ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಚಿರತೆ ಹಾವಳಿ: 7 ಬೋನು ಅಳವಡಿಕೆ

Last Updated 14 ನವೆಂಬರ್ 2021, 16:34 IST
ಅಕ್ಷರ ಗಾತ್ರ

ಮಂಗಳೂರು: ‘ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ನಿಲ್ದಾಣದ ಹೊರಗಡೆ 4 ಬೋನುಗಳನ್ನು ಇಡಲಾಗಿದೆ’ ಎಂದು ಮಂಗಳೂರು ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ ತಿಳಿಸಿದ್ದಾರೆ.

‘ಶುಕ್ರವಾರ ಚಿರತೆಯೊಂದು ರನ್‌ವೇಯಿಂದ ಹೊರ ಬರುವುದನ್ನು ಸ್ಥಳೀಯರು ಗಮನಿಸಿದ್ದರು. ಶನಿವಾರ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲಿಸಿದ್ದೇವೆ. ನಿಲ್ದಾಣದ ಹೊರ ಬರುವ ಚರಂಡಿ ಪೈಪ್‌ಗಳಿಗೆ ಮೆಷ್‌ ಅಳವಡಿಸು
ವುದು ಸೇರಿದಂತೆ ಏರ್‌ಪೋರ್ಟ್‌ ಗೋಡೆಗೆ ಹೊಂದಿಕೊಂಡಿರುವ ಮರ, ಪೊದೆಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಸೋಮವಾರ ಈ ಕುರಿತು ವರದಿಯನ್ನು ನೀಡುತ್ತೇವೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಬಜ್ಪೆ ಸುತ್ತಮುತ್ತ ಕಾಡು ಪ್ರದೇಶವಾಗಿರುವುದರಿಂದ ನಾಯಿಗಳು ನಾಪತ್ತೆಯಾಗುವ ಬಗ್ಗೆ ವಾರಕ್ಕೆ ಮೂರ್ನಾಲ್ಕು ದೂರುಗಳು ಬರುತ್ತಲೇ ಇವೆ. ಹೀಗಾಗಿ, ಈ ಹಿಂದೆಯೇ ಎರಡು ಬೋನುಗಳನ್ನು ಇಟ್ಟಿದ್ದೆವು. ಆದರೆ, ಚಿರತೆ ಪತ್ತೆಯಾಗಿರಲಿಲ್ಲ. ಅವುಗಳ ಸುಳಿವು ಕೂಡಾ ಸಿಕ್ಕಿರಲಿಲ್ಲ. ವಿಮಾನ ನಿಲ್ದಾಣದ ರನ್‌ವೇ ಪ್ರದೇಶ ನಿರ್ಜನವಾಗಿರುವುದರಿಂದ ಅಲ್ಲಿಯೇ ಚಿರತೆಗಳು ಅವಿತಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ವಿಮಾನ ನಿಲ್ದಾಣದ ಆವರಣದ ಒಳಗಡೆ ಮೂರು ಬೋನುಗಳನ್ನು ಇಡಲಾಗಿದೆ’ ಎಂದು ಹೇಳಿದ್ದಾರೆ.

ಕುಂಪಲದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ!

ಉಳ್ಳಾಲ: ಸೋಮೇಶ್ವರದ ಕುಂಪಲ, ಪಿಲಾರು ಪ್ರದೇಶದಲ್ಲಿ ಚಿರತೆ ಸಂಚಾರವನ್ನು ಶನಿವಾರ ಸಂಜೆ ಮತ್ತೊಬ್ಬರು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಕಟ್ಟಡ ಗುತ್ತಿಗೆದಾರ ಜಯಂತ್ ಕೊಂಡಾಣ ಎಂಬುವರು ಕುಂಪಲ ಸರಳಾಯ ಕಾಲೊನಿ ರಸ್ತೆಯಾಗಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ಚಿರತೆ ಮರಿಯೊಂದು ಪೊದೆಯಿಂದ ಜಿಗಿದು ರಸ್ತೆ ದಾಟಿದೆ. ಬೆದರಿದ ಜಯಂತ್‌ ಅವರು ಸ್ಕೂಟರ್‌ನಿಂದ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅವರೇ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕುಂಪಲ ಸರಳಾಯ ಕಾಲೊನಿ ಮತ್ತು‌ ಪಿಲಾರು ಪಲ್ಲ ಪರಿಸರದಲ್ಲಿ ಕೆಲ ದಿ‌ನಗಳ ಹಿಂದೆ ಚಿರತೆ ಪ್ರತ್ಯಕ್ಷ ಆಗಿರುವುದನ್ನು ಶಿವರಾಜ್ ಪೊನ್ನು ಸ್ವಾಮಿ ಮತ್ತು ಮೌರಿಷ್ ಡಿಸೋಜ ಹೇಳಿದ್ದರು. ನ. 4ರಂದು ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಚಿರತೆಯ ಸುಳಿವು ಸಿಕ್ಕಿರಲಿಲ್ಲ.ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಕೋಟೆಕಾರು ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಹಾಬಲ ಮತ್ತು ಕೊಣಾಜೆ ಬೀಟ್ ಫಾರೆಸ್ಟ್ ಗಾರ್ಡ್ ಸವಿತಾ ಗಟ್ಟಿ ಅವರು ಭಾನುವಾರ ಕುಂಪಲ ಸರಳಾಯ ಕಾಲೊನಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ‘ಚಿರತೆ ಪತ್ತೆಯಾಗಿರುವ ಬಗ್ಗೆ ಜನರಿಂದ ದೂರು ಬಂದಿದೆ. ಅದು ಚಿರತೆಯೋ ಅಥವಾ ಬೇರೆ ಪ್ರಾಣಿಯೇ ಎಂಬ ಸ್ಪಷ್ಟತೆ ಇಲ್ಲ. ಸೋಮವಾರ ಬೋನು ಇಟ್ಟು ಅದನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗುವುದು’ ಎಂದು ಉಪ ವಲಯ ಅರಣ್ಯಾಧಿಕಾರಿ ಮಹಾಬಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT