ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಿನಲ್ಲೇ ಪರೀಕ್ಷೆ ಬರೆದ ಕೌಶಿಕ್‌ ಆಚಾರ್ಯ, ಸಚಿವ ಸುರೇಶ ಕುಮಾರ್ ಮೆಚ್ಚುಗೆ

Last Updated 26 ಜೂನ್ 2020, 11:12 IST
ಅಕ್ಷರ ಗಾತ್ರ

ಬಂಟ್ವಾಳ: ಎರಡೂ ಕೈ ಇಲ್ಲದ ವಿದ್ಯಾರ್ಥಿ ಕೌಶಿಕ್‌ ಆಚಾರ್ಯಇಲ್ಲಿನ ಎಸ್‌ವಿಎಸ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಕಾಲಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮೂಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ವಿದ್ಯಾರ್ಥಿಯ ಓದಿನ ಶ್ರದ್ಧೆ ಹಾಗೂ ಶಿಕ್ಷಣದ ಬಗ್ಗೆ ಆತನಿಗಿರುವ ಬದ್ಧತೆಯನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಮೆಚ್ಚಿ ಕೊಂಡಾಡಿದ್ದಾರೆ.

ಬಂಟ್ವಾಳ ಪೇಟೆ ಸಮೀಪದ ಕಂಚಿಕಾರಪೇಟೆ ನಿವಾಸಿ ರಾಜೇಶ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ದ್ವಿತೀಯ ಪುತ್ರ ಕೌಶಿಕ್‌. ಈತನಿಗೆ ಹುಟ್ಟಿನಿಂದಲೇ ಎರಡೂ ಕೈಗಳು ಇಲ್ಲ. ಪ್ರಸ್ತುತ ಬಂಟ್ವಾಳದ ಎಸ್‌ವಿಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಓದುತ್ತಿರುವ ಈತ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ. ಚಿಕ್ಕಂದಿನಿಂದಲೇ ಕಾಲಿನ ಬೆರಳಿನಿಂದ ಬರೆಯುವ ಅಭ್ಯಾಸ ರೂಢಿಸಿಕೊಂಡಿದ್ದಾನೆ.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ತನ್ನದೇ ಛಾಪು ಮೂಡಿಸಿರುವ ಕೌಶಿಕ್‌, ತಾನು ಇತರ ವಿದ್ಯಾರ್ಥಿಗಳಿಗೇನು ಕಡಿಮೆಯಿಲ್ಲ ಎಂಬಂತೆ ಚಿತ್ರಕಲೆ, ನೃತ್ಯ, ಯೋಗ, ಈಜು, ಕ್ರಿಕೆಟ್ ಮತ್ತಿತರ ಹವ್ಯಾಸದಲ್ಲಿ ಮಿಂಚು ಹರಿಸಿದ್ದಾನೆ.

ಬಡ ಕುಟುಂಬದಲ್ಲಿ ಜನಿಸಿದ ಕೌಶಿಕ್‌, ತನ್ನ ತಂದೆ-ತಾಯಿ ಮತ್ತು ಸಹೋದರನ ಸಹಕಾರದ ಜೊತೆಗೆ ಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ಇತರ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾನೆ.

‘ಕೇವಲ ಅಂಕಗಳಿಕೆಯ ಹಿಂದೆ ಬಿದ್ದು, ತಾಳ್ಮೆ ಕಳೆದುಕೊಂಡ ಅದೆಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಸಕ್ತ ಸಮಾಜದಲ್ಲಿ ಕೌಶಿಕ್ ಆಚಾರ್ಯ ಎಲ್ಲರಿಗೂ ಆತ್ಮಸ್ಥೈರ್ಯದ ಪ್ರತೀಕವಾಗಿ ಗೋಚರಿಸುತ್ತಾನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಕೌಶಿಕ್‌ನ ಶಿಕ್ಷಕರು.

ಶಿಕ್ಷಣ ಸಚಿವರ ಮೆಚ್ಚುಗೆ: ಎಸ್‌ವಿಎಸ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಯಾರ ಸಹಾಯವೂ ಇಲ್ಲದೆ ಪರೀಕ್ಷೆ ಬರೆದ ಕೌಶಿಕ್‌ ಸಾಧನೆ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲಾ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT