₹ 300 ಕೋಟಿಯ ಯೋಜನೆ ಸಿದ್ಧ; ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಚರ್ಚೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್‌ನಂತೆ ಮೂರನೇ ಹಂತದಲ್ಲಿ ಸುಮಾರು ₹ 300 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವ ಬಗ್ಗೆ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಚರ್ಚಿಸಲಾಯಿತು. ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಉಪಸ್ಥಿತರಿದ್ದರು.
ಮಾಸ್ಟರ್ ಪ್ಲಾನ್‌ನ ಮೂರನೇ ಹಂತದ ಕಾಮಗಾರಿಯಲ್ಲಿ ಕುಕ್ಕೆ ದೇವಳದ ರಥಬೀದಿ ಇಕ್ಕಲಗಳಲ್ಲಿ ಮೂಲ ಅವಶ್ಯಕತೆಗಳಿಗೆ ಅನುಸಾರವಾಗಿ ಸೇವಾ ಕೌಂಟರ್, ವಿಶ್ರಾಂತಿ ಗೃಹಗಳು, ಹಣ್ಣು ಕಾಯಿ ಮತ್ತು ಬೆಳ್ಳಿ ಅಂಗಡಿ, ಮಾಹಿತಿ ಕೇಂದ್ರ, ವಸ್ತು ಸಂಗ್ರಾಹಲಯ, ಭದ್ರತಾ ಕೋಣೆ, ಪಾರಂಪರಿಕ ಶೈಲಿಯ ಕಟ್ಟಡಗಳ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಮಾಹಿತಿ ಸಂಗ್ರಹಿಸಲಾಯಿತು.
ಆಶ್ಲೇಷ ಬಲಿ ಪೂಜಾ ಮಂದಿರವನ್ನು ದೇವಸ್ಥಾನದ ಉತ್ತರ ಭಾಗದಲ್ಲಿ ಮಾಡಲು ಸಲಹೆ ವ್ಯಕ್ತವಾಯಿತು. ಹೊರ ಗೋಪುರವನ್ನು ವಿಸ್ತರಿಸಿ, ವಾಸ್ತು ಪ್ರಕಾರ ಕಟ್ಟಡ ನಿರ್ಮಿಸಬೇಕು ಎಂಬ ಚರ್ಚೆ ನಡೆಯಿತು. ದೇವಳದ ವಾಯವ್ಯ ದಿಕ್ಕಿನಲ್ಲಿ ಮೂರು ಸಾವಿರ ಮಂದಿ ಭೋಜನ ಸ್ವೀಕರಿಸಲು ಸಾಧ್ಯ ವಾಗುವಂತಹ ಸುಸಜ್ಜಿತ 3 ಹಂತಸ್ತಿನ ದಾಸೋಹ ಭವನ ನಿರ್ಮಾಣ, ಈ ಭವನವನ್ನು ಕರಾವಳಿಯ ಪಾರಂಪರಿಕ ಕಲ್ಪನೆಯ ಶೈಲಿಯಲ್ಲಿ ಕಟ್ಟಡವು ವಿನ್ಯಾಸದಲ್ಲಿ ನಿರ್ಮಿಸುವ ಕುರಿತು ಸಮಾಲೋಚನೆ ನಡೆಯಿತು.
ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಎಂಬಲ್ಲಿ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು ಒಂದು ಸಾವಿರ ಜನ ಕುಳಿತುಕೊಳ್ಳುವ ಸಭಾಭವನ ನಿರ್ಮಾಣ ಹಾಗೂ ಪಾರ್ಕಿಂಗ್, ಶೌಚಾಲಯ, ತುರ್ತು ವೈದ್ಯಕೀಯ ಸೇವೆ, ಇನ್ನಿತರ ವಸತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕುಮಾರಧಾರ ಸ್ನಾನಘಟ್ಟದಲ್ಲಿ ಭಕ್ತರು ಸುರಕ್ಷಿತವಾಗಿ ತೀರ್ಥಸ್ನಾನ ಕೈಗೊಳ್ಳಲು ವೈಜ್ಞಾನಿಕವಾದ ಸ್ನಾನಘಟ್ಟ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಇಡೀ ಸುಬ್ರಹ್ಮಣ್ಯಕ್ಕೆ ಬೇಕಾಗುವಂತಹ ಪವರ್ ಸ್ಟೇಷನ್ ನಿರ್ಮಿಸಲು ಸಿಎಂ ಬಳಿ ಶಾಸಕರ ಜತೆ ತೆರಳಿ ಮನವಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಧಾರ್ಮಿಕ ದತ್ತಿ ಇಲಾಖಾ ಆಯುಕ್ತೆ ರೋಹಿಣಿ ಸಿಂಧೂರಿ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ರಾಜ್ಯ ಪರಿಷತ್ ಸದಸ್ಯ ಗೋವಿಂದ ಭಟ್, ಎಸಿಎಫ್ ಕಾರ್ಯಪ್ಪ, ಧಾರ್ಮಿಕ ದತ್ತಿ ಇಲಾಖೆಯ ಅಭಿಜಿನ್, ಉದಯ ಕುಮಾರ್, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಜಯಪ್ರಕಾಶ್, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.