ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ‘ಕೈ’ಗೆ ‘ಹೈ’ ಟೆನ್ಶನ್; ಕಮಲ ನಿರಾಳ

ಜೆಡಿಎಸ್‌, ಎಸ್‌ಡಿಪಿಐನಲ್ಲಿ ಆರಂಭವಾಗದ ಚಟುವಟಿಕೆ
Last Updated 9 ಡಿಸೆಂಬರ್ 2022, 5:33 IST
ಅಕ್ಷರ ಗಾತ್ರ

ಮಂಗಳೂರು: ಐದು ದಶಕಗಳಲ್ಲಿ ನಡೆದ 10ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಚುನಾವಣಾ ಕಣ ರಂಗೇರಿದೆ.

ಈ ಎರಡು ಪಕ್ಷಗಳ ಮುಖಂಡರು ಟಿಕೆಟ್‌ ಗಿಟ್ಟಿಸಿಕೊಳ್ಳುವುದಕ್ಕಾಗಿ ವಿವಿಧ ತಂತ್ರಗಳಿಗೆ ಮೊರೆಹೋಗಿದ್ದು ನಿರ್ದಿಷ್ಟವಾಗಿ ಇಂಥವರೇ ಅಭ್ಯರ್ಥಿ ಎಂದು ಬೊಟ್ಟು ಮಾಡಿ ತೋರಿಸುವಷ್ಟರ ಮಟ್ಟಿಗೆ ನಿರ್ಧಾರ ಆಗಿಲ್ಲ. ಜೆಡಿಎಸ್‌ ಮತ್ತು ಎಸ್‌ಡಿಪಿಐ ಕೂಡ ಇಲ್ಲಿ ಸ್ಪರ್ಧಿಸಲು ಆಕಾಂಕ್ಷೆ ಹೊಂದಿದೆ. ಆದರೆ ಆ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆಯೇ ಸ್ಪಷ್ಟ ರೂಪ ಇಲ್ಲ.

ಹಿಂದಿನ ಚುನಾವಣೆಗಳಲ್ಲಿ ಎರಡು ಪಕ್ಷಗಳ ಜೊತೆಯಲ್ಲಿ ಆ ಪಕ್ಷಗಳನ್ನು ಪ್ರತಿನಿಧಿಸಿದವರೂ ಆಧಿಪತ್ಯ ಸ್ಥಾಪಿಸಿದ್ದರು. ಆದ್ದರಿಂದ ಹೊಸಮುಖಗಳಿಗೆ ಇಲ್ಲಿ ಅವಕಾಶ ಲಭಿಸಿದ್ದು ಕಡಿಮೆ. ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದವರೇ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಬೆಂಗಳೂರಿನ ರಕ್ಷಿತ್‌ ಶಿವರಾಮ್ ಅರ್ಜಿ ಸಲ್ಲಿಸಿರು
ವುದು ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ನಿಂದ ವಸಂತ ಬಂಗೇರ ಮತ್ತು ಗಂಗಾಧರ ಗೌಡ ಕೂಡ ಟಿಕೆಟ್ ಆಕಾಂಕ್ಷಿಗಳು. ಇಬ್ಬರೂ ಈ ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸಿದವರು. ಬಿಜೆಪಿ, ಹಾಲಿ ಶಾಸಕ ಹರೀಶ ಪೂಂಜಾ ಅವರೇ ಅಭ್ಯರ್ಥಿ ಎಂದು ಬಾಹ್ಯವಾಗಿ ಹೇಳಿಕೊಳ್ಳುತ್ತಿದ್ದರೂ ಆಕಾಂಕ್ಷಿಗಳ ಒಳ ಹೊಡೆತ ಆ ಪಕ್ಷದಲ್ಲೂ ಇದೆ. ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ಸಂಸ್ಕಾರ ಭಾರತಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಅವರೂ ಪಕ್ಷದಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಹೀಗಾಗಿ ಹಲವು ಕ್ಷೇತ್ರಗಳಂತೆ ಇಲ್ಲಿಯೂ ಕಾಂಗ್ರೆಸ್‌ಗೆ ಟಿಕೆಟ್ ಹಂಚಿಕೆಯ ಟೆನ್ಶನ್ ಕಾಡುತ್ತಿದ್ದರೆ ಬಿಜೆಪಿಯಲ್ಲಿ ಅಭ್ಯರ್ಥಿ ಯಾರೆಂಬ ಗೊಂದಲ ಸ್ವಲ್ಪ ಮಟ್ಟಿಗೆ ಇದೆ. ಆದರೂ ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಿರಾಳರಾಗಿದ್ದಾರೆ.

ಜೆಡಿಎಸ್‌, ಎಸ್‌ಡಿಪಿಐ ನಡೆ ನಿಗೂಢ: ಹಿಂದಿನ ಚುನಾವಣೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಮುನ್ನೆಲೆಗೆ ಬಂದಿದ್ದ ಜೆಡಿಎಸ್‌ ಈ ಬಾರಿ ಸ್ಪರ್ಧಿಸುತ್ತದೆಯೋ ಇಲ್ಲವೋ ಎಂಬುದು ಇನ್ನೂ ನಿರ್ಧಾರ ಆಗಲಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಲ ಪ್ರದರ್ಶಿಸಿದ್ದ ಎಸ್‌ಡಿಪಿಐ ನಡೆಯೂ ನಿಗೂಢವಾಗಿಯೇ ಉಳಿದಿದೆ. ಹಿಂದೆ ಒಂದೆರಡು ಬಾರಿ ಸ್ಪರ್ಧಿಸಿದ್ದ ಸಿಪಿಎಂ ಈ ಬಾರಿ ಕಣದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.

‘ಹರೀಶ್ ಪೂಂಜ ಅವರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದ್ದರಿಂದ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು ಇದೆ. ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷ ಬಲಿಷ್ಠವಾಗಿರುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ’ ಎನ್ನುತ್ತಾರೆ, ಬಿಜೆಪಿ ಕ್ಷೇತ್ರ ಘಟಕದ ಅಧ್ಯಕ್ಷ ಜಯಂತ್ ಕೋಟ್ಯಾನ್.

ಪೂರಕ ಮಾಹಿತಿ: ಗಣೇಶ್‌ ಶಿರ್ಲಾಲು, ಬೆಳ್ತಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT