ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಶೇ 40ರಷ್ಟು ಪ್ರದೇಶಕ್ಕೆ ಒಳಚರಂಡಿ ಮರೀಚಿಕೆ

Published 29 ಜನವರಿ 2024, 7:04 IST
Last Updated 29 ಜನವರಿ 2024, 7:04 IST
ಅಕ್ಷರ ಗಾತ್ರ

ಮಂಗಳೂರು: ನಗರಸಭೆಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ 44 ವರ್ಷಗಳೇ ಕಳೆದಿವೆ. ಆದರೆ ನಗರದ ಶೇ 40ರಷ್ಟು ಪ್ರದೇಶಗಳಲ್ಲಿ ಮನೆ ಮನೆಗೆ ಒಳಚರಂಡಿ ಸಂಪರ್ಕ ಇನ್ನೂ ಮರೀಚಿಕೆಯೇ ಆಗಿವೆ. 

ಸುರತ್ಕಲ್‌ ಪ್ರದೇಶ 1996–97ರಲ್ಲಿ ಪಾಲಿಕೆ ತೆಕ್ಕೆಗೆ ಸೇರಿ ವಾರ್ಡ್‌ಗಳ ಸಂಖ್ಯೆ 60ಕ್ಕೆ ಏರಿದೆ. ಈ ಪ್ರದೇಶಗಳೂ ಸೇರಿದಂತೆ ಇಡೀ ನಗರದ ಒಳಚರಂಡಿ ಜಾಲವನ್ನು ಬಲಪಡಿಸಲು ಕುಡ್ಸೆಂಪ್‌ ವತಿಯಿಂದ ಕೈಗೊಂಡ ಯೋಜನೆಗಳಿಗೆ ₹ 300 ಕೋಟಿಗೂ ಅಧಿಕ ಹಣ ವ್ಯಯಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಒಳಚರಂಡಿಯ ಶೌಚಯುಕ್ತ ತ್ಯಾಜ್ಯನೀರನ್ನು ಶುದ್ಧೀಕರಿಸಲು ನಾಲ್ಕು ಕಡೆ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿವೆ. ಇವುಗಳಿಗೆ ತಗ್ಗು ಪ್ರದೇಶದಿಂದ ತ್ಯಾಜ್ಯ ನೀರನ್ನು ಪಂಪ್‌ ಮಾಡಲು 22 ವೆಟ್‌ವೆಲ್‌ಗಳಿವೆ. ಇಷ್ಟಾಗಿಯೂ ಆಳುಗುಂಡಿಗಳಲ್ಲಿ  (ಮ್ಯಾನ್‌ಹೋಲ್‌) ಒಳಚರಂಡಿಯ ಶೌಚ ನೀರು ಹರಿಯುವುದು, ಮಳೆ ನೀರು ಮಾತ್ರ ಹರಿಯಬೇಕಾದ ಚರಂಡಿಗಳಲ್ಲಿ ದುರ್ವಾಸನೆಯುಕ್ತ ಶೌಚ ನೀರು ಹರಿಯುವುದು ಮಾಮೂಲಿ ಎಂಬ ಸ್ಥಿತಿ ನಗರದಲ್ಲಿದೆ.

ಅಂಗಾರಗುಂಡಿ, ಕುಡುಂಬೂರು, ಅಳಪೆ, ಸರಿಪಲ್ಲ, ಬಿಕರ್ನಕಟ್ಟೆ, ಪಡೀಲ್‌, ಫೈಜಲ್‌ನಗರ ಮುಂತಾದ ಕೆಲವು ಪ್ರದೇಶಗಳಲ್ಲಿ ಈಗಲೂ ಒಳಚರಂಡಿಯ ಸಂಪರ್ಕವೇ ಇಲ್ಲ. ಕುಡ್ಸೆಂಪ್‌ ಯೋಜನೆಯಡಿ ಕೈಗೊಂಡ ಒಳಚರಂಡಿ ಯೊಜನೆಯಲ್ಲಿ ಕೆಲವು ಪ್ರದೇಶಗಳಲ್ಲಿ ಒಳಚರಂಡಿ ಕೊಳವೆ ಸಂಪರ್ಕ ಅಪೂರ್ಣವಾಗಿತ್ತು. ಬಿಟ್ಟುಹೋದ ಕಡೆ ಕೊಳವೆ ಅಳವಡಿಕೆಗೆ ಮತ್ತೆ   ವತಿಯಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಆ ಬಳಿಕವೂ ಒಳಚರಂಡಿ ಸಂಪರ್ಕ ಇರುವ ನಗರದ ಶೇ 60ರಷ್ಟು ಪ್ರದೇಶಗಳಲ್ಲೂ ಒಳಚರಂಡಿ ಕಟ್ಟಿಕೊಳ್ಳುವ ದೂರುಗಳು ಮಾಮೂಲಿ ಎಂಬಂತಾಗಿದೆ. ನದಿಗೆ ಒಳಚರಂಡಿಯ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೂ ಪಾಲಿಕೆಗೆ ಕೆಲ ತಿಂಗಳ ಹಿಂದೆ ನೋಟಿಸ್‌ ಜಾರಿಗೊಳಿಸಿದ್ದರು. 

ನಗರದ ಒಳಚರಂಡಿ ಜಾಲವು 50 ವರ್ಷಗಳಿಗೂ ಹಳತಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಕೈಚೆಲ್ಲುತ್ತಾರೆ ಅಧಿಕಾರಿಗಳು.

‘1970-71 ಸಾಲಿನಲ್ಲಿ ಇದ್ದ ನಗರದ  ಜನಸಂಖ್ಯೆಗೆ ( 1.80 ಲಕ್ಷ) ಸೀಮಿತವಾಗಿ 1.50 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಲಾಗಿತ್ತು.  ಸುಮಾರು 105 ಮೈಲು ಉದ್ದದ ಈ ಕೊಳವೆ ಜಾಲದಲ್ಲಿ 150 ಮಿ.ಮೀಯಿಂದ ಹಿಡಿದು
ಮಿ.ಮಿ.ಯಿಂದ 750 ಮಿ.ಮಿ. ವ್ಯಾಸದ ಕೊಳವೆಗಳನ್ನು ಅಳವಡಿಸಲಾಗಿತ್ತು. ಸುಮಾರು 4000  ಆಳುಗುಂಡಿಗಳನ್ನು ನಿರ್ಮಿಸಲಾಗಿತ್ತು. ಆಗ ಕೆಂಪುಕಲ್ಲಿನಿಂದ  ಆಳುಗುಂಡಿ ನಿರ್ಮಿಸಿದ್ದರು.  ನಡುವೆ ಮರಗಳ ಬೇರು ನುಗ್ಗಿ, ಒಳಚರಂಡಿಗಳು ಶಿಥಿಲಗೊಂಡಿದ್ದವು. ಕೆಲವೆಡೆ ಪ್ಲಾಸ್ಟಿಕ್‌ ಕಸ, ಅಪಾರ್ಟ್‌ಮೆಂಟ್‌ ಕಸಗಳು ಸಿಲುಕಿಯೂ ಕೊಳವೆ ಮಾರ್ಗ ಕಟ್ಟಿಕೊಳ್ಳುತ್ತಿದೆ. ಆಳುಗುಂಡಿ ತುಂಬಿ ಹರಿಯುವುದಕ್ಕೆ ಹಾಗೂ ಒಳಚರಂಡಿ ಕೊಳವೆಯಲ್ಲಿ ಸೋರಿಕೆ ಉಂಟಾಗುವುದಕ್ಕೆ ಹಾಗೂ ಮಳೆ ನೀರು ಚರಂಡಿಯಲ್ಲಿ ಶೌಚ ನೀರು ಹರಿಯುವುದಕ್ಕೆ ಪ್ರಮುಖ ಕಾರಣ’ ಎನ್ನುತ್ತಾರೆ ಪಾಲಿಕೆಯ ಎಂಜಿನಿಯರ್‌ ಒಬ್ಬರು.

ಕಾವೂರಿನಲ್ಲಿ ತ್ಯಾಜ್ಯ ನೀರನ್ನು ತೃತೀಯ ಹಂತದವರೆಗೆ ಶುದ್ಧೀಕರಣಗೊಳಿಸುವ ಘಟಕವನ್ನು (ಟಿಟಿಪಿ) ಪಾಲಿಕೆಯು ಎಂಎಸ್‌ಇಜೆಡ್‌ ಸಹಭಾಗಿತ್ವದಲ್ಲಿ ಈಗಾಗಲೇ ನಿರ್ಮಿಸಿದೆ. ಇಲ್ಲಿ ಶುದ್ಧೀಕರಣಗೊಂಡ ನೀರನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಾಗುತ್ತಿದೆ.  ಪಿಲಿಕುಳದಲ್ಲಿ ನಿತ್ಯ 65 ಲಕ್ಷ ಲೀ ತ್ಯಾಜ್ಯ ನೀರನ್ನು ತೃತೀಯ ಹಂತದವರೆಗೆ ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಇದರ ನಿರ್ವಹಣೆ ಚೆನ್ನಾಗಿಯೇ ಆಗುತ್ತಿದೆ. ಪಚ್ಚನಾಡಿ, ಜಪ್ಪಿನಮೊಗರು, ಬಜಾಲ್‌ ಎಸ್‌ಟಿಪಿಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ.

‘ಪಚ್ಚನಾಡಿ, ಜಪ್ಪಿನಮೊಗರು, ಬಜಾಲ್‌ ಎಸ್‌ಟಿಪಿಗಳ ನಿರ್ವಹಣೆ ಅವಧಿ ಮುಕ್ತಾಯವಾಗಿದ್ದು, ಹೊಸತಾಗಿ ನಿರ್ವಹನೆ ಏಜೆನ್ಸಿ ನಿಯೋಜಿಸಲು ಟೆಂಡರ್‌ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತ ಸಿ.ಎಲ್‌.ಆನಂದ್‌ ತಿಳಿಸಿದರು.

‘ಜಲ್ಲಿಗುಡ್ಡೆ ಫೈಸಲ್‌ನಗರ, ಪಡೀಲ್‌ ಪ್ರದೇಶಗಳಲ್ಲಿ ಮನೆ ಮನೆ ಸಂಪರ್ಕ ನೀಡಿರಲಿಲ್ಲ.  ವೆಟ್‌ವೆಲ್‌ ಮತ್ತು ಮುಖ್ಯ ಕೊಳವೆಗಳ ಬಿಟ್ಟುಹೋದ ಕೊಂಡಿಗಳನ್ನು ಜೋಡಿಸಿ ಇಲ್ಲಿ ಮನೆ ಮನೆಗೆ ಒಳಚರಂಡಿ ಕಲ್ಪಿಸುವ  ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದರು.

‘ನಗರದ ಕೆಲವು ಕಡೆ ತಗ್ಗು ದಿಣ್ಣೆಗಳಿಂದ ಕೂಡಿದ ಪ್ರದೇಶಗಳಲ್ಲಿ ಒಳಚರಂಡಿ ಕೊಳವೆ ಅಳವಡಿಸಿದ ಕಡೆಗಳಲ್ಲೂ ಈ ಮಾರ್ಗಗಳು ಪರಸ್ಪರ ಜೋಡಣೆಯಾಗಿರಲಿಲ್ಲ. ಕುಡ್ಸೆಂಪ್‌ ನಿರ್ವಹಿಸಿದ ಕಾಮಗಾರಿಯಲ್ಲಿ ಪಾಲಿಕೆ ಮತ್ತು ಅನುಷ್ಠಾನ ಏಜೆನ್ಸಿ ನಡುವೆ ಸಮನ್ವಯ ಕೊರತೆಯಿಂದಾಗಿ ಒಳಚರಂಡಿ ಕೊಳವೆ ಅಳವಡಿಕೆ ಕಾರ್ಯ ವೈಜ್ಞಾನಿಕವಾಗಿ ನಡೆದಿರಲಿಲ್ಲ. ಹಾಗಾಗಿ ಕೆಲವೆಡೆ ಗುರುತ್ವಾಕರ್ಷಣೆಯಿಂದ ಕೊಳಚೆ ನೀರು ಹರಿಯಲು ಸಾಧ್ಯವಾಗದ ಕಾರಣ, ಮನೆ ಮನೆಗೆ ಒಳಚರಂಡಿ ಸಂಪರ್ಕ ನೀಡಲು ಸಮಸ್ಯೆ ಎದುರಾಗಿತ್ತು. ಅಂತಹ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದೇವೆ. ಸಮಸ್ಯೆ ಸರಿಪಡಿಸಲಾದ ಕಡೆ ನಿತ್ಯ 20 ಮನೆಗಳಿಗಾದರೂ ಒಳಚರಂಡಿ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದೇವೆ‘ ಎಂದು ಅವರು ಮಾಹಿತಿ ನೀಡಿದರು.

‘ಗುರುತ್ವಾಕರ್ಷಣೆ ಬಲದಲ್ಲೇ ಶೌಚನೀರು ಪಂಪ್‌ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಗರದಲ್ಲಿ ಕೆಲವೆಡೆ ಇದೆ. ಕೆಲವು ಕಡೆ ಒಳಚರಂಡಿ ಜಾಲದ ಕೊಳವೆಗಳು ಖಾಸಗಿ ಜಾಗದಲ್ಲಿ ಹಾದುಹೋಗಿದ್ದು, ಅವುಗಳ ನಿರ್ವಹಣೆಗೆ ಕೆಲವು ಮನೆಯವರು ಇದಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಕೆಲವೆಡೆ ವಾಹನ ಹೋಗಲಾಗದ ಕಡೆ ಒಳಚರಂಡಿ ಮಾರ್ಗಗಳಿವೆ. 50 ವರ್ಷ ಹಿಂದೆ ಕೊಳವೆ ಅಳವಡಿಸಿದ ಜಾಗದಲ್ಲಿ ಬಳಿಕ ಕಟ್ಟಡ ನಿರ್ಮಾಣವಾಗಿದೆ. ಇಂತಹ ಕಡೆಯೂ ನಿರ್ವಹಣೆ ಸಮಸ್ಯೆ ಇದೆ’ ಎಂದು ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಒಬ್ಬರು ತಿಳಿಸಿದರು. 

‘ಎಸ್‌ಟಿಪಿ ವೆಟ್‌ವೆಲ್‌ ಸರಾಗವಾಗಿ ಕಾರ್ಯಾಚರಣೆಗೆ ಎಕ್ಸ್‌ಪ್ರೆಸ್‌ ಫೀಡರ್‌ ಬೇಕು. ವಿದ್ಯುತ್‌ ಸ್ಥಗಿತಗೊಂಡ ಬಳಿಕ ಎಸ್‌ಟಿಪಿ  ಮತ್ತೆ ಕಾರ್ಯಾಚರಣೆ ಆರಂಭಿಸಲು ತಾಸುಗಟ್ಟಲೆ ಬೇಕಾಗುತ್ತದೆ’ ಎಂದರು.

‘ಒಳಚರಂಡಿ ಕಟ್ಟಿಕೊಳ್ಳುವ ಸಮಸ್ಯೆಗೆ ತುರ್ತು ಪರಿಹಾರ ಕೈಗೊಳ್ಳಲು ಪಾಲಿಕೆಯು 6 ಜೆಟ್ಟಿಂಗ್‌ ಯಂತ್ರಗಳನ್ನು 5 ಹೀರುಯಂತ್ರಗಳನ್ನು ಹಾಗೂ 5 ಹೂಳು ತೆಗೆಯುವ ಯಂತ್ರಗಳನ್ನು ಹೊಂದಿದೆ. ಎಲ್ಲ ಯಂತ್ರಗಳಿಗೂ ಜಿಪಿಎಸ್‌ ಅಳವಡಿಸಲಾಗಿದೆ. ಹಾಗಾಗಿ ಏನೇ ದೂರು ಬಂದರೂ ತಕ್ಷಣವೇ ಸ್ಪಂದಿಸಲು ಸಾಧ್ಯವಾಗುತ್ತಿದೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿವಲಿಂಗಪ್ಪ ತಿಳಿಸಿದರು.

‘ಮಳೆಗಾಲದಲ್ಲಿ ಕೆಲವು ಮನೆ ಹಾಗೂ ಅಪಾರ್ಟ್‌ಮೆಂಟ್ ಸಮುಚ್ಚಯದವರು ಮಳೆನೀರನ್ನು ಒಳಚರಂಡಿ ಜಾಲದೊಳಗೆ ಹರಿಯಬಿಡುತ್ತಾರೆ. ಇದೂ ಆಳುಗುಂಡಿ ಉಕ್ಕಿ ಹರಿಯಲು ಪ್ರಮುಖ ಕಾರಣ. ಅವರಿಗೆ ಗರಿಷ್ಠ ₹ 50 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಇದೆ. ‌ಅಂತಹವನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದೇವೆ’ ಎಂದರು.

ನಗರದ ಒಳಚರಂಡಿ ವ್ಯವಸ್ಥೆಯನ್ನು ಎನ್‌ಐಟಿಕೆ ತಜ್ಞರಿಂದ ಅಧ್ಯಯನಕ್ಕೆ ಒಳಪಡಿಸಲಿದ್ದೇವೆ. ಅವರಿಂದ ವರದಿ ಪಡೆದ ಬಳಿಕ ಇಡೀ ನಗರದ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಯೋಜನೆ ರೂಪಿಸುತ್ತೇವೆ

-ಸಿ.ಎಲ್.ಆನಂದ್‌ ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ

₹40 ಕೋಟಿ  ಮಂಜೂರು?
‘ಹಸಿರು ನ್ಯಾಯ ಮಂಡಳಿಯ ಆದೇಶದ ಮೇರೆಗೆ ಸರ್ಕಾರವು ನಗರದ ಒಳಚರಂಡಿ ಜಾಲದ ಲೋಪಗಳನ್ನು ಬಗೆಹರಿಸಲು  ₹ 40 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದೆ. ಇದರ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಒಳಚರಂಡಿಯ ಮುಖ್ಯ ಕೊಳವೆ ಇರುವಲ್ಲೆಲ್ಲ ಕಾಂಕ್ರೀಟ್‌ ಆಳುಗುಂಡಿ ನಿರ್ಮಾಣ ಹಳೆ ಕೊಳವೆ ಮಾರ್ಗಗಳು ಕಟ್ಟಿಕೊಳ್ಳುವ ಕಡೆ ಹೊಸ ಕೊಳವೆ ಅಳವಡಿಸಲಾಗುತ್ತದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.  'ಕೆಲವೆಡೆ ವೆಟ್‌ವೆಲ್‌ ವಿದ್ಯುತ್‌ ಪರಿಕರ ಹಾಗೂ ಯಂತ್ರಗಳ ಕಾರ್ಯಕ್ಷಮತೆ ಕಡಿಮೆ ಇತ್ತು. ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಪಾಂಡೇಶ್ವರ ಕುದ್ರೋಳಿ ಕೊಡಿಯಾಲ್‌ಗುತ್ತು ಕಡೆಕಾರ್‌ಗಳಲ್ಲಿ ವೆಟ್‌ವೆಲ್‌ಗಳ ವಿದ್ಯುತ್‌ ಯಂತ್ರಗಳ ಕ್ಷಮತೆ ಹೆಚ್ಚಿಸಲು ₹ 14 ಕೋಟಿ ವೆಚ್ಚದ ಕಾಮಗಾರಿ ಟೆಂಡರ್‌ ಆಗಿ ಕಾರ್ಯಾದೇಶ ನೀಡಲಾ‌ಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಂಗಾರಗುಂಡಿ ಕುಡುಂಬೂರು ಪ್ರದೇಶಗಳಲ್ಲಿ ಒಳಚರಂಡಿ ಜಾಲ ಸುಧಾರಣೆಯ  ₹ 19 ಕೋಟಿ ವೆಚ್ಚದ ಈ ಪ್ರಸ್ತಾವಕ್ಕೆ ಸರ್ಕಾರರಿಂದ ಇನ್ನೂ ಮಂಜೂರಾತಿ ಸಿಕ್ಕಿಲ್ಲ' ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಎಲ್ಲ ಮನೆಗೆ ಒಳಚರಂಡಿ ಸದ್ಯಕ್ಕೆ ಕಷ್ಟ’
‘ನಗರದಲ್ಲಿ ಬಾಕಿ ಉಳಿದ ಶೇ 40ರಷ್ಟು ಪ್ರದೇಶಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲು ಏನಿಲ್ಲವೆಂದರೂ ₹ 350 ಕೋಟಿ ಅನುದಾನ ಬೇಕು. ಸದ್ಯಕ್ಕೆ ಅಷ್ಟು ಅನುದಾನ ಹೊಂದಿಸುವುದು ಕಷ್ಟ. ಅದರಲ್ಲೂ ಸರಿಪಲ್ಲ ಅಳಪೆಯಂತಹ ಕಡೆ ಬೆಟ್ಟಗುಡ್ಡಗಳ ನಡುವೆ ಒಳಚರಂಡಿ ಜಾಲ ನಿರ್ಮಿಸಬೇಕಾಗುತ್ತದೆ. ಕೆಲವೆಡೆ ವೆಟ್‌ವೆಲ್‌ಗಳನ್ನು 25 ಅಡಿಗಳಿಗೂ ಹೆಚ್ಚು ಆಳದವರೆಗೆ ನಿರ್ಮಿಸಬೇಕಾಗುತ್ತದೆ. ಇದು ಪ್ರಾಯೋಗಿಕವಾಗಿ ಕಷ್ಟಸಾಧ್ಯ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
‘ಖಾಸಗಿ ಎಸ್‌ಟಿಪಿ ಮೇಲೆ ನಿಗಾ ಇಡಲು ಕಾರ್ಯಪಡೆ’
ಒಳಚರಂಡಿ ಜಾಲಕ್ಕೆ ಶೌಚನೀರನ್ನು ಶುದ್ಧೀಕರಿಸದೆಯೇ ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹರಿಯಬಿಡುತ್ತಿವೆ. ಎಸ್‌ಟಪಿ ಇದ್ದರೂ ಅವುಗಳನ್ನು ಬಳಸುತ್ತಿಲ್ಲ. ಅವುಗಳನ್ನು ಪತ್ತೆ ಹಚ್ಚಿ ನೋಟಿಸ್‌ ನೀಡಲು ಕಾರ್ಯಪಡೆಯನ್ನು ರಚಿಸಲಿದ್ದೇವೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ನೆರವಾಗುವುದು ಈ ಕಾರ್ಯಪಡೆಯ ಉದ್ದೇಶವೇ ಹೊರತು ದಂಡ ವಿಧಿಸುವುದಲ್ಲ.  ಎಸ್‌ಟಿಪಿ ಚಲಾವಣೆಯ ಸ್ಥಿತಿಯಲ್ಲಿಟ್ಟುಕೊಳ್ಳಲು ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆ ಎದುರಾದರೆ ಕಾರ್ಯಪಡೆ ಅವರ ನೆರವಿಗೆ ಧಾವಿಸಲಿದೆ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT