ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಬಹಿರಂಗ ಪ್ರಚಾರ ಇಂದು ಅಂತ್ಯ

ಮತದಾನದ ಮುಗಿವವರೆಗಿನ ಚಟುವಟಿಕೆ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ
Published 24 ಏಪ್ರಿಲ್ 2024, 4:44 IST
Last Updated 24 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಬುಧವಾರ (ಏ.24) ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ. ಆ ನಂತರ ಇದೇ 26ರಂದು ಮತದಾನ ಮುಗಿಯುವವರೆಗಿನ ಅವಧಿಯ ಎಲ್ಲ ಚಟುವಟಿಕೆ ಮೇಲೆ ವಿಶೇಷ ನಿಗಾ ವಹಿಸಲು ಜಿಲ್ಲಾಡಳಿತ ವಿಶೇಷ ಕ್ರಮವಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ‘ಕೊನೆಯ 72 ಗಂಟೆಗಳಲ್ಲಿ ಚುನಾವಣಾ ಅಕ್ರಮಗಳ ಮೇಲೆ ವಿಶೇಷ ನಿಗಾ ವಹಿಸಲು 186 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 69 ಸ್ಥಿರ ಸರ್ವೇಕ್ಷಣಾ ತಂಡಗಳು (ಎಸ್‌ಎಸ್‌ಟಿ), 72 ಸಂಚಾರ ತಂಡ (ಎಫ್‌ಎಸ್‌ಟಿ), 24 ವಿಡಿಯೊ ತಂಡಗಳು ಕಣ್ಗಾವಲು ಇಡಲಿವೆ’ ಎಂದರು.

‘ಬುಧವಾರ ಸಂಜೆ 6ರ ಬಳಿಕ ರ‍್ಯಾಲಿ– ಬೀದಿ ಪ್ರಚಾರಕ್ಕೆ ಅವಕಾಶ ಇಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದು. ಈ ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು ಕಡ್ಡಾಯವಾಗಿ ಕ್ಷೇತ್ರವನ್ನು ತೊರೆಯಬೇಕು. ಈ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.  ಮದ್ಯ ಮಾರಾಟ ನಿಷೇಧಿಸಲಾಗಿದೆ.  ಖಾಸಗಿ ಕಾರ್ಯಕ್ರಮಗಳನ್ನು ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿದರೆ ಕ್ರಮವಹಿಸಲಿದ್ದೇವೆ’ ಎಂದರು.  

ಕ್ಷೇತ್ರದಲ್ಲಿ 1005 ಸ್ಥಳಗಳಲ್ಲಿ 1876  ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ವೆಬ್‌ಕಾಸ್ಟಿಂಗ್ 938 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಇದೆ. 50 ಕಡೆ ಇರುವ 132 ಮತಟ್ಟೆಗಳಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಸಿಬ್ಬಂದಿ ಹಾಗೂ 200 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ಅತಿಸೂಕ್ಷ್ಮ ಎಂದು ಗುರುತಿಸಲಾದ 171 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಸೌಲಭ್ಯ ಹಾಗೂ  ಸೂಕ್ಷ್ಮ ವೀಕ್ಷಕರು ಇರಲಿದ್ದಾರೆ’ ಎಂದು ವಿವರಿಸಿದರು.

ಮಹಿಳೆಯರೆ ಜಾಸ್ತಿ: ಈ ಸಲ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರಲ್ಲಿ ಶೇ 70ರಂದು ಸಿಬ್ಬಂದಿ ಮಹಿಳೆಯರು. ಅವರು ಉದ್ಯೋಗ ನಿರ್ವಹಿಸುವ ವಿಧಾನ ಸಭಾ ಕ್ಷೇತ್ರಗಳಲ್ಲೇ  ಚುನಾವಣಾ ಕರ್ತವ್ಯ ವಹಿಸಲಾಗಿದೆ.  ಮತಗಟ್ಟೆ ಸಿಬ್ಬಂದಿ ವಾಸ್ತವ್ಯಕ್ಕೆ, ಪ್ರಥಮ ಚಿಕಿತ್ಸೆಗೆ ಹಾಗೂ ಊಟೋಪಚಾರಕ್ಕೂ ವ್ಯವಸ್ಥೆ ವ್ಯವಸ್ಥೆ ಕಲ್ಪಿಸಲು ಮತಗಟ್ಟೆ ಸಿಬ್ಬಂದಿ ಕಲ್ಯಾಣಾಧಿಕಾರಿಯನ್ನು ನಿಯೋಜಿಸಿದ್ದೇವೆ ಎಂದರು.

ಈ ಸಲ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ತಲಾ ಐದರಂತೆ ಒಟ್ಟು 40 ಸಖಿ ಮತಗಟ್ಟೆಗಳು,  ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ತಲಾ ಒಂದು ಯುವ ಮತದಾರ ಮತಗಟ್ಟೆ, ಧ್ಯೇಯ ಆಧರಿತ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಅಂಗವಿಕಲ ಅಧಿಕಾರಿಗಳು ನಿರ್ವಹಿಸು ಮತಗಟ್ಟೆಗಳು ಸೇರಿ ಒಟ್ಟು 72 ಮಾದರಿ ಮತಗಟ್ಟೆಗಳನ್ನ್ನು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಮತಗಟ್ಟೆಯ 200 ಮೀ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ ಎಂದು ಗುರುತಿಸಲಾಗುತ್ತದೆ. ಅಲ್ಲಿ ಪಕ್ಷದ ಅಥವಾ ಅಭ್ಯರ್ಥಿಯ ಯಾವುದೇ ಚಿಹ್ನೆ, ಶಾಲು ಬಳಸುವುದಕ್ಕೆ, ಮತ ಕೇಳಲು ಅವಕಾಶವಿಲ್ಲ. 

ಮತದಾರರಿಗೆ ಈಗಾಗಲೇ ಮಾಹಿತಿ ಚೀಟಿ ನಿಡಲಾಗಿದೆ. ಮತ ಹಾಕಲು ಅದು ಕಡ್ಡಾಯವಲ್ಲ. ಭಾವಚಿತ್ರ ಸಹಿತ 12 ದಾಖಲೆಗಳಲ್ಲಿ ಒಂದನ್ನು ಮತಗಟ್ಟೆ ಸಿಬ್ಬಂದಿಗೆ ತೋರಿಸಿ ಮತ ಚಲಾಯಿಸಬಹುದು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಈ ಕ್ಷೇತ್ರದ 9900 ಮತದಾರರಿಗೆ ಚುನಾವಣಾ ಕರ್ತವ್ಯ ಪ್ರಮಾಣಪತ್ರ ವಿತರಿಸಲಾಗಿದೆ. ಅದನ್ನು ಬಳಸಿ ಅವರು ಕರ್ತವ್ಯ ನಿರ್ವಹಿಸಿದ ಮತಗಟ್ಟೆಯಲ್ಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್‌, ಪೊಲೀಸ್‌ ಕಮೀಷನರ್‌ ಅನುಪಮ್‌ ಅಗರ್ವಾಲ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT