ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ನವೋದ್ಯಮ’ಕ್ಕೆ ಯುವಜನರ ನಿರಾಸಕ್ತಿ

Published 29 ಫೆಬ್ರುವರಿ 2024, 6:25 IST
Last Updated 29 ಫೆಬ್ರುವರಿ 2024, 6:25 IST
ಅಕ್ಷರ ಗಾತ್ರ

ಮಂಗಳೂರು: ಕೃಷಿ ವಲಯ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕೃಷಿ ನವೋದ್ಯಮ’ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ!

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್‌ಎಂಇ) ಮಾದರಿಯಲ್ಲಿ ರಾಜ್ಯ ಸರ್ಕಾರವು ಕೃಷಿ ನವೋದ್ಯಮ ಯೋಜನೆಯನ್ನು ಪರಿಚಯಿಸಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಈ ಯೋಜನೆಗೆ ಎರಡು ತಿಂಗಳುಗಳ ಹಿಂದೆ ಮಾರ್ಗಸೂಚಿ ಪ್ರಕಟಗೊಂಡಿವೆ.

‘ಪಿಎಂಎಫ್‌ಎಂಇ ಯೋಜನೆಯಡಿ ಆಹಾರ ಉತ್ಪನ್ನಗಳ ತಯಾರಿಕೆಗೆ ನೆರವು ದೊರೆಯುತ್ತದೆ. ಆದರೆ, ಕೃಷಿ ನವೋದ್ಯಮ ಯೋಜನೆಯಡಿ ಕೃಷಿ ಸಂಬಂಧಿತ ಯಾವುದೇ ಹೊಸ ಉದ್ಯಮ ಆರಂಭಿಸಲು ಅವಕಾಶವಿದೆ. ಕೃಷಿ ಉಪ ಉತ್ಪನ್ನಗಳು, ಕೃಷಿ ಯಂತ್ರೋಪಕರಣ, ಸಾವಯವ ಗೊಬ್ಬರ, ಅಕ್ಕಿ ಸಂಸ್ಕರಣೆ, ಮೀನಿನ ಉಪ ಉತ್ಪನ್ನಗಳು, ಇಂತಹ ಯಾವುದೇ ಉದ್ಯಮ ಆರಂಭಿಸಬಹುದು. ಕೃಷಿ ಪದವೀಧರರು, ಗ್ರಾಮೀಣ ಯುವಜನರನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.

‘ಹೊಸ ಉದ್ಯಮ (ಸ್ಟಾರ್ಟ್‌ಅಪ್‌) ಆರಂಭಿಸುವವರಿಗೆ ₹5 ಲಕ್ಷದಿಂದ ಗರಿಷ್ಠ ₹20 ಲಕ್ಷದವರೆಗೆ ಸಹಾಯಧನ (ಶೇ 50) ದೊರೆಯುತ್ತದೆ. ಈಗಾಗಲೇ ಇರುವ ನವೋದ್ಯಮಗಳ ವಿಸ್ತರಣೆಗೆ ₹20 ಲಕ್ಷದಿಂದ ₹50 ಲಕ್ಷದವರೆಗೆ ಸಹಾಯಧನವನ್ನು ಬ್ಯಾಂಕ್ ಮೂಲಕ ಒದಗಿಸಲಾಗುತ್ತದೆ. ಯೋಜನೆ ಬಗ್ಗೆ ಈಗಾಗಲೇ ರೈತ ಸಂಪರ್ಕ ಕೇಂದ್ರಗಳು, ಕೃಷಿ ತರಬೇತಿ ಕಾರ್ಯಕ್ರಮಗಳು, ಗ್ರಾಮ ಸಭೆಗಳು, ಗ್ರಾಮ ಪಂಚಾಯಿತಿ, ರೈತರ ಗುಂಪುಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಆದರೆ, ಈವರೆಗೆ ಜಿಲ್ಲೆಯಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪಿಎಂಎಫ್‌ಎಂಇ ಯೋಜನೆ ಆರಂಭವಾದಾಗ ಅರ್ಜಿಗಳ ಸಂಖ್ಯೆ ಕಡಿಮೆ ಇದ್ದವು. ನಂತರ ಹಲವಾರು ಮಹಿಳಾ ಗುಂಪುಗಳು ಯೋಜನೆಯ ಪ್ರಯೋಜನ ಪಡೆದು ಬೇಕರಿ ಉತ್ಪನ್ನ, ಎಣ್ಣೆ ಉತ್ಪಾದನೆ, ಕೋರಿ ರೊಟ್ಟಿ ತಯಾರಿಕೆ, ಉಪ್ಪಿನಕಾಯಿ ಮತ್ತಿತರ ಸಣ್ಣ ಉದ್ಯಮಗಳನ್ನು ನಡೆಸುತ್ತಿವೆ. ತಾಂತ್ರಿಕ ಕಾರಣಗಳು, ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಿರುವ ಇನ್ನೂ ಕೆಲವರಿಗೆ ಸಾಲ ಮಂಜೂರು ವಿಳಂಬವಾಗಿದೆ. ಬರುವ ದಿನಗಳಲ್ಲಿ ಕೃಷಿ ನವೋದ್ಯಮಕ್ಕೂ ಹೆಚ್ಚು ಜನರು ಆಸಕ್ತಿ ತೋರಬಹುದೆಂದು ನಿರೀಕ್ಷಿಸಿದ್ದೇವೆ. ಸಹಾಯಧನ ಪಡೆದು ಉದ್ಯಮ ಆರಂಭಿಸಲು ವಿಪುಲ ಅವಕಾಶಗಳು ಇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT