ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವಿಧಾರಿಗಳ ಎದುರು ನ್ಯಾಯಾಧೀಶರೂ ಮಂಡಿಯೂರುತ್ತಿದ್ದಾರೆ’

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಾಧೀಶರೂ ಕಾವಿಧಾರಿಗಳ ಮುಂದೆ ಮಂಡಿಯೂರುತ್ತಿದ್ದಾರೆ. ಆದ್ದರಿಂದಲೇ ಸ್ವಾಮೀಜಿಗಳು ಹೆಚ್ಚು ಪ್ರಭಾವಿಗಳಾಗುತ್ತಿದ್ದಾರೆ’ ಎಂದು ಲೇಖಕಿ ವಿಜಯಾ ಬೇಸರ ವ್ಯಕ್ತಪಡಿಸಿದರು.

ಜನವಾದಿ ಮಹಿಳಾ ಸಂಘಟನೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಮತದಾರರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಖಾಕಿ ಮತ್ತು ಕಾವಿಯಿಂದ ಒಳಿತಾಗುವ ಕಾಲ ಮುಗಿದಿದೆ. ನಮ್ಮ ಧರ್ಮ, ಸಂಸ್ಕೃತಿಗಳೆಲ್ಲವೂ ಹೈಜಾಕ್‌ ಆಗಿವೆ. ಕಮಲ ಇಟ್ಟುಕೊಂಡರೆ, ಕೇಸರಿ ಬಟ್ಟೆ ಧರಿಸಿದರೆ, ಸ್ವಾಮಿ ವಿವೇಕಾನಂದರ ಬಗ್ಗೆ ಮಾತನಾಡಿದರೆ ಬಿಜೆಪಿಯೊಂದಿಗೆ ನಂಟುಹಾಕುತ್ತಾರೆ. ಅವೆಲ್ಲವೂ ನಮ್ಮದು. ಅವುಗಳನ್ನು ವಾಪಸ್‌ ಪಡೆಯಬೇಕಿದೆ’ ಎಂದರು.

ಒಂದು ಪಕ್ಷಕ್ಕೆ ಬಹುಮತ ನೀಡುವುದು ಒಳಿತು ಎನ್ನುತ್ತಾರೆ. ಆದರೆ, ಹೀಗೆ ಆರಿಸಿ ಬಂದವರಿಂದ ರಕ್ಷಣೆ ಸಿಗುತ್ತದೆಯೇ ಎನ್ನುವುದು ಪ್ರಶ್ನೆ. ಆಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ ಈ ಪ್ರಶ್ನೆ ಕಾಡಲು ಪ್ರಾರಂಭವಾಗುತ್ತದೆ. ಎಲ್ಲರೂ ಕಳ್ಳರೇ, ಕಡಿಮೆ ಆತಂಕಕಾರಿ ಕಳ್ಳನನ್ನು ಚುನಾಯಿಸಬೇಕಾದ ಸ್ಥಿತಿ ನಮ್ಮೆದುರಿಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಜಯಲಕ್ಷ್ಮಿ, ‘ಬಿಜೆಪಿಯ ರಾಜಕಾರಣ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ. ಆದರೆ, ಕೇವಲ ರಾಜಕೀಯ ಮಾಡುವವರಿಗಿಂತ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರು ಹೆಚ್ಚು ಅಪಾಯಕಾರಿ. ಒಡೆದು ಆಳುವ ಬಿಜೆಪಿಯ ಬಗ್ಗೆ ಎಚ್ಚರವಹಿಸಿ’ ಎಂದು ಹೇಳಿದರು.

ನಟ ‍ಪ್ರಕಾಶ್‌ ರೈ, ‘ಇಲ್ಲಿಯವರೆಗೆ ಯಾವ ಸರ್ಕಾರವೂ ಜನಪರ ಕೆಲಸ ಮಾಡಿಲ್ಲ. ಅವುಗಳು ರೂಪಿಸುವ ನೀತಿ ಭಿಕ್ಷೆ ರೀತಿಯಲ್ಲಿರುತ್ತವೆ. ಎಲ್ಲವೂ ವೋಟ್‌ ಬ್ಯಾಂಕ್‌ ರಾಜಕೀಯದ ರೀತಿಯಲ್ಲಿಯೇ ನಡೆಯುತ್ತದೆ. ಎಂದರು.

ಬೇಡಿಕೆಗಳು

* ಮಹಿಳೆಯರು ಘನತೆಯಿಂದ ಬದುಕುವಂತಹ ವಾತಾವರಣ ಕಲ್ಪಿಸಬೇಕು

* ವಿಧಾನಸಭೆಯಲ್ಲೂ ಶೇ 33ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಬೇಕು

* ಆಹಾರ ಭದ್ರತೆ ಯೋಜನೆ ಜಾರಿಗೊಳಿಸಬೇಕು

* ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು

* ಮಹಿಳೆಯರಿಗೂ ₹ 18 ಸಾವಿರ ಕನಿಷ್ಠ ವೇತನ ನೀಡಬೇಕು

* ರೈತ ಮತ್ತು ಕೃಷಿ ಕೂಲಿಕಾರ ಮಹಿಳೆಯರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಯಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT