ಮಂಗಳೂರು: ನೆರೆರಾಜ್ಯ ಕೇರಳದಿಂದ ಬರುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು. ಈ ಪ್ರದೇಶದಿಂದ ಮಂಗಳೂರು ನಗರಕ್ಕೆ ಬರುವವರು ಬಸ್‌ಗಾಗಿ ಕಾಯುವ ತಂಗುದಾಣಕ್ಕೆ ನಾಲ್ಕು ಕಂಬಗಳ ಮೇಲೆ ಚಾವಣಿಯೊಂದು ಬಿಟ್ಟರೆ ಬೇರೇನೂ ಇಲ್ಲ. ಜಡಿಮಳೆಯ ಸಂದರ್ಭದಲ್ಲಿ ಇಲ್ಲಿ ಬಸ್‌ಗೆ ಕಾಯುವವರು ಪೂರ್ತಿ ನೆನೆಯಬೇಕಾದ ಪರಿಸ್ಥಿತಿ. ಬೇಸಿಗೆಯಲ್ಲಿ ಸಿಲಿನ ತಾಪಕ್ಕೆ ಮೈಯೊಡ್ಡಬೇಕು.
ಅಲ್ಲಿಂದ ಸ್ವಲ್ಪ ಮುಂದೆ ಬಂದರೆ ಎಕ್ಕೂರು ಬಸ್ ತಂಗುದಾಣ ಸಿಗುತ್ತದೆ. ಇಲ್ಲಿ ಬಸ್‌ಗೆ ಕಾಯುವವರು ತುಂಬ ಜಾಗರೂಕರಾಗಿರಬೇಕು. ಸುತ್ತ ಗಿಡಗಂಟಿ ಬೆಳೆದಿರುವ ತಂಗುದಾಣದ ಒಳಗೆ ಕಸ ಕಡ್ಡಿ ತುಂಬಿದೆ. ಹಾವು–ಚೇಳು ಇದ್ದರೂ ಇರಬಹುದು ಎಂಬ ಆತಂಕದಲ್ಲೇ ಜನರು ಇಲ್ಲಿ ನಿಂತಿರುತ್ತಾರೆ.
ಈ ಪ್ರದೇಶವನ್ನು ದಾಟಿ ನೇರ ಮೂಡುಬಿದಿರೆ ರಸ್ತೆಗೆ ಬಂದರೆ ಬಿಕರ್ನಕಟ್ಟೆ, ಕುಲಶೇಖರ ಮುಂತಾಗಿ ಎಲ್ಲ ಕಡೆಯೂ ತಂಗುದಾಣಗಳದ್ದು ಇದೇ ಪರಿಸ್ಥಿತಿ. ನಗರದ ಪೂರ್ವಭಾಗದ ಪಡೀಲ್, ಕಣ್ಣೂರು ಕಡೆಗೆ ಹೋದರೂ ಪಶ್ಚಿಮದ ಕಡಲಬದಿಯಲ್ಲಿ ತಿರುಗಾಡಿದರೂ ಕಾಣಸಿಗುವ ಬಹುತೇಕ ಬಸ್ ತಂಗುದಾಣಗಳ ಕಥೆ ಒಂದೇ.
ಮಂಗಳೂರು ನಗರದಲ್ಲಿ ನಗರಪಾಲಿಕೆ, ಸ್ಮಾರ್ಟ್ ಸಿಟಿ, ಸಂಘಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಪ್ರಾಯೋಜಕತ್ವದಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣಗಳು ಇವೆ. ನಗರ ಮಧ್ಯದಲ್ಲಿ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂಗುದಾಣಗಳೂ ಇವೆ. ಇವುಗಳು ಕೂಡ ಸುಸ್ಥಿತಿಯಲ್ಲಿಲ್ಲ. ನಗರಮಧ್ಯದ ಲೇಡಿಗೋಷನ್ ಮುಂಭಾಗದ ಮುಖ್ಯರಸ್ತೆಯಲ್ಲಿ, ನೂರಾರು ಮಂದಿ ಬಸ್ ಹತ್ತಲು ಕಾಯುವ ತಂಗುದಾಣವನ್ನು ಕೆಲವೊಮ್ಮೆ ಕಡ್ಲೆಕಾಯಿ ಮಾರುವವರು ‘ಅಂಗಡಿ’ಯಾಗಿ ಪರಿವರ್ತಿಸುತ್ತಾರೆ. ಪ್ರಯಾಣಿಕರು ರಸ್ತೆಬದಿಯಲ್ಲೇ ನಿಲ್ಲಬೇಕು.
ಕೆಲವು ತಂಗುದಾಣಗಳನ್ನು ಹೊರರಾಜ್ಯಗಳಿಂದ ಬಂದಿರುವ ಕೂಲಿ ಕೆಲಸದವರು ‘ಮನೆ’ಯನ್ನಾಗಿಸಿಕೊಂಡಿದ್ದರೆ ಕೆಲವು ಬಳಕೆಯಾಗದೆ ಪಾಳು ಬಿದ್ದಿವೆ. ಬಳಕೆಯಲ್ಲಿರುವ ಹೆಚ್ಚಿನ ತಂಗುದಾಣಗಳಲ್ಲಿ ಪ್ರಯಾಣಿಕರು ನೆಮ್ಮದಿಯಿಂದ ಕುಳಿತು ಬಸ್‌ಗಾಗಿ ಕಾಯುವ ಹಾಗಿಲ್ಲ. ಕೆಪಿಟಿಯಿಂದ ನಂತೂರು ಕಡೆಗೆ ಹೋಗುವ ಹಾದಿ ಮಧ್ಯೆ ಇರುವ ಪದವು ತಂಗುದಾಣ ಗಿಡಗಂಟಿಗಳ ನಡುವೆಯೇ ಇದೆ. ಹೀಗಾಗಿ ಅದರ ಒಳಗೆ ಹೋಗಲು ಪ್ರಯಾಣಿಕರು ಹಿಂಜರಿಯುತ್ತಾರೆ. ಮಳೆಗಾಲದಲ್ಲಿ ಹೊರಗೆ ಕೊಡೆ ಹಿಡಿದುಕೊಂಡೇ ಬಸ್‌ಗೆ ಕಾಯುತ್ತಾರೆ.
ನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಧೀನದಲ್ಲಿರುವ ತಂಗುದಾಣಗಳ ನಿರ್ವಹಣೆಯನ್ನು ಏಜೆನ್ಸಿಗಳಿಗೆ ನೀಡಲಾಗಿದೆ. ಹೆದ್ದಾರಿ ಪ್ರಾಧಿಕಾರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದರಿಂದ ಎರಡು ವರ್ಷಗಳಿಂದ ತಂಗುದಾಣಗಳ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಪ್ರಾಧಿಕಾರದ ಹೈವೇ ಆಡಳಿತ ವಿಭಾಗದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಅವರೇ ಒಪ್ಪಿಕೊಳ್ಳುತ್ತಾರೆ.
‘ಸುರತ್ಕಲ್ ಟೋಲ್ ತೆಗೆದ ನಂತರ ಪ್ರಾಧಿಕಾರಕ್ಕೆ ಈ ಭಾಗದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಬಸ್ ತಂಗುದಾಣಗಳ ನಿರ್ವಹಣೆಗೆ ಏಜೆನ್ಸಿಗಳಿಗೆ ಹಣ ನೀಡಲು ಆಗಲಿಲ್ಲ. ಹಳೆಯ ಬಾಕಿ ತುಂಬ ಇದೆ. ಇನ್ನು ಹೊಸ ಜವಾಬ್ದಾರಿ ಕೊಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಆಜ್ಮಿ ‘ಹೇಗಾದರೂ ಮಾಡಿ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.
‘ನಗರಪಾಲಿಕೆ ಆಧೀನದ ತಂಗುದಾಣಗಳ ನಿರ್ವಹಣೆಯ ಹೊಣೆಯನ್ನು ನಾಲ್ಕು ಏಜೆನ್ಸಿಗಳಿಗೆ ನೀಡಲಾಗಿದೆ. ರಸ್ತೆ ವಿಸ್ತರಣೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಕೆಲವು ತಂಗುದಾಣಗಳನ್ನು ತೆರವುಗೊಳಿಸಬೇಕಾಗಿ ಬಂದಿದೆ. ಅವುಗಳ ಬದಲಿಗೆ ಹೊಸ ನಿರ್ಮಾಣ ಕಾಮಗಾರಿ ನಡೆಯಲಿದೆ’ ಎಂದು ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ತಿಳಿಸಿದರು.
‘ತಂಗುದಾಣಗಳಲ್ಲಿ ಜಾಹೀರಾತು ಅಳವಡಿಸುವ ಮೂಲಕ ಏಜೆನ್ಸಿಗಳು ನಿರ್ವಹಣೆಯ ವೆಚ್ಚವನ್ನು ಸರಿದೂಗಿಸುತ್ತವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ 17 ತಂಗುದಾಣಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಬೇಕು ಎಂದು ಸೂಚಿಸಲಾಗಿದೆ. ಇವುಗಳ ಪೈಕಿ ಸಮಸ್ಯೆ ಇರುವ ಕೆಲವು ತಂಗುದಾಣಗಳನ್ನು ಸರಪಡಿಸಿಕೊಡಬೇಕು ಎಂದು ಕೂಡ ತಿಳಿಸಲಾಗಿದೆ’ ಎಂದು ಜೂನಿಯರ್ ಎಂಜಿನಿಯರ್ ನಿತ್ಯಾನಂದ ಕೆ. ಎಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.