ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡ್ಲದಕೋಡಿಯಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ

Published 2 ಆಗಸ್ಟ್ 2024, 14:13 IST
Last Updated 2 ಆಗಸ್ಟ್ 2024, 14:13 IST
ಅಕ್ಷರ ಗಾತ್ರ

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿ ಎಂಬಲ್ಲಿ ಗುಡ್ಡವೊಂದು ಕುಸಿದು ಮನೆ ಮೇಲೆ ಅಪ್ಪಳಿಸಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಒಂದು ಆಮ್ನಿ ಕಾರು, ದ್ವಿಚಕ್ರ ವಾಹನ ಹಾಗೂ ಸಾಕು ನಾಯಿ ಮಣ್ಣಿನಡಿ ಸಿಲುಕಿದೆ. ಗುಡ್ಡದ ಮಣ್ಣು ತೋಡಿಗೂ ಬಿದ್ದಿದ್ದು, ತೋಟದಲ್ಲಿ ತೋಡಿನ ನೀರು ನದಿಯಂತೆ ಹರಿಯುತ್ತಿದೆ.

ಶುಕ್ರವಾರ ನಸುಕಿನ 4.15ರ ಸುಮಾರಿಗೆ ಇಲ್ಲಿನ ವಿಶ್ವನಾಥ ನಾಯ್ಕ ಎಂಬುವರ ಮನೆಯ ಬದಿಯ ಗುಡ್ಡ ಕುಸಿದಿದೆ. ಈ ಸಂದರ್ಭ ಮನೆಯಲ್ಲಿ ವಿಶ್ವನಾಥ ನಾಯ್ಕ, ಅವರ ವೃದ್ಧ ತಾಯಿ ಲಲಿತಾ, ಪತ್ನಿ ವಾರಿಜಾ ಹಾಗೂ ಇಬ್ಬರು ಪುಟ್ಟ ಮಕ್ಕಳು ಗಾಢ ನಿದ್ದೆಯಲ್ಲಿದ್ದರು. ಭಾರಿ ಶಬ್ದ ಕೇಳಿ ಮನೆ ಮಂದಿ ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬದಿಯ ಗುಡ್ಡ ಕುಸಿದು ಮನೆಗೆ ತಾಗಿ ನಿಂತಿತ್ತು. ಇದರಿಂದ ಮನೆಯ ಒಂದು ಬದಿಯಲ್ಲಿ ಶೀಟ್ ಹಾಕಿ ಕಟ್ಟಿದ್ದ ಕೋಣೆ ಸಂಪೂರ್ಣ ನಾಶವಾಗಿದ್ದು, ಮನೆಯ ಇತರ ಗೋಡೆಗಳೂ ಬಿರುಕು ಬಿಟ್ಟಿದ್ದವು.

ಮಣ್ಣು ಬಿದ್ದು ಅವರ ಮನೆಯ ಕೆಳಗೆ ಹರಿಯುತ್ತಿದ್ದ ತೋಡು ನೀರಿನ ಹರಿವಿನ ದಿಕ್ಕು ಬದಲಿಸಿದ್ದು, ತೋಟದೆಲ್ಲೆಡೆ ನದಿಯಂತೆ ಹರಿಯುತ್ತಿದೆ. ಇದರಿಂದ ಮನೆಗೆ ಹೋಗುವ ದಾರಿಯೂ ನೀರಿನಿಂದಾ ಆವೃತವಾಗಿದೆ. ವಿದ್ಯುತ್ ಕಂಬಗಳು ಮಗುಚಿ ಬಿದ್ದಿವೆ.

34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಎನ್., ಹರೀಶ್ ಕುಲಾಲ್ ಅಲ್ಲಿಗೆ ಧಾವಿಸಿದ್ದು, ಸ್ಥಳೀಯರಾದ ಗುರುರಾಜ ಭಟ್, ಧನಂಜಯ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು. ತೋಟದಲ್ಲಿ ಎದೆಯೆತ್ತರದ ವರೆಗೆ ನೀರಿದ್ದು, ಆ ನೀರಿನಲ್ಲಿಯೇ ವೃದ್ಧೆ ಲಲಿತಾ ಅವರನ್ನು ಎತ್ತಿಕೊಂಡು ಬಂದು ಸುರಕ್ಷಿತ ಜಾಗಕ್ಕೆ ಕಳುಹಿಸಿಕೊಡಲಾಯಿತು. ಬಳಿಕ ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದವರು ದೋಣಿಯೊಂದಿಗೆ ಸ್ಥಳಕ್ಕೆ ತೆರಳಿ, ಮನೆಯ ಸಾಮಗ್ರಿ ಹಾಗೂ ಮನೆಯಲ್ಲಿದ್ದ ಅಡಿಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಣಿಯ ಮೂಲಕ ಸುರಕ್ಷಿತ ಜಾಗಕ್ಕೆ ತಲುಪಿಸಿದರು. ಅವರ ಸಾಕು ನಾಯಿಯೊಂದು ಮಣ್ಣಿನ ಅಡಿಯೊಳಗೆ ಸೇರಿ ಹೋಗಿದ್ದು, ಪತ್ತೆಯಾಗಿಲ್ಲ.

ಸ್ಥಳಕ್ಕೆ ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಗ್ರಾಮ ಕರಣಿಕ ಜಂಗಪ್ಪ, ಗ್ರಾಮ ಸಹಾಯಕ ದಿವಾಕರ, ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಕೆ.ಬಂಗೇರ, ಅಧ್ಯಕ್ಷೆ ಸುಜಾತಾ ಆರ್.ರೈ, ಉಪಾಧ್ಯಕ್ಷ ಹರೀಶ್ ಡಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಕಾಂಗ್ರೆಸ್ ಮುಖಂಡರಾದ ಜಯಶೀಲ ಶೆಟ್ಟಿ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT