ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲಿಕೆಗೆ ಹೆಚ್ಚಿದ ಒತ್ತಡ: ಕೋಟ ಶ್ರೀನಿವಾಸ ಪೂಜಾರಿ

ಜೂನ್ 7 ರ ನಂತರ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲು ಮನವಿ
Last Updated 3 ಜೂನ್ 2021, 5:57 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ಸರ್ಕಾರ ಜೂನ್‌ 7 ರವರೆಗೆ ಲಾಕ್‌ಡೌನ್‌ ವಿಧಿಸಿದ್ದು, ಇದೀಗ ಕೋವಿಡ್–19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಮನವಿ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಕೆಸಿಸಿಐ, ನಿತ್ಯ 1,500 ಪ್ರಕರಣಗಳಿಂದ ಇದೀಗ 750ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನವೂ ಚುರುಕಾಗಿದ್ದು, 4.3 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಎಲ್ಲ ವಾಣಿಜ್ಯ ಸಂಸ್ಥೆಗಳಲ್ಲಿ ಶೇ 50 ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಅವಕಾಶ ನೀಡಬೇಕು. ಎಲ್ಲ ಕೈಗಾರಿಕೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು. ಸದ್ಯದ ಬ್ಯಾಂಕ್‌ ವಹಿವಾಟು ಅವಧಿ ಅವೈಜ್ಞಾನಿಕ ವಾಗಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ವಹಿವಾಟಿಗೆ ಅವಕಾಶ ಕಲ್ಪಿಸುವ ಮೂಲಕ ಜನರು, ವಾಣಿಜ್ಯೋದ್ಯಮಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದೆ.

ಇದರ ಜೊತೆಗೆ ಸರ್ಕಾರಿ ಕಚೇರಿಗಳ ಸಮಯವನ್ನು ಪರಿಷ್ಕರಿಸಬೇಕು. ಪ್ರಕರಣಗಳ ಸಂಖ್ಯೆ ಇನ್ನೂ ಕಡಿಮೆ ಆಗುವವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಬಹುದು. ಈ ಸಂದರ್ಭದಲ್ಲಿ ನಮ್ಮ ಮನವಿಯನ್ನು ಪರಿಗಣಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಕೋವಿಡ್–19 ನಿಯಂತ್ರಣದಲ್ಲಿ ಸಂಸ್ಥೆಯ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಸ್‌, ಮನವಿಯಲ್ಲಿ ತಿಳಿಸಿದ್ದಾರೆ.

ಆಟೋಮೊಬೈಲ್ ಅಸೋಸಿಯೇಷನ್: ವಾಹನ ವ್ಯಾಪಾರ, ಬಿಡಿಭಾಗಗಳ ವ್ಯಾಪಾರ ಮತ್ತು ಸರ್ವಿಸ್, ವಾಣಿಜ್ಯ ಸಂಸ್ಥೆಗಳು ಮತ್ತು ಎಲ್ಲ ಕೈಗಾರಿಕಾ ಚಟುವಟಿಕೆಗಳಿಗೆ ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ್ ಪೈ, ಕಾರ್ಯದರ್ಶಿ ಕೆ.ವಿಲಾಸ್ ಕುಮಾರ್, ಖಜಾಂಚಿ ಮಾರೂರ್ ಶಶಿಧರ್ ಪೈ, ಕೆಸಿಸಿಐ ಗೌರವ ಕಾರ್ಯದರ್ಶಿ ನಿಸ್ಸಾರ್ ಫಕೀರ್ ಮೊಹಮ್ಮದ್, ಗಣಪತಿ ಪೈ, ಸುಧೀರ್ ಪೈ ಮತ್ತು ಪ್ರಸಾದ್ ರಾಜ್ ಕಾಂಚನ್ ಒಳಗೊಂಡ ನಿಯೋಗವು ಸಚಿವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿತು.

ಮನವಿ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT