ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು ವೃತ್ತ ಶೀಘ್ರ ಒತ್ತುವರಿ ಮುಕ್ತ: ಈಶ್ವರ ಖಂಡ್ರೆ

ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ * ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಸೂಚನೆ
Published 2 ಜುಲೈ 2024, 15:36 IST
Last Updated 2 ಜುಲೈ 2024, 15:36 IST
ಅಕ್ಷರ ಗಾತ್ರ

ಮಂಗಳೂರು: ‘ಮಂಗಳೂರು ವೃತ್ತವನ್ನು ಶೀಘ್ರವೇ ಒತ್ತುವರಿ ಮುಕ್ತಗೊಳಿಸಲು ಅರಣ್ಯ ಇಲಾಖೆ ಕ್ರಮ ವಹಿಸಿದೆ’ ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿ.ಈಶ್ವರ ಖಂಡ್ರೆ ತಿಳಿಸಿದರು.

ಇಲ್ಲಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೃತ್ತದ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಎಷ್ಟು ಅರಣ್ಯ ಒತ್ತುವರಿಯಾಗಿದೆ. ಕಾನೂನು ರೀತಿ ನೋಟಿಸ್ ಜಾರಿಯಗಿರುವುದೆಷ್ಟು, ವ್ಯಾಜ್ಯಗಳು ಇತ್ಯರ್ಥವಾಗದಿರುವ ಒತ್ತುವರಿಗಳು ಎಷ್ಟು ಎಂಬ ಮಾಹಿತಿ ಕಲೆ ಹಾಕಿ, ಒತ್ತುವರಿ ತೆರವಿಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಜಾರಿಯಲ್ಲಿದ್ದು, ಒತ್ತುವರಿ ತೆರವು ಸಾಧ್ಯವಾಗುತ್ತಿಲ್ಲ. ಅಂತಹ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸಲು ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದರು.

‘ಚಾರಣ ಪಥಗಳಿಗೆ ಇಲಾಖೆಯ ವೆಬ್‌ಸೈಟ್‌ನಲ್ಲೇ  ಟಿಕೆಟ್‌ ಕಾಯ್ದಿರಿಸಲು ಅವಕಾಶ ನೀಡುವ ಸಾಫ್ಟ್‌ವೇರ್ ರೂಪಿಸಲಾಗುತ್ತಿದೆ. ಅರಣ್ಯ ಇಲಾಖೆ ವ್ಯಾಪ್ತಿಯ ಎಲ್ಲ ಚಾರಣ ಪಥಗಳ ವಿವರ ಒಂದೇ ಕಡೆ ಲಭ್ಯವಾಗಲಿದೆ. ನಿರ್ದಿಷ್ಟ ಚಾರಣ ಪಥಕ್ಕೆ ಟಿಕೆಟ್ ಸಿಗದಿದ್ದರೆ ಸಮೀಪದ ಚಾರಣ ಪಥವನ್ನು ಆಯ್ಕೆ ಮಾಡಲು ಅವಕಾಶ ಸಿಗಲಿದೆ. ಮಂಗಳೂರು ವೃತ್ತದ ಎಂಟು ಚಾರಣ ಪಥಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ ಈಗಾಗಲೇ ಇದೆ. ಉಳಿದ  ಚಾರಣ ಪಥಗಳಲ್ಲೂ ಜುಲೈ ಅಂತ್ಯದೊಳಗೆ ಈ ವ್ಯವಸ್ಥೆ ಜಾರಿಯಾಗಲಿದೆ’ ಎಂದು ಮಾಹಿತಿ ನೀಡಿದರು. 

ಚಾರಣಕ್ಕೆ ಸಂಖ್ಯಾಮಿತಿ: ‘ಕೆಲವು ಚಾರಣ ಪಥಗಳಲ್ಲಿ ವಾರಾಂತ್ಯದಲ್ಲಿ ಚಾರಣಿಗರ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಮತ್ತಿತರ ಕಸದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿಯೊಂದು ಚಾರಣ ಪಥದ ವಿಸ್ತಾರ, ಅಲ್ಲಿರುವ ಮಾರ್ಗದರ್ಶಕರ ಸಂಖ್ಯೆ ಮತ್ತು ಲಭ್ಯ ಮೂಲಸೌಕರ್ಯ ‌ ಆಧರಿಸಿ ನಿತ್ಯ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರ ಅವಕಾಶ ನೀಡಲಿದ್ದೇವೆ. ಪ್ರಕೃತಿ–ಪರಿಸರ ಉಳಿಸಲು ಕೆಲವು ಕಠಿಣ ಕ್ರಮ ಅಗತ್ಯ’ ಎಂದರು.

‘ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ  ಭೇಟಿ ನೀಡಿ ಗೊಂದಲ ಉಂಟಾಗಿದ್ದರಿಂದ ಅಲ್ಲಿ ಚಾರಣಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಚಾರಣಕ್ಕೂ ಮುಂದಿನ ಆಗಸ್ಟ್‌ನಲ್ಲಿ ಮರುಚಾಲನೆ ನೀಡಲಾಗುವುದು’ ಎಂದು ತಿಳಿಸಿದರು. 

ಮಂಗಳೂರು ವೃತ್ತದ ಚಾರಣ ತಾಣಗಳು: ಕುದುರೆಮುಖ ಶಿಖರ, ನೆತ್ರಾವತಿ ಶಿಖರ, ಕೊಡಚಾದ್ರಿ ಶಿಖರ, ಕುರಿಂಜಾಲ್ ಶಿಖರ, ಗಂಗಡಿಕಲ್ಲು ಶಿಖರ, ವಾಲಿಕುಂಜ, ನರಸಿಂಹ ಪರ್ವತ (ಮಲಂದೂರು), ನರಸಿಂಹ ಪರ್ವತ (ಕಿಗ್ಗ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT