ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ. ಜಿಲ್ಲೆಯತ್ತ ನೆರೆ ರಾಜ್ಯದ ವಾಹನ

ಪೆಟ್ರೋಲ್‌, ಡೀಸೆಲ್‌ಗೆ ಹೆಚ್ಚಿನ ದರ: ಕೇರಳದ ಬಂಕ್‌ಗಳಲ್ಲಿ ವಹಿವಾಟು ಶೇ 30 ರಷ್ಟು ಕುಸಿತ
Last Updated 9 ಏಪ್ರಿಲ್ 2022, 3:42 IST
ಅಕ್ಷರ ಗಾತ್ರ

ಮಂಗಳೂರು: ಪಕ್ಕದ ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿಯಾ ಗಿದ್ದು, ಗಡಿಭಾಗವಷ್ಟೇ ಅಲ್ಲ, ಗಡಿಯಿಂದ ಸುಮಾರು 40–50 ಕಿ.ಮೀ. ದೂರದಿಂದಲೂ ವಾಹನಗಳ ಮಾಲೀಕರು ಪೆಟ್ರೋಲ್‌, ಡೀಸೆಲ್‌ಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಕಾಸರಗೋಡು ಜಿಲ್ಲೆಗೆ ಹೋಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್‌ಗೆ ₹6 ಹಾಗೂ ಡೀಸೆಲ್‌ಗೆ ₹ 9 ಕಡಿಮೆ ದರವಿದೆ.

‘ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಕೇರಳದ ಪೆಟ್ರೋಲ್‌ ಬಂಕ್‌ಗಳ ವಹಿವಾಟು ಶೇ 30 ರಷ್ಟು ಕುಸಿದಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳದ ಪೆಟ್ರೋಲ್‌ ಬಂಕ್‌ಗಳು ಹೆಚ್ಚಿನ ನಷ್ಟ ಅನುಭವಿಸುತ್ತಿವೆ’ ಎಂದು ಅಖಿಲ ಭಾರತ ಪೆಟ್ರೋಲ್‌ ಬಂಕ್‌ ಡೀಲರ್‌ಗಳ ಸಂಘದ ಕೇರಳ ರಾಜ್ಯ ಘಟಕದ ಕಾರ್ಯದರ್ಶಿ ರಯಿಸ್ ಮೂಸಾ ಚೆರ್ಕಳಂ
ಹೇಳಿದ್ದಾರೆ.

ಬೇರೆ ರಾಜ್ಯಗಳಿಂದ ಕೊಚ್ಚಿನ್‌ವರೆಗೆ ಸರಕು ಸಾಗಿಸುವ ಲಾರಿಗಳು ಕೇರಳದ ಬಂಕ್‌ಗಳಲ್ಲಿ ಡೀಸೆಲ್‌ ಹಾಕಿಸಿಕೊಳ್ಳುತ್ತಿಲ್ಲ. ಕರ್ನಾಟಕ ಇಲ್ಲವೇ ಬೇರೆ ರಾಜ್ಯಗಳಿಂದ ಟ್ಯಾಂಕ್‌ ತುಂಬಿಸಿಕೊಂಡು ಕೇರಳಕ್ಕೆ ಬರುತ್ತಿವೆ ಎಂದು ಪೆಟ್ರೋಲ್‌ ಬಂಕ್‌ ಡೀಲರ್‌ಗಳ ಸಂಘದ ಕಾಸರಗೋಡು ಜಿಲ್ಲಾ ಘಟಕದ ಖಜಾಂಚಿ ಕೆ. ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

‘ಸಿಪಿಸಿಆರ್‌ಐ ಬಳಿ ಹೆದ್ದಾರಿಯಲ್ಲಿ ಇರುವ ನನ್ನ ಪೆಟ್ರೋಲ್‌ ಬಂಕ್‌ನಲ್ಲಿ ನಿತ್ಯ 10 ಸಾವಿರ ಲೀಟರ್ ಡೀಸೆಲ್‌ ಮಾರಾಟ ಆಗುತ್ತಿತ್ತು. ಕರ್ನಾಟಕದಲ್ಲಿ ಡೀಸೆಲ್‌, ಪೆಟ್ರೋಲ್‌ ಮೇಲಿನ ತೆರಿಗೆಯನ್ನು ಕಡಿತ ಮಾಡಿದ ನಂತರ, ಬಂಕ್‌ನಲ್ಲಿ ಡೀಸೆಲ್‌ ಮಾರಾಟ ಗಣನೀಯವಾಗಿ ಕುಸಿದಿದೆ. ಸದ್ಯ ನಿತ್ಯ ಸುಮಾರು 2,500 ಲೀಟರ್‌ ಡೀಸೆಲ್‌ ಮಾರಾಟ ಆಗುತ್ತಿದೆ’ ಎಂದು ಹೇಳಿದ್ದಾರೆ.

