುದಾನವನ್ನು ಮೀನುಗಾರಿಕೆ, ಕಾಲುಸಂಕ ನಿರ್ಮಾಣ, ಕರಾವಳಿ ತಟದ ಶಾಲೆಗಳ ಅಭಿವೃದ್ಧಿ ಸೇರಿದಂತೆ ನಿಗದಿ ಉದ್ದೇಶಕ್ಕೆ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣ, ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಬಾರದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ತಾಕೀತು ಮಾಡಿದರು.
ಶನಿವಾರ ಇಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹಿಂದಿನ ವರ್ಷ ₹30 ಕೋಟಿ ಅನುದಾನ ಬಂದಿದ್ದು, ಕಳೆದ ಮಾರ್ಚ್‌ನಲ್ಲಿ ₹15.50 ಕೋಟಿ ಅನುದಾನ ದೊರೆತಿದೆ. ಆದರೆ, ಪ್ರಾಧಿಕಾರದ ಒಟ್ಟಾರೆ ಕಾಮಗಾರಿಗಳನ್ನು ಪರಿಶೀಲಿಸಿದರೆ, ಶೇ 90ರಷ್ಟು ಅನುದಾನ ರಸ್ತೆ ನಿರ್ಮಾಣಕ್ಕೆ ಬಳಕೆಯಾಗಿದೆ. ಪ್ರಾಧಿಕಾರದ ಆಶಯ ಈಡೇರಬೇಕಾದರೆ, ನಿಗದಿತ ಉದ್ದೇಶಕ್ಕೆ ಅನುದಾನ ಬಳಕೆಯಾಗಬೇಕು ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಮಾಹಿತಿ ನೀಡಿ, ‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಪ್ರಾಧಿಕಾರವು ಈವರೆಗೆ 580 ಕಾಲುಸಂಕಗಳನ್ನು ನಿರ್ಮಾಣ ಮಾಡಿದೆ. ಮೂರೂ ಜಿಲ್ಲೆಗಳು ಸೇರಿದಂತೆ ಇನ್ನೂ 350ಕ್ಕೂ ಹೆಚ್ಚು ಕಾಲುಸಂಕಗಳಿಗೆ ಬೇಡಿಕೆ ಇದೆ. ಆದರೆ, ಪ್ರಾಧಿಕಾರಕ್ಕೆ ದೊರೆಯುವ ಸೀಮಿತ ಅನುದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ. ಹೊಸ ಯೋಜನೆಗಳಿಗೆ ₹25 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು. ಜಿಲ್ಲೆಗಳಲ್ಲಿ ನಡೆಸಿರುವ ಕಾಮಗಾರಿಗಳ ವಿವರ ನೀಡಿದರು.
‘ಮಂಗಳೂರು ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಇರುವಾಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ನಿರ್ಮಾಣ ಮಾಡಿದ್ದು ಯಾಕೆ? ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ಗೆ ₹1.50 ಕೋಟಿ ಅನುದಾನ ನೀಡಲಾಗಿದೆ. ಪಿಲಿಕುಳದಲ್ಲಿ ರಸ್ತೆ ನಿರ್ಮಾಣವಾಗಿದೆ. ಬಹುಪಾಲು ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ನೀಡಿ, ಪ್ರಾಧಿಕಾರಕ್ಕೆ ಅನುದಾನ ಇಲ್ಲ ಎಂದರೆ ಹೇಗೆ’ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನಿಸಿದರು.
ಪ್ರಾಧಿಕಾರದ ಕಾಮಗಾರಿಗಳಿಗೆ ವ್ಯಾಪ್ತಿ ನಿಗದಿಪಡಿಸಬೇಕು. ಕರಾವಳಿಯ ಮೀನುಗಾರಿಕೆ, ಕಾಲುಸಂಕ, ತೂಗುಸೇತುವೆ ಇಂತಹ ಉದ್ದೇಶಗಳಿಗೆ ಪ್ರಾಧಿಕಾರದ ಅನುದಾನ ಸದ್ಬಳಕೆಯಾಗಬೇಕು. ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಬಹುದು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.