ಮಂಗಳೂರು: ಕುಡ್ಲ ತುಳುಕೂಟದ ಅಧ್ಯಕ್ಷರಾಗಿ ಹಾಗೂ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ದಾಮೋದರ ನಿಸರ್ಗ (75) ಅವರು ಅನಾರೋಗ್ಯದಿಂದಾಗಿ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು.
ಯಕ್ಷಗಾನ ಕ್ಷೇತ್ರದ ದಿಗ್ಗಜ ದಿ.ದೋಗ್ರ ಪೂಜಾರಿ–ಚಂದ್ರಾವತಿ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ್ದ ದಾಮೋದರ ನಿಸರ್ ಅವರು ಹೆಸರಾಂತ ಚಲನಚಿತ್ರ ನಿರ್ದೇಶಕ ದಿ.ವಿಶುಕುಮಾರ್ ಅವರ ಸೋದರ.
ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಮೋಕ್ತಸರರಾಗಿ ಅವರು ಸೇವೆ ಸಲ್ಲಿಸಿದ್ದರು. ಕಂಕನಾಡಿ ಬಿಲ್ಲವ ಸೇವಾ ಸಮಾಜ ಸಂಘ ಹಾಗೂ ದೋಗ್ರ ಪೂಜಾರಿ ಯಕ್ಷಗಾನ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿದ್ದರು. ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಅಖಿಲ ಭಾರತ ತುಳು ಒಕ್ಕೂಟದ ಕಾರ್ಯಾಧ್ಯಕ್ಷರಾಗಿದ್ದ ಅವರು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ಹೋರಾಟದಲ್ಲಿ ಕೈಜೋಡಿಸಿದ್ದರು. ಪುರಭವನದಲ್ಲಿ ಒಕ್ಕೂಟದ ವತಿಯಿಂದ ಈಚೆಗೆ ಏರ್ಪಡಿಸಿದ್ದ ತುಳು ಜನಪದ ಉತ್ಸವದಲ್ಲಿ ಭಾಗವಹಿಸಿದ್ದರು. ಇದು ಅವರು ಪಾಲ್ಗೊಂಡ ಕೊನೆಯ ಸಾರ್ವಜನಿಕ ಕಾರ್ಯಕ್ರಮ.
ಯಕ್ಷಗಾನ ಕ್ಷೇತ್ರದ ಸಾಧಕರನ್ನು ಗುರುತಿಸಿ ತಮ್ಮ ತಂದೆ ಬೋಳೂರು ದೋಗ್ರ ಪೂಜಾರಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದ್ದರು.
ಅವರಿಗೆ ಮಡದಿ ಹೇಮಾ ನಿಸರ್ಗ, ಮಗಳು ಡಾ.ವಿನ್ಯಾಸ ನಿಸರ್ಗ, ಅಳಿಯ ಡಾ. ವಿನಯ್ ಜತ್ತನ್ ಮತ್ತು ಮಗ ತ್ರಿದೇವ್ ನಿಸರ್ಗ ಇದ್ದಾರೆ.