ಗುರುವಾರ , ಜೂನ್ 30, 2022
27 °C
ಮಳಲಿ ವಿವಾದ: ಸದ್ಯಕ್ಕೆ ಪರಿಸ್ಥಿತಿ ಶಾಂತ: ಪರಿಶೀಲನೆ ನಡೆಸಿದ ಎಡಿಜಿಪಿ

‘ನ್ಯಾಯಾಂಗದ ಮೇಲ್ವಿಚಾರಣೆ; ಸರ್ವೆ ನಡೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಸ್ಥಾನ ಹೋಲುವ ಕಟ್ಟಡ ಕಂಡು ಬಂದಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ತಾಂಬೂಲ ಪ್ರಶ್ನೆ ನಡೆಸಲಾಗಿದ್ದು, ಗುರುವಾರ ಪರಿಸ್ಥಿತಿ ಶಾಂತವಾಗಿದೆ. ಕಾನೂನು, ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ನಗರಕ್ಕೆ ಬಂದಿದ್ದು, ಪರಿಸ್ಥಿತಿಯನ್ನು ಖುದ್ದು ಅವಲೋಕನ
ಮಾಡುತ್ತಿದ್ದಾರೆ.

‘ಮಳಲಿಯಲ್ಲಿ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಇದೀಗ ಪುರಾವೆಗಳೂ ಸಿಕ್ಕಿವೆ. ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಮಸೀದಿಯ ಸರ್ವೆ ನಡೆಯಬೇಕು. ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಯಬೇಕು’ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಕುಮಾರ್ ಜೈನ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ವಿಡಿಯೊ ಸಂದೇಶ ನೀಡಿರುವ ಅವರು, ‘ಮೊದಲಿದ್ದ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವುದಕ್ಕೆ ಸಾಕ್ಷಿಯೂ ದೊರೆತಿದೆ. ಈ ವಿಚಾರದಲ್ಲಿ ಮುಸ್ಲಿಮರು ಸದ್ಭಾವನೆ ತೋರಿಸಬೇಕು. ಅಲ್ಲಿ ಮಂದಿರವಿತ್ತು, ಅದನ್ನು ಧ್ವಂಸ ಮಾಡಿ ಮಸೀದಿ ಮಾಡಲಾಗಿತ್ತು. ನಾವೀಗ ಮಂದಿರವನ್ನು ಹಿಂದೂ ಸಮಾಜದ ಉಸ್ತುವಾರಿಗೆ ನೀಡುತ್ತೇವೆ ಎಂದು ಅವರು ಮುಂದೆ ಬರಬೇಕಿದೆ. ಈ ಮೂಲಕ ಪ್ರಪಂಚಕ್ಕೆ ಒಂದು ಉದಾಹರಣೆಯಾಗಿ ನಿಲ್ಲಬೇಕು’ ಎಂದು ಆಗ್ರಹಿಸಿದ್ದಾರೆ.

ಸಂಬಂಧವಿಲ್ಲದ ವ್ಯಕ್ತಿಯ ಹೇಳಿಕೆ: ಮಳಲಿ ಪೇಟೆ ಮಸೀದಿಯ ವಿಚಾರವಾಗಿ ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಖಾಲಿದ್ ಎಂಬ ವ್ಯಕ್ತಿಗೂ ಮಳಲಿಪೇಟೆ ಜುಮಾ ಮಸೀದಿಗೂ ಯಾವುದೇ ಸಂಬಂಧವಿಲ್ಲ ಎಂದು ಮಳಲಿ ಜಮಾಅತ್ ಸ್ಪಷ್ಟನೆ ನೀಡಿದೆ.

‘ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಖಾಲಿದ್ ಎಂಬಾತ ನಮ್ಮ ಜಮಾಅತ್ ಕಮಿಟಿಯ ಸದಸ್ಯನೂ ಅಲ್ಲ, ನಮ್ಮ ಜಮಾಅತ್‌ನವನೇ ಅಲ್ಲ. ಈತ ಯಾರು, ಏತಕ್ಕಾಗಿ ಮಸೀದಿಯ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾನೆ ಎಂಬುದು ತಿಳಿದಿಲ್ಲ’ ಎಂದು ಜಮಾಅತ್ ಸಮಿತಿ ಹೇಳಿದೆ.

ಖಾಸಗಿ ವಾಹಿನಿಯಲ್ಲಿ ಮಾತನಾಡಿದ ಖಾಲಿದ್‌, ‘ಮಸೀದಿ ಇರುವ ಸ್ಥಳದಲ್ಲಿ ಯಾವುದೇ ಸಂಶೋಧನೆಗಳು ನಡೆದು ಅಲ್ಲಿ ದೇವಸ್ಥಾನ ಇರುವುದು ಗೊತ್ತಾದರೆ, ಆ ಸ್ಥಳವನ್ನು ಬಿಟ್ಟು ಕೊಡುತ್ತೇವೆ. ನಮಗೆ ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳ ನೀಡಲಿ’ ಎಂದು ಹೇಳಿದ್ದರು.

‘ಜಮಾಅತ್ ಕಮಿಟಿ ಮತ್ತು ಊರಿನ ಮುಸ್ಲಿಮರು ಒಂದಾಗಿ ನಿಂತಿದ್ದೇವೆ. ಯಾರೋ ಎಲ್ಲಿಯೋ ಕುಳಿತು ಹೇಳಿಕೆಗಳನ್ನು ನೀಡುತ್ತಿದ್ದರೆ, ಅದು ಜಮಾಅತ್ ಕಮಿಟಿಯ ಹೇಳಿಕೆಯಾಗುವುದಿಲ್ಲ ಎಂದಿರುವ ಸಮಿತಿಯ ಮುಖಂಡರು, ನಾವು ಕಾನೂನು ರೀತಿಯ ಹೋರಾಟ ಮಾಡಲಿದ್ದೇವೆಯೇ ಹೊರತು ಮಾತುಕತೆಗೆ ಸಿದ್ಧರಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಕಾನೂನು, ಸುವ್ಯವಸ್ಥೆಗೆ ಕ್ರಮ’

ಮಳಲಿಯಲ್ಲಿ ಹುಟ್ಟಿಕೊಂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಆಸ್ಪದ ನೀಡುವುದಿಲ್ಲ ಎಂದು ಕಾನೂನು, ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳಲಿ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಜೂನ್ 3ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಆದೇಶಿಸಿದೆ. ಆ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಲಾಗಿದೆ’ ಎಂದರು.

ಮಂಗಳೂರು ಸೂಕ್ಷ್ಮ ಪ್ರದೇಶ. ಒಂದು ವರ್ಷದಲ್ಲಿ ಚುನಾವಣೆಯೂ ಇದೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು