ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ: ₹ 7.12 ಕೋಟಿ ಮೊತ್ತದ ಮದ್ಯ ಬಿಕರಿ

ಜಿಲ್ಲೆಯ ಎಲ್ಲೆಡೆ ಮದ್ಯದಂಗಡಿಗಳಲ್ಲಿ ಭಾರಿ ವಹಿವಾಟು
Last Updated 4 ಮೇ 2020, 16:19 IST
ಅಕ್ಷರ ಗಾತ್ರ

ಮಂಗಳೂರು: 41 ದಿನಗಳ ಬಿಡುವಿನ ಬಳಿಕ ಸೋಮವಾರ ಬೆಳಿಗ್ಗೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಆರಂಭವಾಯಿತು. ಮೊದಲ ದಿನವೇ 1.09 ಲಕ್ಷ ಲೀಟರ್‌ ಮದ್ಯ ಬಿಕರಿಯಾಗಿದ್ದು, ₹ 7.12 ಕೋಟಿ ಮೊತ್ತದ ವಹಿವಾಟು ನಡೆದಿದೆ.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 1,09,334 ಲೀಟರ್‌ ಮದ್ಯ ಮಾರಾಟವಾಗಿದೆ. ಈ ಪೈಕಿ 65,751 ಲೀಟರ್‌ ಭಾರತೀಯ ಉತ್ಪಾದಿತ ಮದ್ಯಮ (ಐಎಂಎಲ್‌) ಮತ್ತು 43,583 ಲೀಟರ್‌ ಬಿಯರ್‌. ಒಟ್ಟು ₹ 7.12 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಶೈಲಜಾ ಎ. ಕೋಟೆ ತಿಳಿಸಿದರು.

ಕೊರೊನಾ ವೈರಸ್‌ ಸೋಂಕು ತಡೆಗಾಗಿ ಮಾರ್ಚ್‌ 24ರಂದು ಲಾಕ್‌ಡೌನ್‌ ಜಾರಿ ಮಾಡಲಾಗಿತ್ತು. ಅಂದಿನಿಂದಲೇ ಮದ್ಯ ಮಾರಾಟ ಸಂಪೂರ್ಣ ಬಂದ್‌ ಆಗಿತ್ತು. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಸೋಮವಾರ ದಿಂದಲೇ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸರು, ಅಬಕಾರಿ ಅಧಿಕಾರಿಗಳ ಬಿಗಿ ಕಣ್ಗಾವಲಿನ ನಡುವೆಯೇ ಸಾಗರದೋಪಾದಿಯಲ್ಲಿ ಮದ್ಯದಂಗಡಿಗಳತ್ತ ಹರಿದುಬಂದ ಜನರು, ತಮ್ಮ ಆಯ್ಕೆಯ ಮದ್ಯದ ಬಾಟಲಿಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.

ಸಿಎಲ್‌–2 (ವೈನ್‌ಶಾಪ್‌, ಎಂಆರ್‌ಪಿ ಔಟ್‌ಲೆಟ್‌) ಮತ್ತು ಸಿಎಲ್‌–11ಸಿ (ಎಂಎಸ್‌ಐಎಲ್‌ ಚಿಲ್ಲರೆ ಮದ್ಯ ಮಾರಾಟ ಮಳಿಗೆ) ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 152 ಸಿಎಲ್‌–2 ಮತ್ತು 22 ಸಿಎಲ್‌–11ಸಿ ಮದ್ಯದಂಗಡಿಗಳಿಗೆ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ನಿರ್ಬಂಧಿತ ವಲಯದಲ್ಲಿರುವ ಒಂದು ಮತ್ತು ಮಾಲ್‌ನಲ್ಲಿರುವ ಒಂದು ಮಳಿಗೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. 172 ಮದ್ಯದಂಗಡಿಗಳಲ್ಲಿ ಭಾರಿ ಪ್ರಮಾಣದ ಮದ್ಯ ಮಾರಾಟವಾಗಿದೆ.

ಉದ್ದನೆಯ ಸರದಿ ಸಾಲು

ಮದ್ಯದಂಗಡಿಗಳ ಎದುರು ಕೆಲವೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ಕೆಲವೆಡೆ ತಲಾ ಆರು ಅಡಿ ಅಂತರದಲ್ಲಿ ಮಾರ್ಕಿಂಗ್‌ ಮಾಡಲಾಗಿತ್ತು. ಖರೀದಿಗೆ ಬಂದವರು ಸರದಿಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ನಿಯಂತ್ರಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬಹುತೇಕ ಅಂಗಡಿಗಳ ಎದುರು ಬೆಳಿಗ್ಗೆಯಿಂದಲೇ ಉದ್ದನೆಯ ಸರದಿ ಸಾಲು ಇತ್ತು. ಹಲವೆಡೆ ಅಂಗಡಿಗಳ ಬಾಗಿಲು ತೆರೆಯುವ ಮೊದಲೇ ನೂರಾರು ಗ್ರಾಹಕರು ಜಮಾಯಿಸಿದ್ದರು. ಬಹುತೇಕ ಎಂಆರ್‌ಪಿ ಔಟ್‌ಲೆಟ್‌ಗಳಲ್ಲಿ ಸಂಜೆಯಾದರೂ ಸರದಿಯ ಉದ್ದ ಕಡಿಮೆ ಆಗಿರಲಿಲ್ಲ.

ಒಂದೇ ಕುಟುಂಬದ ಹಲವರು

ಒಬ್ಬ ವ್ಯಕ್ತಿಗೆ 2.3 ಲೀಟರ್‌ ಮದ್ಯ ಮತ್ತು 18 ಬಿಯರ್‌ ಖರೀದಿಗೆ ಅವಕಾಶ ಇದೆ. ಹೆಚ್ಚು ಮದ್ಯ ಖರೀದಿಸಲು ಬಯಸಿದ್ದ ಹಲವರು ಕುಟುಂಬ ಸಮೇತರಾಗಿ ಮದ್ಯದಂಗಡಿಯತ್ತ ಬಂದಿದ್ದರು. ಖರೀದಿಗೆ ಅವಕಾಶ ನಿರಾಕರಿಸಬಹುದು ಎಂಬ ಆತಂಕದಿಂದ ಕೆಲವರು ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನೂ ಮದ್ಯದಂಗಡಿಗೆ ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT