ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯದ ‘ತೀರ’ಗಳ ದಾಟಿದ ಸಾಹಿತ್ಯ ಪ್ರತಿಭೆ ಕೆ.ಟಿ.ಗಟ್ಟಿ

Published 20 ಫೆಬ್ರುವರಿ 2024, 5:01 IST
Last Updated 20 ಫೆಬ್ರುವರಿ 2024, 5:01 IST
ಅಕ್ಷರ ಗಾತ್ರ

ಮಂಗಳೂರು: ಗಡಿನಾಡು ಕಾಸರಗೋಡಿನಲ್ಲಿ ಜನಿಸಿದ ಕೆ.ಟಿ.ಗಟ್ಟಿ ಅವರು ವೈವಿಧ್ಯಮಯ ಸಾಹಿತ್ಯ ಕೃತಿಗಳ ಮೂಲಕ ಜನಮಾನಸಕ್ಕೆ ಮುದ ನೀಡಿದ ಬರಹಗಾರ. ರಾಮದಾಸನಗರದ ಕೂಡ್ಲು ಗ್ರಾಮದಲ್ಲಿ 1938ರ ಜುಲೈ 22 ರಂದು ಜನಿಸಿದ ಗಟ್ಟಿ ಅವರು ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣ ಪಡೆದದ್ದು ಕೇರಳದಲ್ಲೆ.‌

ಕಾಸರಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿ ಮಣಿಪಾಲ ಹಾಗೂ ಉಡುಪಿಯಲ್ಲಿ ಅಧ್ಯಾಪಕರಾಗಿದ್ದರು. ನಂತರ ಇಥಿಯೋಪಿಯಾದಲ್ಲಿ ಅಧ್ಯಾಪನ. ಅಲ್ಲಿಂದ ಮರಳಿದ ನಂತರ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಬಳಿ ‘ವನಸಿರಿ’ಯಲ್ಲಿ ನೆಲೆ, ಕೊನೆಯ ಕಾಲ ಕಳೆದದ್ದು ಮಂಗಳೂರು ನಗರದ ಬಿಜೈಯಲ್ಲಿ.

ಕೆ.ಟಿ. ಗಟ್ಟಿ ಅವರ ತಂದೆ ಧೂಮಪ್ಪ ಗಟ್ಟಿ, ತಾಯಿ ಪರಮೇಶ್ವರಿ. ಧೂಮಪ್ಪ ಅವರು ಯಕ್ಷಗಾನ ಪ್ರಿಯರಾಗಿದ್ದರು. ಯಕ್ಷಗಾನ ಮೇಳದೊಂದಿಗೆ ಒಡನಾಟ ಇದ್ದ ಅವರು ಪರ ಊರಿಗೆ ಹೋಗಿದ್ದಾಗ ಪುಸ್ತಕಗಳನ್ನು ಮನೆಗೆ ತರುತ್ತಿದ್ದರು. ಇದರಿಂದ ಕೆ.ಟಿ.ಗಟ್ಟಿ ಅವರಿಗೆ ಓದುವ ಪ್ರೇರಣೆ ಉಂಟಾಯಿತು. ತಾಯಿ ಹಾಡುತ್ತಿದ್ದ ಪಾಡ್ದನಗಳು ಅವರಲ್ಲಿ ಸಾಹಿತ್ಯ ಒಲವು ಮೂಡಿಸಿದವು. 1957ರಲ್ಲಿ ಸಾಹಿತ್ಯ ಕೃಷಿ ಆರಂಭವಾಯಿತು. ಅವರ ಒಟ್ಟು 40ಕ್ಕೂ ಹೆಚ್ಚು ಕಾದಂಬರಿಗಳ ಪೈಕಿ 14 ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ.

ಅಂತಿಮ ನಮನ:

ಕೆ.ಟಿ.ಗಟ್ಟಿ ಅವರಿಗೆ ಸಾಹಿತಿಗಳಾದ ಪ್ರೊ.ಬಿ.ಎ.ವಿವೇಕ್ ರೈ, ಪ್ರೊ.ಕೆ.ಚಿನ್ನಪ್ಪ ಗೌಡ, ಬಿ.ಎಂ.ರೋಹಿಣಿ, ಮೀನಾಕ್ಷಿ ರಾಮಚಂದ್ರ, ನಿವೃತ್ತ ಪ್ರಾಧ್ಯಾಪಕರಾದ ಶಿವರಾಮ ಶೆಟ್ಟಿ, ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್‌, ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಚಿಂತಕರಾದ ನರೇಂದ್ರ ನಾಯಕ್‌, ಗೋಪಾಡ್ಕರ್, ಪ್ರಕಾಶಕ ನಾಗೇಶ್ ಕಲ್ಲೂರು ಮತ್ತಿತರರು ಅಂತಿಮ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಬಿ.ಎ.ವಿವೇಕ ರೈ, ‘ಜನಪ್ರಿಯ ಸಾಹಿತ್ಯಕ್ಕೆ ಹೊಸ ಅರ್ಥ ಕೊಟ್ಟವರು ಕೆ.ಟಿ.ಗಟ್ಟಿ. ಅವರ ವಿಚಾರಗಳು ಸ್ಪಷ್ಟ. ಬದುಕಿದಂತೆ ಬರೆದ ಅವರ ಮಾತಿನಲ್ಲಿ ತೋರಿಕೆ ಇರಲಿಲ್ಲ. ಇಂಗ್ಲಿಷ್‌ ಪ್ರೇಮಗೀತೆಗಳನ್ನು ತುಳುವಿಗೆ ಅನುವಾದ ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ಕೆ.ಟಿ.ಗಟ್ಟಿ ಅವರ ಸಾಹಿತ್ಯದಲ್ಲಿ ಜನಪ್ರಿಯತೆಯೂ ಇತ್ತು, ಮೌಲಿಕವೂ ಆಗಿರುತ್ತಿತ್ತು. ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದ ಅವರು ಸಮಕಾಲೀನ ಅಗತ್ಯಗಳಿಗೆ ತಕ್ಕ ಹಾಗೆ ಗಂಭೀರ ಚಿಂತನೆ ಮಾಡಿದ ವ್ಯಕ್ತಿ’ ಪ್ರೊ.ಚಿನ್ನಪ್ಪಗೌಡ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT