ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ವಿಳಂಬ: ನಿರ್ದಾಕ್ಷಿಣ್ಯ ಕ್ರಮ

ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಪ್ರಗತಿ ಪರಿಶೀಲನೆ ನಡೆಸಿದ ಸಿಇಒ
Last Updated 18 ಮಾರ್ಚ್ 2021, 15:25 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯಿತಿಗಳು ಶೀಘ್ರ ಈ ಕೆಲಸ ಪೂರ್ಣಗೊಳಿಸಬೇಕು. ಒಂದು ತಿಂಗಳ ಒಳಗಾಗಿ ಈ ಸಂಬಂಧ ಸರ್ವೆ, ಜಾಗ ಗುರುತಿಸುವಿಕೆ, ಘಟಕ ನಿರ್ಮಾಣದಲ್ಲಿ ಪ್ರಗತಿ ಆಗಬೇಕು. ಒಂದೊಮ್ಮೆ ಜಾಗದ ಸಮಸ್ಯೆ ಇರುವ ಪಂಚಾಯಿತಿಗಳು ನೆರೆಯ ಗ್ರಾಮ ಪಂಚಾಯಿತಿ ಜೊತೆ ಹೊಂದಾಣಿಕೆಯ ಒಪ್ಪಂದ ಮಾಡಿಕೊಳ್ಳಬೇಕು. ಪಿಡಿಒಗಳು ಸಬೂಬು ಹೇಳಿ, ನಿರ್ಲಕ್ಷ್ಯ ತೋರಿದರೆ, ನೋಟಿಸ್ ಜಾರಿಗೊಳಿಸಲಾಗುತ್ತದೆ’ ಎಂದರು.

‘ಘಟಕ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅನುಮತಿ ಬೇಕಾಗಿಲ್ಲ. ಘಟಕದ 200 ಮೀಟರ್ ಅಂತರದಲ್ಲಿ ಯಾವುದೇ ಮನೆ ಇರಬಾರದು. ಈ ಘಟಕದಲ್ಲಿ ಕೇವಲ ತ್ಯಾಜ್ಯ ಸಂಗ್ರಹಿಸಿ, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರೆ, ಅವರಿಗೆ ವಿಷಯ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಪಿಡಿಒಗಳದ್ದಾಗಿದೆ’ ಎಂದು ಹೇಳಿದರು.

ಸಮನ್ವಯ ಇಲ್ಲ:

‘ಜಲಜೀವನ್ ಮಿಷನ್ ಅಡಿಯಲ್ಲಿ 74 ಕಾಮಗಾರಿಗಳು ಇದ್ದರೂ, ಕೇವಲ ಆರು ಕಾಮಗಾರಿಗಳನ್ನು ಮಾತ್ರ ಅಂತಿಮಗೊಳಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ₹ 3.37 ಕೋಟಿ ಸಂಗ್ರಹವಾಗಿಬೇಕಿತ್ತು. ಆದರೆ, ಕೇವಲ ₹ 25 ಲಕ್ಷ ಸಂಗ್ರಹವಾಗಿದೆ. ಸಮುದಾಯದ ಪಾಲಿನಲ್ಲಿ ₹ 1.73 ಕೋಟಿ ಸಂಗ್ರಹವಾಗಬೇಕಿತ್ತು. ಇದರಲ್ಲಿ ಒಂದು ರೂಪಾಯಿ ಕೂಡ ಸಂಗ್ರಹವಾಗಿಲ್ಲ. ಮಂಗಳೂರು ತಾಲ್ಲೂಕು ಕಳಪೆ ಸಾಧನೆ ತೋರಿದೆ’ ಎಂದು ಆಕ್ಷೇಪಿಸಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡ ಸಿಇಒ, ‘ಸಭೆಗೆ ಬರುವಾಗ ಅಗತ್ಯ ಮಾಹಿತಿ ತಿಳಿದುಕೊಂಡು ಬರಬೇಕು. ಇಲಾಖೆ ಮತ್ತು ಪಿಡಿಒಗಳ ನಡುವಿನ ಸಮನ್ವಯದ ಕೊರತೆಯಿಂದ ಕಾಮಗಾರಿ ಹಿಂದೆ ಬಿದ್ದಿದೆ’ ಎಂದರು. ತಹಶೀಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಜಿ.ನಾಗರಾಜ್ ಇದ್ದರು.

‘ಮಂಗಳೂರು ತಾಲ್ಲೂಕು ಹಿಂದೆ’

ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಲ್ಲಿ ಜಿಲ್ಲೆಯಲ್ಲಿ ಮಂಗಳೂರು ತಾಲ್ಲೂಕು ಹಿಂದುಳಿದಿದೆ. ಇನ್ನೂ 32 ಗ್ರಾಮ ಪಂಚಾಯಿತಿಗಳಲ್ಲಿ ಜಾಗ ಗುರುತಿಸಿ, ಅಂತಿಮಗೊಳಿಸುವ ಕಾರ್ಯ ಆಗಿಲ್ಲ. ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ, ಜಾಗ ನಿಗದಿಪ‍ಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಸಿಇಒ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT