ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಕಲ್ಮಕಾರಿನ 8 ಕುಟುಂಬಗಳಿಗೆ ಪರ್ಯಾಯ ಜಮೀನು: ಜಿಲ್ಲಾಧಿಕಾರಿ

ದ.ಕ: ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳನ್ನು ಗುರುತಿಸಲು ಜಿಲ್ಲಾಡಳಿತ ಸೂಚನೆ
Last Updated 12 ಆಗಸ್ಟ್ 2022, 9:28 IST
ಅಕ್ಷರ ಗಾತ್ರ

ಮಂಗಳೂರು: ‘ಕಲ್ಮಕಾರಿನಲ್ಲಿ ಭೂಕುಸಿತದಿಂದ ಅಪಾಯ ಎದುರಿಸುತ್ತಿರುವ ಎಂಟು ಕುಟುಂಬಗಳನ್ನು ಮುಂದಿನ ಮುಂಗಾರಿನ ಒಳಗೆ ಸ್ಥಳಾಂತರಿಸಲಾಗುವುದು. ಈ ಕುಟುಂಬಗಳಿಗೆ ಪರ್ಯಾಯ ಜಮೀನು ನೀಡಲಿದ್ದೇವೆ. ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ ಅವರು, ‘ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗಣೇಶನಗರದಲ್ಲೂ ಕೆಲವು ಮನೆಗಳು ಭೂಕುಸಿತದ ಅಪಾಯವನ್ನೆದುರಿಸುತ್ತಿವೆ. ಈ ಕುಟುಂಬಗಳು ಮನೆ ಕಟ್ಟಿಕೊಳ್ಳುವುದಕ್ಕೆ ಪರ್ಯಾಯ ಜಮೀನು ನೀಡಲು ಜಾಗ ಗುರುತಿಸುವಂತೆ ಅಲ್ಲಿನ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದ್ದೇವೆ’ ಎಂದರು.

‘ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಹಾಗೂ ಕಲ್ಮಕಾರುವಿನಲ್ಲಿ ಇತ್ತೀಚೆಗೆ ನಡೆದ ಭೂಕುಸಿತದ ಬಗ್ಗೆ ಅಧ್ಯಯನ ನಡೆಸುವಂತೆ ಸುರತ್ಕಲ್‌ ಎನ್‌ಐಟಿಕೆ, ಕರ್ನಾಟಕ ಪ್ರಾಕೃತಿಕ ವಿಕೋಪ ನಿಗಾ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಹಾಗೂ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗಳ (ಜಿಎಸ್‌ಐ) ತಜ್ಞರನ್ನು ಕೋರಿದ್ದೇವೆ’ ಎಂದರು.

‘ಜಿಲ್ಲೆಯಲ್ಲಿ ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳನ್ನು ಗುರುತಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಮತ್ತುಗ್ರಾಮ ಲೆಕ್ಕಿಗರಿಗೆ ನಿರ್ದೇಶನ ನೀಡಿದ್ದೇನೆ. ಗುಡ್ಡವನ್ನು3 ಅಡಿಗಳಿಗಿಂತ ಎತ್ತರ ಅಥವಾ 1 ಮೀಟರ್‌ಗಿಂತ ಹೆಚ್ಚು ಎತ್ತರಕ್ಕೆ ಕಡಿದು ನೆಲವನ್ನು ಸಮತಟ್ಟುಗೊಳಿಸುವುದಕ್ಕೆ ಕಂದಾಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದೂ ಸೂಚನೆ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

‘1857ರಲ್ಲಿ ನಡೆದ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ 1837ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಕೆದಂಬಾಡಿ ರಾಮೇಗೌಡ ಅವರ ಕಂಚಿನ ಪ್ರತಿಮೆಯನ್ನು ಬಾವುಟ ಗುಡ್ಡೆಯ ಟ್ಯಾಗೋರ್‌ ಉದ್ಯಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾಲುಸಂಕ ಗುರುತಿಸಲು ಸೂಚನೆ: ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಬಾಲಕಿಯೊಬ್ಬಳು ಮರದ ದಿಮ್ಮಿಯಿಂದ ನಿರ್ಮಿಸಿದ್ದ ಕಾಲುಸಂಕದಲ್ಲಿ ಸಾಗುವಾಗ ಆಯತಪ್ಪಿ ತೋಡಿಗೆ ಬಿದ್ದು ಕೊಚ್ಚಿ ಹೋದ ಘಟನೆಯ ಬೆನ್ನಲ್ಲೇ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮರದ ದಿಮ್ಮಿಯಿಂದ ನಿರ್ಮಿಸಿರುವ ಕಾಲುಸಂಕಗಳ ಮೂಲಕ ತೋಡು ದಾಟುವ ಪರಿಸ್ಥಿತಿ ಇದ್ದರೆ ಗುರುತಿಸಬೇಕು ಎಂದು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.

‘ಮರದ ದಿಮ್ಮಿಯಿಂದ ನಿರ್ಮಿಸಿರುವ ಕಾಲು ಸಂಕಗಳನ್ನು ಶಾಲೆಗೆ ಹೋಗುವ ಮಕ್ಕಳು ಬಳಸುತ್ತಿದ್ದರೆ, ಅವುಗಳನ್ನು ಆದ್ಯತೆ ಮೇರೆಗೆ ಗುರುತಿಸಿ ಆ.16ರ ಒಳಗೆ ವರದಿ ಸಲ್ಲಿಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT