ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಮಾತನಾಡುವ ನೈತಿಕತೆ ಶಶಿರಾಜ್ ಶೆಟ್ಟಿಗಿಲ್ಲ: ಅನಿಲ್

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಹೇಳಿಕೆ
Published 3 ಜೂನ್ 2023, 14:40 IST
Last Updated 3 ಜೂನ್ 2023, 14:40 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಅವರು 31 ವರ್ಷಗಳಿಂದ ಹಿಂದೂ ಸಂಘಟನೆಗಳ ಮೂಲಕ ಹೋರಾಟ ಮಾಡಿದ್ದಾರೆ. ಅವರ ಮನೆಯಲ್ಲೇ ಕುಳಿತು ಅವರಿಂದ ಹಲವಾರು ರೀತಿಯ ಉಪಕಾರ ಪಡೆದ ಶಶಿರಾಜ್ ಶೆಟ್ಟಿ ಅವರಿಗೆ ಮಹೇಶ್‌ ಶೆಟ್ಟಿ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ’ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹೇಶ್ ಶೆಟ್ಟಿ ಅವರು ಹಿಂದೂ ಸಂಘಟನೆಗಳಿಗೆ ಶಕ್ತಿ ತುಂಬಿದವರು. ಆದರೆ, ಶಶಿರಾಜ್ ಶೆಟ್ಟಿ ಅವರು ಮಹೇಶ್ ಶೆಟ್ಟಿಯವರ ತೇಜೋವಧೆ ಮಾಡಿದ್ದಾರೆ. ಮಚ್ಚಿನದಲ್ಲಿ ಮಸೀದಿಗೆ ಅವಕಾಶ ಕೊಡಿ ಎಂದು ಕೇಳಿದ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ತೋರಿಸಲಿ. ಮಹೇಶ್ ಶೆಟ್ಟಿ ಹಿಂದೆ ಹಣದಾಸೆಗೆ ಯಾರೂ ಹೋಗುತ್ತಿಲ್ಲ. ಅವರ ಧರ್ಮವನ್ನು ಮೆಚ್ಚಿಕೊಂಡು ಹೋಗುತ್ತಿದ್ದಾರೆ ಎಂದರು.

ಮಹೇಶ್ ಶೆಟ್ಟಿ ಕಾಂಗ್ರೆಸ್ ಸದಸ್ಯರಲ್ಲ. ಕಾಂಗ್ರೆಸ್ ಕಚೇರಿಗೆ ಹೋಗಿಲ್ಲ. ಕಾಂಗ್ರೆಸ್ ಪ್ರಚಾರ ಸಭೆಯಲ್ಲೂ ಭಾಗವಹಿಸಿಲ್ಲ. ಅವರು ಕಾಂಗ್ರೆಸ್ ಬೆಂಬಲಿಸಿದ್ದರೆ ವ್ಯಕ್ತಿಗಾಗಿಯೇ ಹೊರತು ಪಕ್ಷಕ್ಕಾಗಿ ಅಲ್ಲ. ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ಮಹೇಶ್ ಶೆಟ್ಟಿಯವರನ್ನು ಬೀದಿ ಹುಲಿ ಎಂದ ಕಾರಣಕ್ಕಾಗಿ ಅವರ ವಿರುದ್ಧವಾಗಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರ ಮಾಡಬೇಕಾಯಿತೇ ಹೊರತು ಮುಸ್ಲಿಂ ಅಭ್ಯರ್ಥಿಯ ಗೆಲುವಿಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸೌಜನ್ಯ ಹೋರಾಟದಲ್ಲಿ ಅವರ ಮನೆಯವರು ನೀವು ಹೋರಾಟ ಮಾಡಬೇಡಿ ಎಂದು ಹೇಳಿದರೆ ಜಾಗರಣ ವೇದಿಕೆ ಆ ಕ್ಷಣಕ್ಕೆ ಹೋರಾಟ ನಿಲ್ಲಿಸಲು ಸಿದ್ಧ. ಅವಳಿಗೆ ನ್ಯಾಯ ಸಿಕ್ಕಿಲ್ಲ ಹಾಗಾಗಿ ಹೋರಾಟ ಮುಂದುವರಿದಿದೆ ಎಂದರು.

ಮಹೇಶ್ ಶೆಟ್ಟಿಯವರು ಪಕ್ಷೇತರರಾಗಿ ಸ್ಪರ್ಧಿಸುವುದು ಅವರಿಗೆ ಬಿಟ್ಟ ವಿಚಾರ. ಅದನ್ನು ಶಶಿರಾಜ್ ಶೆಟ್ಟಿ ಹೇಳಬೇಕಾಗಿಲ್ಲ. ಶಶಿರಾಜ್ ಶೆಟ್ಟಿಯ ಮೇಲೆ ಮತೀಯ ಪ್ರಕರಣಗಳು ಎಷ್ಟು ಇವೆ ಎಂದು ಸ್ಪಷ್ಟಪಡಿಸಬೇಕು. ಮಹೇಶ್ ಶೆಟ್ಟಿಯವರು ಹರೀಶ್ ಪೂಂಜ ಅವರ ನೇತೃತ್ವದ ಎಬಿವಿಪಿ ಹೋರಾಟಗಳಿಗೆ ಕಾರ್ಯಕರ್ತರನ್ನು ಕಳುಹಿಸಿಕೊಟ್ಟ ವಿಚಾರ ನಿಜವಾಗಿದ್ದು, ಎಬಿವಿಪಿ ಯುವ ಸಂಘಟನೆಯ ಮೇಲೆ ಅವರಿಗೆ ಗೌರವ ಇದೆ ಎಂದರು.

ಈಗಿನ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಯನ್ನು ನಿಷೇಧ ಮಾಡಿದರೆ ಅದರ ವಿರುದ್ಧ ಹಿಂದೂ ಜಾಗರಣ ವೇದಿಕೆ ಹೋರಾಟ ಮಾಡುವುದಾಗಿ ತಿಳಿಸಿದರು.

ಸಂಘಟನೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಪ್ರಜ್ವಲ್ ಕೆ.ವಿ.ಗೌಡ ಮಾತನಾಡಿ, ಯತೀಶ್ ಶೆಟ್ಟಿ ಅವರು ಎಬಿವಿಪಿಯನ್ನು ರಾಜಕೀಯಕ್ಕೆ ಬಳಕೆ ಮಾಡಿದ್ದು, ಇದು ಸರಿಯಲ್ಲ ಎಂದರು.

ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿ, ‘ಮಹೇಶ್ ಶೆಟ್ಟಿ ನನ್ನ ಮಗಳಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ಇದ್ದಾರೆ. ನಾವು ಜೀವಂತವಾಗಿ ಇರಬೇಕಾದರೆ ಅದಕ್ಕೆ ಮಹೇಶ್ ಶೆಟ್ಟಿ ಹಾಗೂ ಅವರ ಜತೆ ಇರುವವರು ಕಾರಣ. ಯಾರು ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುತ್ತಾರೋ ಅವರ ಹಿಂದೆ ನಾವು ಹೋಗಲು ಸಿದ್ಧ’ ಎಂದರು.

‌ಸೌಜನ್ಯ ಚಿಕ್ಕಪ್ಪ ವಿಠಲ ಗೌಡ ಮಾತನಾಡಿ, ಶಾಸಕ ಹರೀಶ್ ಪೂಂಜ ಅವರು ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿದರೆ ಅವರ ಬಂಗಾರದ ಮೂರ್ತಿ ಮಾಡಿ ಪೂಜಿಸುತ್ತೇವೆ ಎಂದರು.

ಜಾಗರಣ ವೇದಿಕೆಯ ಗೌರವಾಧ್ಯಕ್ಷ ಹರೀಶ್ ಕುಮಾರ್, ಸಂಚಾಲಕ ಮನೋಜ್ ಕುಂಜರ್ಪ, ಜಗದೀಶ್ ಹೇಡ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT