ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮವು ಕೇಂದ್ರ ಪ್ರವಾಸೋದ್ಯಮ ಇಲಾಖೆ ನಡೆಸುವ ‘ಶ್ರೇಷ್ಠ ಪ್ರವಾಸಿ ಗ್ರಾಮ’ ಸ್ಪರ್ಧೆಯ 2024ನೇ ಆವೃತ್ತಿಯಲ್ಲಿ ‘ಸಾಹಸ ಪ್ರವಾಸೋದ್ಯಮ’ ವಿಭಾಗದಲ್ಲಿ ಆಯ್ಕೆಯಾಗಿದೆ.
‘ಕುತ್ಲೂರು ಗ್ರಾಮದ ಕುರಿತ ದಾಖಲೆಗಳನ್ನು ಸಲ್ಲಿಸಿರುವ ಇಬ್ಬರು ಗ್ರಾಮಸ್ಥರಿಗೆ, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಇಲಾಖೆಯು ಇದೇ 27ರಂದು ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಪ್ರಮಾಣಪತ್ರವನ್ನೂ ಹಸ್ತಾಂತರಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆಯು 2024ರ ಫೆಬ್ರುವರಿಯಲ್ಲಿ ಈ ಸ್ಪರ್ಧೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ಕುತ್ಲೂರು ಗ್ರಾಮದ ಹರೀಶ್ ಡಾಕಯ್ಯ, ಸಂದೀಪ್ ಪೂಜಾರಿ ಹಾಗೂ ಶಿವರಾಜ್ ಎಂಬುವರು ತಮ್ಮ ಗ್ರಾಮದ ಕುರಿತ ವಿವರಗಳನ್ನು ಸಲ್ಲಿಸಿದ್ದರು.
‘ಕೇಂದ್ರ ಸರ್ಕಾರವು ಎರಡು ವರ್ಷಗಳಿಂದ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕಳೆದ ವರ್ಷವೂ ಈ ಸ್ಪರ್ಧೆಗೆ ನಮ್ಮ ಗ್ರಾಮದ ವಿವರಗಳನ್ನು ಸಲ್ಲಿಸಿದ್ದೆವು. ನಮ್ಮ ಗ್ರಾಮವು ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ರಾಜ್ಯದಿಂದ ಆಯ್ಕೆಯಾಗಿತ್ತು. ಆದರೆ ‘ಶ್ರೇಷ್ಠ ಪ್ರವಾಸಿ ಗ್ರಾಮ’ ಮನ್ನಣೆ ಪಡೆಯುವ ಅವಕಾಶ ಸ್ವಲ್ಪದರಲ್ಲಿ ಕೈತಪ್ಪಿತ್ತು. ಸ್ಪರ್ಧೆಯ ಮಾನದಂಡಗಳಿಗೆ ಪೂರಕವಾದ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿ ಈ ಸಲವೂ ಆನ್‌ಲೈನ್‌ನಲ್ಲಿ ವಿವರಗಳನ್ನು ಸಲ್ಲಿಸಿದ್ದೆವು. ನಮ್ಮ ಗ್ರಾಮದ ಪ್ರವಾಸೋದ್ಯಮ ಅವಕಾಶಗಳನ್ನು ಆನ್‌ಲೈನ್‌ನಲ್ಲಿ ಪ್ರಸ್ತುತಿ ಪಡಿಸಲು ಇಲಾಖೆ ಜೂನ್ ತಿಂಗಳಲ್ಲಿ ಅವಕಾಶ ನೀಡಿತ್ತು’ ಎಂದು ಕುತ್ಲೂರಿನ ಹರೀಶ್ ಡಾಕಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಳಚಿ, ಒಳ್ಳೆಯ ಕಾರಣಕ್ಕೆ ನಮ್ಮೂರು ಹೆಸರುವಾಸಿಯಾಗಬೇಕು ಎಂಬುದು ನಮ್ಮ ಆಶಯ. ಅದು ಈಗ ಈಡೇರುತ್ತಿದೆ. ಪಶ್ವಿಮ ಘಟ್ಟದ ತಪ್ಪಲಿನಲ್ಲಿರುವ ನಮ್ಮೂರಿನಲ್ಲಿ ರುದ್ರರಮಣೀಯ ಪರ್ವತ ಶ್ರೇಣಿಗಳಿವೆ, ಅರ್ಬಿ ಜಲಪಾತವಿದೆ. ಚಾರಣಕ್ಕೆ ಹೇಳಿ ಮಾಡಿಸಿದ ಅನೇಕ ತಾಣಗಳಿವೆ. ನಮ್ಮ ಊರೂ ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯ’ ಎಂದು ಅವರು ತಿಳಿಸಿದರು.
ಗ್ರಾಮಸ್ಥರಾದ ಹರೀಶ್ ಡಾಕಯ್ಯ, ಶಿವರಾಜ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಇಬ್ಬರು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.