ಕೇರಳಕ್ಕೆ ಬರುವ ಟ್ರಕ್‌ಗಳು ಕರ್ನಾಟಕದಲ್ಲಿಯೇ 300–400 ಲೀಟರ್‌ ಡೀಸೆಲ್‌ ತುಂಬಿಸಿಕೊಂಡು ಬರುತ್ತವೆ. ಮತ್ತೆ ಮಾಹೆಯಲ್ಲಿಯೇ ಲಾರಿಗಳಿಗೆ ಡೀಸೆಲ್‌ ತುಂಬಿಸಲಾಗುತ್ತಿದೆ. ಕೇರಳದಲ್ಲಿ ಡೀಸೆಲ್‌ ಖರೀದಿಸುವುದು ಲಾರಿಗಳ ಮಾಲೀಕರಿಗೆ ದುಬಾರಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಾಣಿಜ್ಯ ವಾಹನಗಳೇ ಅಧಿಕ: ಹೆದ್ದಾರಿಯಲ್ಲಿ ಇರುವ ಪೆಟ್ರೋಲ್ ಬಂಕ್‌ಗಳಲ್ಲಿ ಶೇ 60ರಷ್ಟು ವಾಣಿಜ್ಯ ವಾಹನಗಳೇ ಡೀಸೆಲ್‌ ಖರೀದಿಸುತ್ತವೆ. 200 ಕಾರುಗಳಿಗಿಂತ, 10 ಲಾರಿಗಳು ಬಂದರೆ ನಮಗೆ ಹೆಚ್ಚಿನ ವಹಿವಾಟು ಆಗುತ್ತದೆ. ಆದರೆ, ಕೇರಳ ಮತ್ತು ಕರ್ನಾಟಕದಲ್ಲಿ ಇರುವ ಬೆಲೆ ವ್ಯತ್ಯಾಸದಿಂದಾಗಿ ನಮ್ಮ ವಹಿವಾಟು ಸಂಪೂರ್ಣ ಕುಸಿದಿದೆ ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ.

ತಲಪಾಡಿ ಗಡಿಯಿಂದ 30 ಕಿ.ಮೀ ದೂರದ ಕಾಸರಗೋಡಿನಲ್ಲಿರುವ ಲಕ್ಷ್ಮಿನಾರಾಯಣ ಅವರ ಪೆಟ್ರೋಲ್ ಬಂಕ್‌ನಲ್ಲಿ ಶೇ 75 ರಷ್ಟು ವಹಿವಾಟು ಕುಸಿದಿದೆ. ತಲಪಾಡಿಯ ಗಡಿಯಲ್ಲಿ ಕೇರಳ ರಾಜ್ಯದಲ್ಲಿರುವ ಬಂಕ್‌ಗಳು ಶೇ 90 ರಷ್ಟು ವಹಿವಾಟು
ಕಳೆದುಕೊಂಡಿವೆ.

ತಲಪಾಡಿಯಲ್ಲಿ ಕೇರಳದ ಗಡಿಗೆ 50 ಮೀಟರ್ ಹತ್ತಿರದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ನಿತ್ಯ ವಾಹನಗಳ ಸರದಿ ಇರುತ್ತದೆ. ಈ ಬಂಕ್‌ನಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಇರುವ ಬೆಲೆಯ ವ್ಯತ್ಯಾಸವನ್ನು ಫಲಕದಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ಈ ಬಂಕ್‌ನಲ್ಲಿ ನಿತ್ಯ 24 ಸಾವಿರ ಲೀಟರ್‌ ಇಂಧನ ಮಾರಾಟ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT